ಮಡಿಕೇರಿ, ಫೆ. 20: ಭಾರತಕ್ಕೆ ಸ್ವಾತಂತ್ರ್ಯ ಲಭಿಸಿ ಎಪ್ಪತ್ತು ವರ್ಷ ಕಳೆದರೂ, ಕೊಡಗಿನಂತಹ ಪುಟ್ಟ ಜಿಲ್ಲೆಯ ಹಾಡಿಗಳಲ್ಲಿ ವಾಸ ಮಾಡುತ್ತಿರುವ ಆದಿವಾಸಿಗಳಿಗೆ ಇಂದಿಗೂ ಮೂಲಭೂತ ಸೌಲಭ್ಯ ಲಭಿಸಿಲ್ಲ. ಈಗಲಾದರೂ ಅಧಿಕಾರಿಗಳ ಕಪಿಮುಷ್ಠಿಯಿಂದ ಶೋಷಣೆ ಮುಕ್ತಗೊಳಿಸಿ ಸೌಲಭ್ಯಗಳನ್ನು ದೊರಕಿಸಿಕೊಡಿ ಎಂದು ಶೋಷಿತ ವರ್ಗದ ಜನಪ್ರತಿನಿಧಿಗಳು ಜಿ.ಪಂ. ಅಧ್ಯಕ್ಷರನ್ನು ಒತ್ತಾಯಿಸಿದರು.ನಿನ್ನೆ ನಡೆದ ಜಿ.ಪಂ. ಸಭೆಯಲ್ಲಿ ಅಳಲು ತೋಡಿಕೊಂಡ ಸದಸ್ಯರುಗಳಾದ ಪಿ.ಆರ್. ಪಂಕಜ, ಕೆ.ಕೆ. ಕುಮಾರ್, ಕೆ.ಆರ್. ಮಂಜುಳ, ಎಂ.ಬಿ. ಸುನಿತಾ ಅವರುಗಳು ಇಂದಿಗೂ ಜಿಲ್ಲೆಯ ಪರಿಶಿಷ್ಟ ಜನಾಂಗದ ಕಾಲೋನಿಗಳು ಮತ್ತು ಗಿರಿಜನ ಹಾಡಿಗಳಲ್ಲಿ ಮೂಲಭೂತ ಸೌಕರ್ಯ ದೊರಕದೆ ಪ್ಲಾಸ್ಟಿಕ್ ಹೊದಿಕೆಗಳ ಬಿಡಾರಗಳಲ್ಲಿ ಬದುಕು ಕಂಡುಕೊಂಡಿದ್ದಾರೆ ಎಂದು ಬೊಟ್ಟು ಮಾಡಿದರು.ಆದಿವಾಸಿ ಜನಾಂಗದ ಸುಮಾರು ಐವತ್ತು ಉಪಜಾತಿಗಳಿದ್ದು, ಒಂದೆರಡು ವರ್ಗಕ್ಕೆ ಹೊರತು ಎಲ್ಲರಿಗೆ ಸರಕಾರದ ಸೌಲಭ್ಯಗಳು ದೊರಕುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಪ್ರತಿ ಗ್ರಾ.ಪಂ. ವ್ಯಾಪ್ತಿಯಲ್ಲಿ ಜನಪ್ರತಿನಿಧಿಗಳನ್ನು ಒಳಗೊಂಡ ಅರಣ್ಯ ಹಕ್ಕು ಸಮಿತಿ ಇದ್ದರೂ ಇಲಾಖೆಗಳು ಮುಗ್ದ ಜನತೆಗೆ
(ಮೊದಲ ಪುಟದಿಂದ) ವಂಚಿಸುತ್ತಿರುವುದಾಗಿ ಗಂಭೀರ ಆರೋಪ ಮಾಡಿದರು.
ದುರ್ಬಳಕೆ ಆರೋಪ: ಕೇಂದ್ರ ಮತ್ತು ರಾಜ್ಯ ಸರಕಾರಗಳು ಪರಿಶಿಷ್ಟ ವರ್ಗ ಮತ್ತು ಪರಿಶಿಷ್ಟ ಜನಾಂಗದ ಕಲ್ಯಾಣಕ್ಕಾಗಿ ಹೆಚ್ಚಿನ ಅನುದಾನದೊಂದಿಗೆ, ಅನೇಕ ಯೋಜನೆಗಳನ್ನು ಜಾರಿಗೊಳಿಸಿದ್ದರೂ ಕೂಡ, ಸಂಬಂಧಿಸಿದ ಅಧಿಕಾರಿಗಳ ಮಲತಾಯಿ ಧೋರಣೆಯಿಂದ ಜನತೆಗೆ ಸೌಲಭ್ಯ ದೊರಕದಂತಾಗಿದೆ ಎಂದು ಸದಸ್ಯರು ಟೀಕಿಸಿದರು.
ಕಾಡುಪಾಲು: ಕೋಣನಕಟ್ಟೆ ಪ್ರಾಥಮಿಕ ಆರೋಗ್ಯ ಕೇಂದ್ರ ಹಾಗೂ ಪಶು ಚಿಕಿತ್ಸಾಲಯ ನಿರ್ವಹಣೆಯಿಲ್ಲದೆ ಕಾಡು ಪಾಲಾಗಿದೆ ಎಂದು ಬೊಟ್ಟು ಮಾಡಿದ ಸದಸ್ಯೆ ಪಂಕಜ, ಇಂತಹ ಕಟ್ಟಡಗಳನ್ನು ಕಟ್ಟಿಸಿ, ಜನರಿಗೆ ಉಪಯೋಗವಿಲ್ಲದಿದ್ದರೆ ಪ್ರಯೋಜನವೇನು? ಎಂದು ಖಾರವಾಗಿಯೇ ಪ್ರಶ್ನಿಸಿದರು. ಹಾಡಿಗಳ ಜನತೆಗೆ ಮೂಲಭೂತ ಸೌಕರ್ಯಕ್ಕಾಗಿ ಸರಕಾರದಿಂದ ಕೋಟಿ ಕೋಟಿ ರೂಪಾಯಿ ಹಣ ಬರುತ್ತಿದ್ದು, ಅಧಿಕಾರಿಗಳ ಹಂತದಲ್ಲೇ ದುರ್ಬಳಕೆ ಆಗುತ್ತಿದೆ ಎಂದು ಗಂಭೀರ ಆರೋಪ ಮಾಡಿದರು.
ನೆಲದಲ್ಲಿ ಕಲಿಕೆ: ಈ ನಡುವೆ ದನಿಗೂಡಿಸಿದ ಸದಸ್ಯ ಶಿವುಮಾದಪ್ಪ, ನಾಗರಹೊಳೆ ಗಿರಿಜನ ವಸತಿ ಶಾಲೆಯಲ್ಲಿ ಇಂದಿಗೂ ಮಕ್ಕಳಿಗೆ ಕನಿಷ್ಟ ಪೀಠೋಪಕರಣ ಇಲ್ಲದೆ ನೆಲದಲ್ಲಿ ಕುಳ್ಳಿರಿಸಿ ಪಾಠ ಮಾಡಲಾಗುತ್ತಿದೆ ಎಂದರು. ಸಂಜೆಯಾದರೆ ಈ ಮಕ್ಕಳು ಬೆಳಕಿನ ವ್ಯವಸ್ಥೆಯಿಲ್ಲದೆ ಕತ್ತಲೆಯಲ್ಲಿ ಕಳೆಯುವಂತಾಗಿದೆ ಎಂದು ವಿವರಿಸಿದರು.
ವರ್ಗಾವಣೆಗೆ ಆಗ್ರಹ: ಜಿ.ಪಂ. ಸ್ಥಾಯಿ ಸಮಿತಿ ಅಧ್ಯಕ್ಷ ಸಿ.ಕೆ. ಬೋಪಣ್ಣ ಮಾತನಾಡಿ, ಜಿಲ್ಲೆಯ ವಿವಿಧ ಕ್ರೀಡಾ ನಿಲಯಗಳ ವಿದ್ಯಾರ್ಥಿಗಳಿಗೆ ಕನಿಷ್ಟ ಮೂಲಭೂತ ಸೌಕರ್ಯ, ಆಹಾರ ಪಟ್ಟಿಯಂತೆ ಊಟ ಮತ್ತು ಉಪಹಾರ ದೊರಕದಾಗಿದೆ ಎಂದು ಟೀಕಿಸುತ್ತಾ, ಜಿಲ್ಲೆಯ ಸಂಬಂಧಿಸಿದ ಅಧಿಕಾರಿಯನ್ನು ತಕ್ಷಣ ವರ್ಗಾಯಿಸುವಂತೆ ಅಧ್ಯಕ್ಷರಿಗೆ ಆಗ್ರಹಿಸಿದರು.
ಹಕ್ಕುಪತ್ರ ಗೊಂದಲ: ಜಿಲ್ಲೆಯ ಅನೇಕ ಹಾಡಿಗಳ ಜನತೆಗೆ ಜಿಲ್ಲಾಡಳಿತ ಹಕ್ಕುಪತ್ರ ನೀಡಿದ್ದರೂ, ಆರ್‍ಟಿಸಿಯಲ್ಲಿ ಸಂಬಂಧಿಸಿದ ಜಾಗವು ಅರಣ್ಯ ಇಲಾಖೆಯದ್ದು ಎಂದು ನಮೂದಾಗಿದೆ; ಪರಿಣಾಮ ಈ ಗೊಂದಲದಲ್ಲಿ ಫಲಾನುಭವಿಗಳಿಗೆ ಯಾವುದೇ ಸೌಲಭ್ಯ ಪಡೆದುಕೊಳ್ಳಲು ಆಗುತ್ತಿಲ್ಲ ಎಂದು ಸದಸ್ಯೆ ಪಂಕಜ ಗಮನ ಸೆಳೆದರು. ಮುಂದಿನ ದಿನಗಳಲ್ಲಿ ಉಪವಿಭಾಗಾಧಿಕಾರಿ ಹಾಗೂ ಆಯ ತಾಲೂಕು ತಹಶೀಲ್ದಾರರ ಜೊತೆಗೆ ಚರ್ಚಿಸಿ, ಸಮಸ್ಯೆ ಸರಿಪಡಿಸಲಾಗುವುದು ಎಂದು ಜಿ.ಪಂ. ಅಧ್ಯಕ್ಷ ಬಿ.ಎ. ಹರೀಶ್ ಭರವಸೆ ನೀಡಿದರು.
ಸೂಕ್ತ ಪರಿಹಾರ: ಪ್ರಕೃತಿ ವಿಕೋಪದಿಂದ ತೊಂದರೆಗೊಳಗಾಗಿದ್ದವರಿಗೆ ಸೂಕ್ತ ಪರಿಹಾರವನ್ನು ಸರ್ಕಾರದ ವತಿಯಿಂದ ನೀಡಲಾಗಿದ್ದು, ಈ ಸಂಬಂಧ ಯಾವುದೇ ದೂರುಗಳಿದ್ದರು ಪರಿಶೀಲಿಸಲಾಗುವುದು ಎಂದು ಉಪ ವಿಭಾಗಾಧಿಕಾರಿ ಟಿ. ಜವರೇಗೌಡ ಅವರು ತಿಳಿಸಿದರು.
ಈ ಸಂದÀರ್ಭ ಜಿ.ಪಂ. ಸದಸ್ಯರು ಮಾತನಾಡಿ ಅಧಿಕಾರಿಗಳು ಕೃಷಿ ಭೂಮಿ ಒತ್ತುವರಿ ಮಾಡಿಕೊಳ್ಳುತ್ತಿರುವ ಬಗ್ಗೆ, ಕೊಡಗು ಗಡಿ ಭಾಗದಲ್ಲಿ ಕೇರಳ ತ್ಯಾಜ್ಯವನ್ನು ಎಸೆಯುತ್ತಿರುವುದು, ಅತಿವೃಷ್ಠಿ ಹಾಗೂ ಅನಾವೃಷ್ಠಿಯಿಂದ ಬೆಳೆಹಾನಿಯಾದವರಿಗೆ ಶೀಘ್ರ ಮತ್ತು ಹೆಚ್ಚಿನ ಪರಿಹಾರ ನೀಡುವ ಸಂಬಂಧ ಉಪ ವಿಭಾಗಾಧಿಕಾರಿ ಅವರಿಂದ ಮಾಹಿತಿ ಪಡೆದರು.
ಪರಿಹಾರ ಮಾನದಂಡ: ಜಿ.ಪಂ. ಸದಸ್ಯರ ಪ್ರಶ್ನೆಗಳಿಗೆ ಉತ್ತರಿಸಿದ ಉಪ ವಿಭಾಗಾಧಿಕಾರಿ ಅವರು ಪ್ರಕೃತಿ ವಿಕೋಪಕ್ಕೆ ಸಂಬಂಧಿಸಿದಂತೆ, 2019-20ನೇ ಸಾಲಿನಲ್ಲಿ ಪ್ರವಾಹದಲ್ಲಿ ತೊಂದರೆಗೊಳಗಾದ 4168 ಜನರಿಗೆ 10 ಸಾವಿರ ರೂ. ಗಳ ನೆರವನ್ನು ಗೃಹೋಪಯೋಗಿ ವಸ್ತುಗಳ ಖರೀದಿಗೆ ನೀಡಲಾಗಿದೆ. ಅಲ್ಲದೆ ಈ ಸಾಲಿನಲ್ಲಿ ಸರ್ಕಾರದ ಸುತ್ತೋಲೆಯಂತೆ ಮನೆ ಕಳೆದುಕೊಂಡಿರುವವರನ್ನು ಎ.ಬಿ.ಸಿ ಎಂದು.