ಸಿದ್ದಾಪುರ, ಫೆ. 19: ಜಿಲ್ಲಾಧಿಕಾರಿಗಳ ಭರವಸೆ ಮೇರೆಗೆ ಕರಡಿಗೋಡು ಮತ್ತು ಗುಹ್ಯ ಭಾಗದ ನೆರೆ ಸಂತ್ರಸ್ತರು ಸಿದ್ದಾಪುರ ಗ್ರಾ. ಪಂ ಮುಂದೆ ಕಳೆದ 9 ದಿನಗಳಿಂದ ನಡೆಸುತಿದ್ದ ಆಹೋರಾತ್ರಿ ಧರಣಿಯನ್ನು ಅಂತ್ಯಗೊಳಿಸಲಾಗಿದೆ. ಜಿಲ್ಲಾಧಿಕಾರಿಗಳು ಮಡಿಕೇರಿಯ ತಮ್ಮ ಕಚೇರಿಗೆ ಹೋರಾಟ ಸಮಿತಿಯ ಪ್ರಮುಖರನ್ನು ಕರೆಸಿ ಮಾತುಕತೆ ನಡೆಸಿ ವೀರಾಜಪೇಟೆ ತಾಲೂಕಿನಲ್ಲಿಯೇ ಮುಂದಿನ 15 ದಿನಗಳೊಳಗೆ ಜಾಗ ನೀಡುವುದಾಗಿ ತಿಳಿಸಿದ ಹಿನ್ನೆಲೆಯಲ್ಲಿ ಹೋರಾಟವನ್ನು ಕೈ ಬಿಡಲಾಗಿದೆ.

ಸಿದ್ದಾಪುರದ ಗ್ರಾಮ ಪಂಚಾಯಿತಿ ವ್ಯಾಪ್ತಿಗೊಳಪಡುವ ನದಿ ತೀರದ ನಿವಾಸಿಗಳಿಗೆ ಹಾಗೂ ಸಂತ್ರಸ್ತರಿಗೆ ಪುನರ್ವಸತಿ ಕಲ್ಪಿಸಿಕೊಡುವ ನಿಟ್ಟಿನಲ್ಲಿ ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಅವರು ತಾಲೂಕಿನ ವಿವಿಧೆಡೆಗಳಲ್ಲಿ ತೆರಳಿ ಜಾಗ ಪರಿಶೀಲನೆ ನಡೆಸಿದರು.

ಕಂದಾಯ ಇಲಾಖಾಧಿಕಾರಿ ಗಳೊಂದಿಗೆ ವಿವಿಧೆಡೆಗೆ ತೆರಳಿ ಪರಿಶೀಲನೆ ಮಾಡಿ; ಅಧಿಕಾರಿಗಳಿಂದ ಮಾಹಿತಿ ಪಡೆದುಕೊಂಡರು ಈ ಸಂದರ್ಭದಲ್ಲಿ ಜಿಲ್ಲಾ ಉಪವಿಭಾಗಾಧಿಕಾರಿ ಜವರೇಗೌಡ ವೀರಾಜಪೇಟೆ ತಹಶೀಲ್ದಾರ್ ಮಹೇಶ್, ಕಂದಾಯ ಪರಿವೀಕ್ಷಕÀರಾದ ಹರೀಶ್, ರಾಧಾಕೃಷ್ಣ ಹಾಗೂ ಇನ್ನಿತರ ಅಧಿಕಾರಿಗಳು ಹಾಜರಿದ್ದರು.