ಮಡಿಕೇರಿ, ಫೆ. 20: ಜಿಲ್ಲೆಯ ಜಿಲ್ಲಾಸ್ಪತ್ರೆ, ತಾಲೂಕು ಆಸ್ಪತ್ರೆ ಮತ್ತು ಸಮುದಾಯ ಆಸ್ಪತ್ರೆಗಳಲ್ಲಿನ ವೈದ್ಯಕೀಯ ತ್ಯಾಜ್ಯವನ್ನು ವಾರದಲ್ಲಿ ಕನಿಷ್ಟ ಮೂರು ಬಾರಿಯಾದರೂ ವಿಲೇವಾರಿ ಮಾಡುವಂತೆ ಸಂಬಂಧಪಟ್ಟ ಸಂಸ್ಥೆಗಳಿಗೆ ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ.
ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ವೈದ್ಯಕೀಯ ತ್ಯಾಜ್ಯ ನಿರ್ವಹಣೆ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ವೈದ್ಯಕೀಯ ತ್ಯಾಜ್ಯ ನಿರ್ವಹಣೆ ಸಂಬಂಧಿಸಿದಂತೆ ಶ್ರೀ ಕನ್ಸಲ್‍ಟೆಂಟ್ ಸಂಸ್ಥೆ, ರಾಮ್‍ಕೀ ಮತ್ತಿತರ ಸಂಸ್ಥೆಗಳು ವಾರದಲ್ಲಿ ಕನಿಷ್ಟ ಮೂರು ಬಾರಿಯಾದರೂ ಆಸ್ಪತ್ರೆಗಳಿಗೆ ತೆರಳಿ ವೈದ್ಯಕೀಯ ತ್ಯಾಜ್ಯವನ್ನು ಸಮರ್ಪಕವಾಗಿ ವಿಲೇವಾರಿ ಮಾಡಬೇಕು ಎಂದರು.
ಶ್ರೀ ಕನ್ಸಲ್‍ಟೆಂಟ್ ಸಂಸ್ಥೆಯವರು ವೈದ್ಯಕೀಯ ತ್ಯಾಜ್ಯವನ್ನು ಸಮರ್ಪಕವಾಗಿ ನಿರ್ವಹಣೆ ಮಾಡುತ್ತಿಲ್ಲ ಎಂಬ ಬಗ್ಗೆ ದೂರುಗಳು ಕೇಳಿ ಬರುತ್ತಿದ್ದು, ವೈದ್ಯಕೀಯ ತ್ಯಾಜ್ಯವನ್ನು ಸಮರ್ಪಕವಾಗಿ ನಿರ್ವಹಣೆ ಮಾಡಬೇಕು. ಈ ಸಂಬಂಧ ಮೂರು ತಿಂಗಳ ಕಾಲಾವಕಾಶ ನೀಡಲಾಗುವುದು. ಸುಧಾರಣೆ ಮಾಡಿಕೊಳ್ಳದಿದ್ದಲ್ಲಿ ಕಪ್ಪುಪಟ್ಟಿಗೆ ಸೇರಿಸಬೇಕಾಗುತ್ತದೆ ಎಂದು ಜಿಲ್ಲಾಧಿಕಾರಿ ಎಚ್ಚರಿಕೆ ನೀಡಿದರು.
ಆಸ್ಪತ್ರೆಯ ವೈದ್ಯಕೀಯ ತ್ಯಾಜ್ಯ ವಿಲೇವಾರಿ ಸಂಬಂಧಿಸಿದಂತೆ ಸಮರ್ಪಕವಾಗಿ ನಿರ್ವಹಣೆ ಮಾಡದಿದ್ದಲ್ಲಿ ಮೂರು ತಿಂಗಳಿಗೊಮ್ಮೆ ನಡೆಯುವ ಸಮಿತಿ ಸಭೆಯ ಗಮನಕ್ಕೆ ತರಬೇಕು. ಇಲ್ಲದಿದ್ದಲ್ಲಿ ಸಂಬಂಧಪಟ್ಟ ವೈದ್ಯಾಧಿಕಾರಿಗಳನ್ನೇ ಹೊಣೆಗಾರರನ್ನಾಗಿ ಮಾಡಬೇಕಾಗುತ್ತದೆ ಎಂದು ಜಿಲ್ಲಾಧಿಕಾರಿ ಎಚ್ಚರಿಸಿದರು.
ಸೋಮವಾರಪೇಟೆ ತಾಲೂಕು ವೈದ್ಯಾಧಿಕಾರಿ ಶಿವಪ್ರಸಾದ್ ಅವರು ವಾರಕ್ಕೆ ಎರಡು ಬಾರಿ ಬಂದು ತ್ಯಾಜ್ಯವನ್ನು ವಿಲೇವಾರಿ ಮಾಡುತ್ತಾರೆ ಎಂದು ಮಾಹಿತಿ ನೀಡಿದರು. ವೀರಾಜಪೇಟೆ ತಾಲೂಕು ವೈದ್ಯಾಧಿಕಾರಿ ಶಿಂಪಿ ಅವರು ವಾರಕ್ಕೆ ಒಂದು ಬಾರಿ ಮಾತ್ರ ಆಗಮಿಸಿ ತ್ಯಾಜ್ಯವನ್ನು ವಿಲೇವಾರಿ ಮಾಡುತ್ತಾರೆ ಎಂದು ಮಾಹಿತಿ ನೀಡಿದರು. ಈ ಸಂಬಂಧ ಶ್ರೀ ಕನ್ಸಲ್‍ಟೆಂಟ್ ಸಂಸ್ಥೆಯ ಪ್ರತಿನಿಧಿಯವರು ಸರಿಯಾಗಿ ಹಣ ಪಾವತಿಯಾಗುತ್ತಿಲ್ಲ ಎಂದು ದೂರಿದರು. ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಕೆ. ಮೋಹನ್, ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ಉಪ ಪರಿಸರ ಅಧಿಕಾರಿ ಡಾ. ಎಂ.ಕೆ. ಸುಧಾ, ಡಾ. ಆನಂದ್, ಡಾ. ಲೋಕೇಶ್, ಡಾ. ಕೃಷ್ಣಾನಂದ, ಡಾ. ಯತಿರಾಜು, ಡಾ. ಚೇತನ್, ಪೌರಾಯುಕ್ತ ಎಂ.ಎಲ್. ರಮೇಶ್, ಪಶುಪಾಲನಾ ಇಲಾಖೆಯ ಉಪ ನಿರ್ದೇಶಕ ತಮ್ಮಯ್ಯ, ವಿವಿಧ ಸಂಸ್ಥೆಯ ಪ್ರತಿನಿಧಿಗಳು ಇದ್ದರು.