ಮಡಿಕೇರಿ, ಫೆ. 20: ಕ್ಷುಲ್ಲಕ ಕಾರಣಕ್ಕಾಗಿ ವ್ಯಕ್ತಿಯೊಬ್ಬರನ್ನು ತನ್ನ ವಾಹನದಿಂದ ಬಲವಂತವಾಗಿ ಎಳೆದೊಯ್ದು ; ಮನ ಬಂದಂತೆ ಹಲ್ಲೆ ನಡೆಸಿರುವ ಆರೋಪ ಮೇರೆಗೆ; ಸೋಮವಾರಪೇಟೆ ಪೊಲೀಸರು ಐವರ ವಿರುದ್ಧ ಮೊಕದ್ದಮೆ ದಾಖಲಿಸಿಕೊಂಡು; ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ನಿನ್ನೆ ಬೆಳಿಗ್ಗೆ ಕೂತಿಗ್ರಾಮದ ನಿವಾಸಿ ನವೀನ್ ಜೋಯಪ್ಪ (31) ಎಂಬವರು; ಸೋಮವಾರಪೇಟೆಯ ನಗರೂರು ಪೆಟ್ರೋಲ್ ಬಂಕ್ ಬಳಿ; ತನ್ನ ಪಿಕಪ್ ವಾಹನದಲ್ಲಿ ತೆರಳುತ್ತಿದ್ದಾಗ; ನೇಗಳ್ಳಿ ಗ್ರಾಮದ ಐವರು ಕಾರೊಂದರಲ್ಲಿ ಬಂದು ಅಡ್ಡಗಟ್ಟಿದ್ದಾರೆ.
ಬಳಿಕ ಕಾರಿನಿಂದ ಇಳಿದಿರುವ ಆರೋಪಿಗಳಾದ ಪ್ರಶಾಂತ್ ರಾಂದೇವ್, ಎನ್. ಗಿರೀಶ್, ವಿಕ್ರಂ, ಶರಣು ಹಾಗೂ ಕೆ. ವಿಲಾಸ್ ಸೇರಿಕೊಂಡು; ನವೀನ್ ಅವರನ್ನು ಬಲವಂತವಾಗಿ ವಾಹನದಿಂದ ಎಳೆದೊಯ್ದು ತೀವ್ರ ಹಲ್ಲೆ ನಡೆಸಿದ್ದಾರೆ. ಅಲ್ಲದೆ ದಿನವಿಡೀ ಹಿಡಿದಿಟ್ಟುಕೊಂಡು; ಮೇಲಿಂದ ಮೇಲೆ ಹಲ್ಲೆ ನಡೆಸಿ; ದೈಹಿಕ ಹಿಂಸೆ ನೀಡಿದ್ದು; ರಾತ್ರಿ ಆರೋಪಿಗಳ ಹಿಡಿತದಿಂದ ತಪ್ಪಿಸಿಕೊಂಡು ಬಂದಿರುವ ಗಾಯಾಳು ಪೊಲೀಸರಿಗೆ ಕೃತ್ಯದ ಬಗ್ಗೆ ದೂರು ಸಲ್ಲಿಸಿದ್ದಾರೆ.
ಆ ಮೇರೆಗೆ ಠಾಣಾಧಿಕಾರಿ ಶಿವಶಂಕರ್ ಹಾಗೂ ಸಿಬ್ಬಂದಿ ಕಾರ್ಯಾಚರಣೆ ನಡೆಸಿ; ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಸುಮನ್ ಡಿ.ಪಿ. ಮಾರ್ಗದರ್ಶನದೊಂದಿಗೆ ಎಲ್ಲಾ ಐವರು ಆರೋಪಿಗಳನ್ನು ಬಂಧಿಸಿ; ಮೊಕದ್ದಮೆ ದಾಖಲಿಸಿಕೊಂಡಿದ್ದಾರೆ. ಇಂದು ಆರೋಪಿಗಳನ್ನು ಸೋಮವಾರಪೇಟೆ ಜೆಎಂಎಫ್‍ಸಿ ನ್ಯಾಯಾಧೀಶರ ಮುಂದೆ ಹಾಜರು ಪಡಿಸಿದ್ದು; ಹಲ್ಲೆಕೋರರನ್ನು 14 ದಿನಗಳ ನ್ಯಾಯಾಂಗ ವಶಕ್ಕೆ ಒಪ್ಪಿಸಲಾಗಿದೆ.