ಕುಶಾಲನಗರ, ಫೆ. 20: ಕುಶಾಲನಗರದ ಮಹಾಶಿವರಾತ್ರಿ ಆಚರಣಾ ಸಮಿತಿ ವತಿಯಿಂದ ತಾ. 21 ರಂದು ಶಿವರಾತ್ರಿಯಂದು ರಾಜ್ಯಮಟ್ಟದ ಶಾಸ್ತ್ರೀಯ ನೃತ್ಯ ಸರ್ಧಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಸಮಿತಿ ಪ್ರಮುಖರಾದ ಕೆ.ಎನ್. ದೇವರಾಜ್ ತಿಳಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಮಿತಿ ವತಿಯಿಂದ ಕಳೆದ 3 ವರ್ಷಗಳಿಂದ ಕುಶಾಲನಗರದಲ್ಲಿ ಮಹಾಶಿವರಾತ್ರಿ ಕಾರ್ಯಕ್ರಮ ಹಮ್ಮಿಕೊಂಡು ಬರಲಾಗುತ್ತಿದೆ. ಈ ವರ್ಷ ಕೂಡ ಲಿಂಗರೂಪಿ ಪರಶಿವನಿಗೆ ಗಂಗಾ ಕಾವೇರಿ ಜಲಾಭಿಷೇಕ, ಬಿಲ್ವಾರ್ಚನೆ ಮೂಲಕ ಪೂಜಿಸಲಾಗುವುದು. ಸಂಜೆ ಮಹಾಗಣಪತಿ ದೇವಸ್ಥಾನದ ನೃತ್ಯೋತ್ಸವ ಸ್ಥಳದಲ್ಲಿ ರಾಜ್ಯಮಟ್ಟದ ಶಾಸ್ತ್ರೀಯ ನೃತ್ಯ ಪ್ರಕಾರಗಳ ಸ್ಪರ್ಧೆಯನ್ನು ಸಂಜೆ 6 ರಿಂದ ರಾತ್ರಿ 1 ಗಂಟೆವರೆಗೆ ಹಮ್ಮಿಕೊಳ್ಳಲಾಗಿದೆ. ವಿಜೇತರಿಗೆ ಪ್ರಥಮ ಬಹುಮಾನವಾಗಿ ರೂ. 15 ಸಾವಿರ ನಗದು, ದ್ವಿತೀಯ ಬಹುಮಾನ 10 ಸಾವಿರ, ತೃತೀಯ ಬಹುಮಾನ ರೂ. 7500 ಹಾಗೂ 2 ಸಾವಿರ ಮೊತ್ತದ ಎರಡು ಸಮಾಧಾನಕರ ಬಹುಮಾನ ಜೊತೆಗೆ ಟ್ರೋಫಿಗಳು, ಪ್ರಮಾಣ ಪತ್ರ ನೀಡಲಾಗುವುದು ಎಂದು ತಿಳಿಸಿದರು.
ಸಮಿತಿ ಪ್ರಮುಖ ಡಿ.ವಿ. ರಾಜೇಶ್ ಮಾತನಾಡಿ, ರಾಜ್ಯದ ವಿವಿಧ ಜಿಲ್ಲೆಗಳಿಂದ 15 ಕ್ಕೂ ಹೆಚ್ಚು ನೃತ್ಯ ತಂಡಗಳು ಸ್ಪರ್ಧೆಯಲ್ಲಿ ಪಾಲ್ಗೊಳ್ಳಲಿವೆ ಎಂದರು.
ಗೋಷ್ಠಿಯಲ್ಲಿ ಸಮಿತಿಯ ಪ್ರಮುಖ ಕೆ.ಎಸ್. ನಾಗೇಶ್ ಇದ್ದರು.