ಮಡಿಕೇರಿ, ಫೆ. 20: ಕೊಡಗು ಪ್ರೆಸ್ ಕ್ಲಬ್ ಡೇ ಪ್ರಯುಕ್ತ ಮಾರ್ಚ್ 22 ರಂದು ಫೀಲ್ಡ್ ಮಾರ್ಷಲ್ ಕೆ.ಎಂ. ಕಾರ್ಯಪ್ಪ ಕಾಲೇಜು ಮೈದಾನದಲ್ಲಿ ಕೊಡಗು ಪ್ರೆಸ್ ಕ್ಲಬ್ ಸದಸ್ಯರಿಗೆ ಐಪಿಎಲ್ ಮಾದರಿ ಕ್ರಿಕೆಟ್ ಪಂದ್ಯಾವಳಿ ಆಯೋಜಿಸಲಾಗಿದೆ. ಪ್ರಥಮ ಬಾರಿಗೆ ಹೆಚ್ಚು ತಂಡಗಳು ಹಾಗೂ 87 ಪತ್ರಕರ್ತರು ಕ್ರಿಕೆಟ್ ಪಂದ್ಯಾವಳಿಯಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ಪ್ರೆಸ್ ಕ್ಲಬ್ ಪ್ರಧಾನ ಕಾರ್ಯದರ್ಶಿ ಆರ್. ಸುಬ್ರಮಣಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಕ್ಲಬ್ ಸದಸ್ಯರಾಗಿರುವ 7 ಪತ್ರಕರ್ತರು 7 ತಂಡದ ಫ್ರಾಂಚೈಸಿ ತೆಗೆದುಕೊಂಡಿದ್ದಾರೆ. ಎಎನ್‍ಐ ವರದಿಗಾರ ಚೀಯಂಡಿ ತೇಜಸ್ ಪಾಪಯ್ಯ ಮಾಲೀಕತ್ವದ ಸುವರ್ಣ ವಾಹಿನಿ ಕ್ಯಾಮರಮೆನ್ ಸುವರ್ಣ ಮಂಜು ನಾಯಕತ್ವದ ಕೂರ್ಗ್ ಮೌಂಟ್ ಲಯನ್, ಕೊಡಗುಧ್ವನಿ ವಾರಪತ್ರಿಕೆ ಸಂಪಾದಕ ಎಚ್.ಕೆ. ಜಗದೀಶ್ ಮಾಲೀಕತ್ವದ ಪ್ರಜಾವಾಣಿ ಜಿಲ್ಲಾ ವರದಿಗಾರ ಕೆ.ಎ. ಆದಿತ್ಯ ನಾಯಕತ್ವದ ರೈಸಿಂಗ್ ಸ್ಟಾರ್ಸ್, ಚಿತ್ತಾರ ವಾಹಿನಿ ಸಂಪಾದಕಿ ಬಿ.ಆರ್. ಸವಿತಾ ರೈ ಮಾಲೀಕತ್ವದ ಶಕ್ತಿಯ ಸೋಮವಾರಪೇಟೆ ವರದಿಗಾರ ವಿಜಯ ಹಾನಗಲ್ ನಾಯಕತ್ವದ ಚಿತ್ತಾರ ಟೈಗರ್ಸ್ ತಂಡ ಪಂದ್ಯಾವಳಿಯಲ್ಲಿ ಭಾಗವಹಿಸಲಿದೆ.

ವಿಜಯವಾಣಿ ವರದಿಗಾರ ಎಂ.ಎ. ಅಜೀಜ್ ಮಾಲೀಕತ್ವದ ವಾರ್ತಾಭಾರತಿ ವರದಿಗಾರ ಎ.ಎಸ್. ಮುಸ್ತಾಫ ನಾಯಕತ್ವದ ಫೈಯರ್ ಬಾಲ್, ವಿಶ್ವವಾಣಿ ವರದಿಗಾರ ಬಿ.ಎಸ್. ಲೋಕೇಶ್ ಸಾಗರ್ ಮಾಲೀಕತ್ವದ ಕನ್ನಡಪ್ರಭಾ ವರದಿಗಾರ ಎಸ್.ಎ. ಮುರಳೀಧರ್ ನಾಯಕತ್ವದ ಕಾವೇರಿ ಮಕ್ಕಳು, ಪ್ರಜಾವಾಣಿ ವರದಿಗಾರ ರೆಜಿತ್‍ಕುಮಾರ್ ಗುಹ್ಯ ಮಾಲೀಕತ್ವದ ಕಸ್ತೂರಿ ವಾಹಿನಿ ವರದಿಗಾರ ಪ್ರೇಮ್‍ಕುಮಾರ್ ನಾಯಕತ್ವದ ಅಗ್ನಿ, ಕನ್ನಡಪ್ರಭಾ ವರದಿಗಾರ ಟಿ.ಎನ್. ಮಂಜುನಾಥ್ ಮಾಲೀಕತ್ವದ ವಿಜಯವಾಣಿ ವರದಿಗಾರ ಪಳೆಯಂಡ ಪಾರ್ಥ ಚಿಣ್ಣಪ್ಪ ನಾಯಕತ್ವದ ಟೀಮ್ ವೀವರ್ಸ್ ತಂಡಗಳು ಪಾಲ್ಗೊಳ್ಳಲಿವೆ.

ಆಟಗಾರರ ಬಿಡ್ಡಿಂಗ್

ಕ್ರಿಕೆಟ್ ಪಂದ್ಯಾವಳಿಯಲ್ಲಿ ಪಾಲ್ಗೊಳ್ಳಲು ಹೆಸರು ನೋಂದಾಯಿಸಿಕೊಂಡಿರುವ ಕೊಡಗು ಪ್ರೆಸ್ ಕ್ಲಬ್ ಸದಸ್ಯರಾಗಿರುವ 87 ಆಟಗಾರರ ಬಿಡ್ಡಿಂಗ್ ತಾ. 25 ರಂದು ಮಧ್ಯಾಹ್ನ 2 ಗಂಟೆಗೆ ಪತ್ರಿಕಾ ಭವನದಲ್ಲಿ ನಡೆಯಲಿದೆ. ಪ್ರಥಮ ಸ್ಥಾನ ಪಡೆಯುವ ತಂಡದ ಮಾಲೀಕರಿಗೆ 50 ಸಾವಿರ ಹಾಗೂ ದ್ವಿತೀಯ ಸ್ಥಾನ ಪಡೆಯುವ ತಂಡದ ಮಾಲೀಕರಿಗೆ 40 ಸಾವಿರ ರೂ. ನಗದು ಬಹುಮಾನ ನೀಡಲಾಗುತ್ತದೆ. ಪ್ರಥಮ ಸ್ಥಾನ ಪಡೆಯುವ ತಂಡದ ಆಟಗಾರರಿಗೆ ವೈಯುಕ್ತಿಕವಾಗಿ 500 ರೂ., ದ್ವಿತೀಯ ಸ್ಥಾನ ಪಡೆಯುವ ತಂಡಕ್ಕೆ 300 ರೂ. ನಗದು ಬಹುಮಾನ ನೀಡಲಾಗುತ್ತದೆ. ವಿಜೇತ ತಂಡ, ರನ್ನರ್ ತಂಡಕ್ಕೆ ಟ್ರೋಫಿ ಹಾಗೂ ಆಟಗಾರರಿಗೆ ವೈಯಕ್ತಿಕ ಟ್ರೋಫಿ ನೀಡಲಾಗುತ್ತದೆ. ಪಂದ್ಯಾವಳಿಯಲ್ಲಿ ಅತ್ಯುತ್ತಮ ಆಟ ಪ್ರದರ್ಶನ ನೀಡುವ ಆಟಗಾರರಿಗೆ ವೈಯಕ್ತಿಕ ಬಹುಮಾನ ನೀಡಲಾಗುತ್ತದೆ.