ಗೋಣಿಕೊಪ್ಪ ವರದಿ, ಫೆ. 19: ಕೈಕೇರಿ ಶ್ರೀ ಭಗವತಿ ದೇವಸ್ಥಾನದ ಬ್ರಹ್ಮಕಲಶೋತ್ಸವ ಹಾಗೂ ದೇವಿಯ ಪುನರ್ ಪ್ರತಿಷ್ಠಾಪನಾ ಕಾರ್ಯಕ್ರಮ ತಾ. 21 ರಿಂದ 26 ರವರೆಗೆ ನಡೆಯಲಿದೆ ಎಂದು ದೇವಸ್ಥಾನ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಜಮ್ಮಡ ಮೋಹನ್ ತಿಳಿಸಿದ್ದಾರೆ.
ಪದ್ಮನಾಭ ತಂತ್ರಿ ಹಾಗೂ ಮಾಧವನ್ ಪೆÇದುವಾಳ ಅವರ ಸಲಹೆಯಂತೆ ಗ್ರಾಮಸ್ಥರು ಹಾಗೂ ದಾನಿಗಳ ಸಹಾಯದಿಂದ ರೂ 1.10 ಕೋಟಿ ವೆಚ್ಚದಲ್ಲಿ ದೇವಸ್ಥಾನದ ನವೀಕರಣ ಕೈಗೊಳ್ಳಲಾಗಿದೆ. ಇದರಂತೆ ಧಾರ್ಮಿಕ ವಿಧಿವಿಧಾನಗಳನ್ನು ನಡೆಸಲಾಗುತ್ತಿದೆ ಎಂದು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು. ಧರ್ಮಸ್ಥಳದ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ ಅವರು ಜೀರ್ಣೋದ್ಧಾರ ಕಾರ್ಯಕ್ಕೆ ರೂ. 1.50 ಲಕ್ಷ ಧನಸಹಾಯ ನೀಡಿದ್ದಾರೆ. ಸರ್ಕಾರದಿಂದ ರೂ. 5 ಲಕ್ಷ ಅನುದಾನ ಘೋಷಣೆಯಾಗಿದೆ ಎಂದು ತಿಳಿಸಿದರು.
ತಾ. 21 ರಂದು ಸಾಯಂಕಾಲ ಸಾಮೂಹಿಕ ಪ್ರಾರ್ಥನೆ, ತಾ. 22 ರಂದು ಗಣಪತಿ ಹೋಮ, ಸಾಯಂಕಾಲ ಅಂಕುರ ಪೂಜೆ, ದುರ್ಗಾ ನಮಸ್ಕಾರ ಪೂಜೆ, ತಾ. 23 ರಂದು ಅಂಕುರ ಪೂಜೆ, ಅದ್ಭುತ ಶಾಂತಿ, ತಾ. 24 ರಂದು ಭಗವತಿ ಸೇವೆ, ತಾ.25 ರಂದು ಗಣಪತಿ ಹೋಮ, ಸಂಹಾರ ತತ್ವ ಕಳಸ ಪೂಜೆ, ತಾ. 26 ರಂದು ಗಣಪತಿ ಹೋಮ, ಭಗವತಿ ಬಿಂಬ ಪ್ರತಿಷ್ಠಾ ಪೂಜೆಗಳು ನಡೆಯಲಿದೆ.
ದೇವಿಯ ಮೂರ್ತಿ ಶಿಲ್ಪ ಶಾಸ್ತ್ರಜ್ಞ ಬೆದರಡ್ಕ ರಮೇಶ್ ವಿನ್ಯಾಸದಲ್ಲಿ ಮೂಡಿಬಂದಿದೆ. ದೇವಸ್ಥಾನದ ಶಿಲ್ಪ ಕೆಲಸವನ್ನು ಶಿಲ್ಪಿ ವೇಲು ಸ್ವಾಮಿ ನಿರ್ವಹಿಸಿದ್ದಾರೆ. ಗ್ರಾಮಸ್ಥರು, ದಾನಿಗಳು ಹಾಗೂ ಭಕ್ತರು ದೇವಿಯ ಆಶೀರ್ವಾದ ಹೆಚ್ಚಾಗಿ ಪಡೆಯಲಿದ್ದಾರೆ ಎಂದು ತಿಳಿಸಿದರು. ಗೋಷ್ಠಿಯಲ್ಲಿ ಸಮಿತಿ ಸದಸ್ಯರಾದ ಜಮ್ಮಡ ಅರಸು, ಜಮ್ಮಡ ಜಯ, ಕುಪ್ಪಂಡ ಕೃಷ್ಣ, ಯದು, ಚೀಯಕಪೂವಂಡ ಸುಬ್ರಮಣಿ ಇದ್ದರು.