ಮಡಿಕೇರಿ, ಫೆ. 19: ಜಿಲ್ಲೆ ಯಾದ್ಯಂತ 7ನೇ ಆರ್ಥಿಕ ಗಣತಿಯು ಈಗಾಗಲೇ ಆರಂಭವಾಗಿದ್ದು, ಮಾರ್ಚ್‍ವರೆಗೆ ನಡೆಯಲಿದೆ. ಕೇಂದ್ರ ಸರ್ಕಾರದ ಸಾಂಖ್ಯಿಕ ಮತ್ತು ಕಾರ್ಯಕ್ರಮ ಅನುಷ್ಠಾನ ಇಲಾಖೆಯ 7ನೇ ಆರ್ಥಿಕ ಗಣತಿ “ಡಿಜಿಟಲ್ ಇಂಡಿಯಾ” ಕಾರ್ಯಕ್ರಮದಡಿ ಇದೇ ಮೊದಲ ಬಾರಿಗೆ ಮೊಬೈಲ್ ಆ್ಯಪ್ ಮೂಲಕ ಮಾಹಿತಿ ಸಂಗ್ರಹಿಸುವ ಸಲುವಾಗಿ ಆ್ಯಪ್‍ನ್ನು ಬಿಡುಗಡೆ ಮಾಡಲಾಗಿದೆ.
ಜಿಲ್ಲೆಯಲ್ಲಿನ ಪ್ರತಿ ಕಟ್ಟಡಕ್ಕೆ ಸಮೀಕ್ಷಾಗಾರರು ಭೇಟಿ ನೀಡಿ ಅದರಲ್ಲಿ ಯಾವುದೇ ಆರ್ಥಿಕ ಚಟುವಟಿಕೆ ನಡೆಯುತ್ತಿದ್ದಲ್ಲಿ ಅವುಗಳ ವಿವರಗಳನ್ನು ಗಣತಿ ಕಾರ್ಯದಲ್ಲಿ ಸಂಗ್ರಹಿಸುತ್ತಾರೆ. ಈವರೆಗೆ 25 ಮೇಲ್ವಿಚಾರಕರು ಹಾಗೂ 86 ಗಣತಿದಾರರನ್ನು ನೇಮಕಾತಿ ಮಾಡಿಕೊಳ್ಳಲಾಗಿದೆ.
ಗಣತಿ ಕಾರ್ಯವೈಖರಿ: ಗಣತಿ ಕಾರ್ಯ ಕೈಗೊಳ್ಳಬಹುದಾದ/ ಕೈಗೊಳ್ಳಬಾರದ ಉದ್ದಿಮೆಗಳೆಂದರೆ ಪ್ಲಾಂಟೇಷನ್ ಬೆಳೆಗಳನ್ನು ಸೇರಿದಂತೆ, ಋತುಕಾಲಿಕ, ವಾರ್ಷಿಕ/ಬಹು ವಾರ್ಷಿಕ ಬೆಳೆಗಳನ್ನು ಬೆಳೆಯುವ, ಕೇಂದ್ರ ಮತ್ತು ರಾಜ್ಯ ಸರ್ಕಾರದ ಸಾರ್ವಜನಿಕ ಇಲಾಖೆಗಳ ಆಡಳಿತ ಕಚೇರಿಗಳು, ರಕ್ಷಣಾ ಮಂತ್ರಾಲಯದ ಕಚೇರಿಗಳು, ಸ್ಥಳೀಯ ಸಂಸ್ಥೆಗಳ ಆಡಳಿತ ಕಚೇರಿಗಳು ಮುಂತಾದವು ಗಳನ್ನು ಹಾಗೂ ಸರ್ಕಾರದಿಂದ ಕಾನೂನು ಬಾಹಿರ ಎಂದು ಘೋಷಿಸಲ್ಪಟ್ಟ ಮತ್ತು ಪಂದ್ಯಕಟ್ಟುವ ಚಟುವಟಿಕೆಗಳಲ್ಲಿ ತೊಡಗಿರುವ ಉದ್ದಿಮೆಗಳನ್ನು ಗಣತಿ ವ್ಯಾಪ್ತಿಯಿಂದ ಹೊರಗಿಡಲಾಗಿದೆ. ಸದರಿ ಗಣತಿಯಲ್ಲಿ ಕೃಷಿ/ಪ್ಲಾಂಟೇಷನ್ ಮೂಲಕ ಬೆಳೆಗಳನ್ನು ಬೆಳೆಯುವುದನ್ನು ಉದ್ದಿಮೆ ಎಂದು ಪರಿಗಣಿಸಿರುವುದಿಲ್ಲ. ಆದರೆ ಬೆಳೆಗಳನ್ನು ಕೊಂಡು ಮಾರಾಟ ಮಾಡುವುದನ್ನು ಉದ್ದಿಮೆ ಎಂದು ಪರಿಗಣಿಸಲಾಗಿದೆ.
ಉದ್ದಿಮೆಗಳನ್ನು ಗಣತಿ ಮಾಡುವಾಗ ಕಟ್ಟಡಗಳಲ್ಲಿ ನಡೆಯುತ್ತಿರುವ ಉದ್ದಿಮೆಗಳನ್ನು ಆಯಾಯ ಸ್ಥಳದಲ್ಲಿಯೇ ಗಣತಿ ಮಾಡಲಾಗುವುದು. ರಸ್ತೆ ಬದಿಯಲ್ಲಿ, ಬೀದಿಗಳಲ್ಲಿ, ಬಯಲು ಪ್ರದೇಶದಲ್ಲಿ ಮುಂತಾದ ಯಾವುದೇ ಕಟ್ಟಡವಲ್ಲದ ಪ್ರದೇಶಗಳಲ್ಲಿ ನಡೆಯುತ್ತಿರುವ ಉದ್ದಿಮೆಗಳನ್ನು ಉದ್ದಿಮೆಯ ಮಾಲೀಕನ ಮನೆಯಲ್ಲಿಯೇ ಗಣತಿ ಮಾಡಲಾಗುವುದು.
ಮನೆಗಳಿಗೆ/ ಉದ್ದಿಮೆಗಳಿಗೆ ಭೇಟಿ ನೀಡಿದಾಗ ಉದ್ದಿಮೆಯ ಮಾಲೀಕರು ಹಾಗೂ ಸಾರ್ವಜನಿಕರು ಅಗತ್ಯವಾದ ಎಲ್ಲಾ ವಿವರಗಳನ್ನು ಒದಗಿಸಬೇಕು. ಗಣತಿಯಲ್ಲಿ ಸಂಗ್ರಹಿಸಲಾಗುವ ಮಾಹಿತಿಗಳು ಮುಂದಿನ ವರ್ಷಗಳಲ್ಲಿ ಯೋಜನೆಗಳನ್ನು ತಯಾರಿಸಲು ಹಾಗೂ ಹಾಲಿ ಇರುವ ಉದ್ದಿಮೆಗಳ ಸ್ಥಿತಿಗತಿಗಳನ್ನು ಅರಿತು ಅವುಗಳಿಗೆ ಪ್ರೋತ್ಸಾಹ, ಮಾರುಕಟ್ಟೆ, ಆರ್ಥಿಕ ಸಹಾಯ ಮುಂತಾದ ನಿರ್ಧಾರಗಳನ್ನು ಕೈಗೊಳ್ಳಲು ಸರ್ಕಾರಕ್ಕೆ ಅನುಕೂಲವಾಗುತ್ತದೆ. ಇದರಿಂದ ಸಾರ್ವಜನಿಕರಿಗೆ ಬಹಳಷ್ಟು ಅನುಕೂಲಕರವಾಗುವುದರಿಂದ ಸಾರ್ವಜನಿಕರು ಆದಷ್ಟು ನಿಖರವಾದ ಮಾಹಿತಿಗಳನ್ನು ಒದಗಿಸಲು ಸಲಹೆ ನೀಡಿದರು. ಅಲ್ಲದೇ ಕೃಷಿ ಕಂದಾಯ, ಶಿಕ್ಷಣ ಮುಂತಾದ ಇಲಾಖೆಗಳ ಗ್ರಾಮಮಟ್ಟದ ಇಲಾಖಾಧಿಕಾರಿಗಳು ಹಾಗೂ ಸ್ಥಳೀಯ ಸಂಸ್ಥೆಗಳ ಮುಖ್ಯಸ್ಥರು ಮತ್ತು ಸಿಬ್ಬಂದಿಯವರು ಗಣತಿ ಕಾರ್ಯದಲ್ಲಿ ಸಂಪೂರ್ಣ ವಾಗಿ ಸಹಕಾರ ನೀಡಬೇಕು.
ಅಲ್ಲದೆ ಗ್ರಾಮಾಂತರ ಪ್ರದೇಶಗಳಲ್ಲಿ ಉದ್ದಿಮೆಗಳನ್ನು ಗುರುತಿಸಲು ಗ್ರಾಮಲೆಕ್ಕಾಧಿಕಾರಿ/ ಗ್ರಾಮ ಪಂಚಾಯಿತಿ ಅಧಿಕಾರಿಗಳು ಹಾಗೂ ನಗರ/ಪಟ್ಟಣ ಪ್ರದೇಶಗಳಲ್ಲಿ ನಗರಸಭೆ/ಪಟ್ಟಣ ಪಂಚಾಯಿತಿ ಅಧಿಕಾರಿಗಳು/ಬಿಲ್ ಕಲೆಕ್ಟರ್‍ಗಳು ಸಮೀಕ್ಷೆ ನಡೆಸುವ ಗಣತಿದಾರರಿಗೆ/ಮೇಲ್ವಿಚಾರಕರಿಗೆ ಸಂಪೂರ್ಣ ಸಹಕಾರ ನೀಡುವಂತೆ ಜಿಲ್ಲಾ ಸಂಖ್ಯಾ ಸಂಗ್ರಹಣಾಧಿಕಾರಿ ಪ್ರಕಾಶ್ ಕೋರಿದ್ದಾರೆ.