ಮಡಿಕೇರಿ, ಫೆ.19 : ಕೊಡಗು ಜಿಲ್ಲಾ ವಕ್ಫ್ ಸಲಹಾ ಸಮಿತಿಯ ನೂತನ ಅಧ್ಯಕ್ಷರ ಆಯ್ಕೆ ಪ್ರಕ್ರಿಯೆಗೆ ನ್ಯಾಯಾಲಯ ತಡೆಯಾಜ್ಞೆ ನೀಡಿದ್ದು, ಹಳೆಯ ಆಡಳಿತ ಮಂಡಳಿಯೇ ಮುಂದುವರೆಯುವಂತೆ ರಾಜ್ಯ ವಕ್ಫ್ ಮಂಡಳಿ ಆದೇಶ ನೀಡಿರುವ ಹಿನ್ನೆಲೆ ಈ ಹಿಂದಿನ ಅಧ್ಯಕ್ಷರಾದ ಕೆ.ಎ.ಯಾಕುಬ್ ಅವರು ಇಂದು ನಗರದ ವಕ್ಫ್ ಕಚೇರಿಯಲ್ಲಿ ಅಧಿಕಾರ ಸ್ವೀಕರಿಸಿದರು.

ಈ ಸಂದರ್ಭ ಮಾತನಾಡಿದ ಯಾಕುಬ್ ಅವರು, 2020 ಜ.22 ರಂದು ರಾಜ್ಯ ಸಮಿತಿಗೆ ನೂತನ ಅಧ್ಯಕ್ಷರ ಆಯ್ಕೆಯ ಚುನಾವಣೆ ಪ್ರಕ್ರಿಯೆಯನ್ನು ನಿಗದಿಪಡಿಸಲಾಗಿತ್ತು. ಈ ಹಿನ್ನೆಲೆಯಲ್ಲಿ ಸರ್ಕಾರದ ಒತ್ತಡಕ್ಕೆ ಮಣಿದ ಆಡಳಿತಾಧಿಕಾರಿ ಜ.21 ರಂದು ರಾತ್ರಿ ರಾಜ್ಯದ 25 ಜಿಲ್ಲೆಗಳಿಗೆ ನೂತನ ಅಧ್ಯಕ್ಷರುಗಳನ್ನು ಆಯ್ಕೆ ಮಾಡಿ ಆದೇಶ ಹೊರಡಿಸಿದ್ದರು. ಆದರೆ ಈ ಆಯ್ಕೆ ಪ್ರಕ್ರಿಯೆ ವಕ್ಫ್ ನಿಯಮಕ್ಕೆ ವಿರುದ್ಧವಾಗಿದೆ ಎಂದು ನ್ಯಾಯಾಲಯದ ಮೆಟ್ಟಿಲೇರಿದ ಕಾರಣ ನೂತನ ಆಯ್ಕೆ ಪ್ರಕ್ರಿಯೆಗೆ ತಡೆಯಜ್ಞೆ ದೊರೆತಿದೆ ಎಂದರು.

ರಾಜ್ಯ ವಕ್ಫ್ ಮಂಡಳಿಯ ಅಧ್ಯಕ್ಷ ಡಾ.ಮಹಮ್ಮದ್ ಯೂಸುಫ್ ಅವರ ಅಧ್ಯಕ್ಷತೆಯಲ್ಲಿ ತಾ.15 ರಂದು ನಡೆದ ಸಾಮಾನ್ಯ ಸಭೆಯಲ್ಲಿ ಹಳೆಯ ಸಮಿತಿಗಳೆ ಮುಂದುವರೆಯುವಂತೆ ಆದೇಶಿಸಿದ ಹಿನ್ನೆಲೆ ಇಂದು ತಾವು ವಕ್ಫ್ ಸಲಹಾ ಸಮಿತಿಯ ಜಿಲ್ಲಾಧ್ಯಕ್ಷರಾಗಿ ಮತ್ತೊಮ್ಮೆ ಅಧಿಕಾರ ಸ್ವೀಕರಿಸಿರುವುದಾಗಿ ಸ್ಪಷ್ಟಪಡಿಸಿದರು.

ಸಮಿತಿಯ ಸದಸ್ಯ ಸಿ.ಎಂ.ಅಬ್ದುಲ್ ಹಮೀದ್ ಮೌಲವಿ ಪ್ರಾರ್ಥಿಸಿದರು. ಸಮಿತಿಯ ಸದಸ್ಯರುಗಳಾದ ಮಹಮ್ಮದ್ ಹಾಜಿ ಕುಂಜಿಲ, ಮೊಯ್ದು ಬೆಟ್ಟಗೇರಿ, ಸುಕುರ್ ಸಿದ್ದಾಪುರ, ಮಹಮ್ಮದ್ ಶರೀಫ್ ಸುಂಟಿಕೊಪ್ಪ, ಸುಂಟಿಕೊಪ್ಪ ಜಮಾಯತ್‍ನ ಹಸನ್ ಕುಂಞ ಹಾಜಿ, ಕಾರ್ಯದರ್ಶಿ ಮಹಮ್ಮದ್ ಮತ್ತಿತರರು ಹಾಜರಿದ್ದರು.