ಮೈಸೂರು,ಫೆ. 20: ಮೈಸೂರು-ಕುಶಾಲನಗರ 4 ಪಥ ಹೆದ್ದಾರಿ ರಸ್ತೆ ಕಾಮಗಾರಿಗಾಗಿ ಭೂ ಸ್ವಾಧೀನ ಕಾರ್ಯ ನಡೆಯುತ್ತಿದೆ ಎಂದು ಸಂಸದ ಪ್ರತಾಪ್ ಸಿಂಹ ಹೇಳಿದರು.ನಗರದ ಪತ್ರಕರ್ತರ ಭವನದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಬೆಂಗಳೂರಿನಿಂದ ದ.ಕ. ಜಿಲ್ಲೆಯ ಬಂಟ್ಟಾಳಗಳ ನಡುವಿನ 374ಕಿ.ಮೀ. ರಸ್ತೆಯನ್ನು ಕೇಂದ್ರ ಸರ್ಕಾರ ರಾಷ್ಟ್ರೀಯ ಹೆದ್ದಾರಿ ಸಂಖ್ಯೆ 275 ಎಂದು 2014ರಲ್ಲಿಯೇ ಘೋಷಿಸಿದ್ದು, ಇವೆರಡೂ ನಗರಗಳಿಗೆ ಸಂಚರಿಸುವ ಸಾರ್ವಜನಿಕರಿಗೆ ಹೆಚ್ಚಿನ ಅನುಕೂಲ ಕಲ್ಪಿಸುವ ದಿಸೆಯಲ್ಲಿ ಮೈಸೂರಿನಿಂದ ಕುಶಾಲನಗರದವರೆಗೆ(ಮೈಸೂರು ನಗರಕ್ಕೆ ಪ್ರವೇಶಿಸದಂತೆ) ಹೊಸ ರಸ್ತೆಯನ್ನು ನಿರ್ಮಿಸಲಾಗುವುದು ಎಂದು ಹೇಳಿದರು.ಈ ಹೊಸ ರಸ್ತೆಯು 2022ಅಂತ್ಯದ ವೇಳೆಗೆ ಪೂರ್ಣಗೊಳ್ಳುವುದೆಂದರು. ಈ ಹೊಸ ರಸ್ತೆ ನಿರ್ಮಾಣಗೊಂಡ ನಂತರ ಬೆಂಗಳೂರಿನಿಂದ ಮಡಿಕೇರಿಗೆ 5 ಗಂಟೆಗಳು ಸಾಕಾಗುತ್ತದೆ. ಹಾಲಿ ಈ ಎರಡೂ ನಗರಗಳ ಪ್ರಯಾಣ ಅವಧಿ 7 ಗಂಟೆಗಳಿಗೂ ಹೆಚ್ಚು ಇದೆ. ರಸ್ತೆ ನಿರ್ಮಾಣಗೊಳ್ಳುವುದರಿಂದ ವಾಯು ಮಾಲಿನ್ಯ, ಶಬ್ಧ ಮಾಲಿನ್ಯ ಕಡಿಮೆಯಾಗುವ ಸಂಭವ ಹೆಚ್ಚಾಗಿದೆ ಎಂದು ತಿಳಿಸಿದರು.ಈ ಹೊಸ ಹೆದ್ದಾರಿಯಲ್ಲಿ ಬರುವ ಶ್ರೀರಂಗಪಟ್ಟಣ, ಮಂಡ್ಯ, ಮದ್ದೂರು, ಚನ್ನಪಟ್ಟಣ, ರಾಮನಗರ, ಬಿಡದಿಗಳಲ್ಲಿ ಬೈಪಾಸ್‍ಗಳನ್ನು ನಿರ್ಮಿಸಲಾಗುವುದು. ಈ ಬೃಹತ್ ಕಾಮಗಾರಿಯನ್ನು ನಿರ್ಮಿಸಲು ಮಧ್ಯಪ್ರದೇಶದ ಮೆ|| ದಿಲೀಪ್ ಬಿಲ್ಡ್ ಕಾನ ಲಿಮಿಟೆಡ್ ಇವರೊಂದಿಗೆ ಒಪ್ಪಂದÀ ಮಾಡಿಕೊಳ್ಳಲಾಗಿದೆ ಎಂದು ಸಂಸದರು ಹೇಳಿದರು.