ಸೋಮವಾರಪೇಟೆ, ಫೆ. 19: ಮಾನವ ಹಕ್ಕು ಮತ್ತು ಭ್ರಷ್ಟಾಚಾರ ವಿರೋಧಿ ಸಂಸ್ಥೆ, ತಾಲೂಕು ಕಾನೂನು ಸೇವಾ ಸಮಿತಿ ಹಾಗೂ ತಾಲೂಕು ವಕೀಲರ ಸಂಘದ ಆಶ್ರಯದಲ್ಲಿ ಸೋಮವಾರ ಪಟ್ಟಣದ ವೆಂಕಟೇಶ್ವರ ಬ್ಲಾಕ್‍ನಲ್ಲಿರುವ ಅಂಬೇಡ್ಕರ್ ಭವನದಲ್ಲಿ ಕಾನೂನು ಅರಿವು ಕಾರ್ಯಕ್ರಮ ನಡೆಯಿತು.
ಕಾರ್ಯಕ್ರಮವನ್ನು ವಕೀಲರ ಸಂಘದ ಅಧ್ಯಕ್ಷ ಡಿ.ಕೆ. ತಿಮ್ಮಯ್ಯ ಉದ್ಘಾಟಿಸಿದರು. ನಂತರ ಮಾತನಾಡಿ, ಜನಸಾಮಾನ್ಯರು ದೇಶದ ಕಾನೂನಿನ ಬಗ್ಗೆ ಅರಿವು ಮೂಡಿಸಿಕೊಳ್ಳಬೇಕು ಎಂದು ಹೇಳಿದರು. ಪೊಕ್ಸೋ ಕಾಯಿದೆ, ಭ್ರಷ್ಟಾಚಾರ ಮತ್ತು ಮಾನವ ಹಕ್ಕುಗಳು ಹಾಗೂ ವಾಹನ ಚಾಲನೆ ಮಾಡುವ ಸಂದರ್ಭ ಅನುಸರಿಸಬೇಕಾದ ನಿಯಮಗಳ ಬಗ್ಗೆ ಮಾಹಿತಿ ನೀಡಿದರು.
ಪ.ಪಂ. ಮುಖ್ಯಾಧಿಕಾರಿ ರಮೇಶ್ ಮಾತನಾಡಿ, ಪಂಚಾಯಿತಿ ವ್ಯಾಪ್ತಿಯ ನಿವಾಸಿಗಳು ಕಾಲ ಕಾಲಕ್ಕೆ ತೆರಿಗೆ ಪಾವತಿಸಬೇಕು. ಆಗ ಮಾತ್ರ ಪಟ್ಟಣದ ಅಭಿವೃದ್ಧಿ ಸಾಧ್ಯ ಎಂದು ಮನವಿ ಮಾಡಿದರು.
ತಹಶೀಲ್ದಾರ್ ಗೋವಿಂದರಾಜು 94ಸಿ ಮತ್ತು 94ಸಿಸಿ ಅರ್ಜಿಗಳ ಬಗ್ಗೆ ಮಾಹಿತಿ ನೀಡಿದರು. ಕಾರ್ಮಿಕ ಇಲಾಖೆಯ ಹಿರಿಯ ನಿರೀಕ್ಷಕ ಮಹದೇವಸ್ವಾಮಿ ಕಟ್ಟಡ ಕಾರ್ಮಿಕರ ಮಕ್ಕಳಿಗೆ ಶಿಕ್ಷಣ, ಪಿಂಚಣಿ ಸೇರಿದಂತೆ ಸರ್ಕಾರದಿಂದ ಸಿಗುವ ಸೌಲಭ್ಯಗಳ ಬಗ್ಗೆ ಮಾಹಿತಿ ನೀಡಿದರು.
ವೇದಿಕೆಯಲ್ಲಿ ಮಾನವ ಹಕ್ಕು ಮತ್ತು ಭ್ರಷ್ಟಾಚಾರ ವಿರೋಧಿ ಸಂಸ್ಥೆ ಕಾರ್ಮಿಕ ಘಟಕದ ರಾಜ್ಯ ಕಾರ್ಯದರ್ಶಿ ಟಿ.ಜೆ. ಗಣೇಶ್‍ಕುಮಾರ್, ರಾಜಕೀಯ ವಿಭಾಗದ ಕಾರ್ಯದರ್ಶಿ ಎಂ.ಪಿ. ರಮೇಶ್, ತಾಲೂಕು ಘಟಕದ ಕಾರ್ಯದರ್ಶಿ ಹಿರಿಕರ ಸತೀಶ್ ಉಪಸ್ಥಿತರಿದ್ದರು.