ಮಡಿಕೇರಿ, ಫೆ. 19: ಕಾರ್ಮಿಕ ಇಲಾಖೆ, ಕರ್ನಾಟಕ ರಾಜ್ಯ ಅಸಂಘಟಿತ ಕಾರ್ಮಿಕರ ಸಾಮಾಜಿಕ ಭಧ್ರತಾ ಮಂಡಳಿ, ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ ವತಿಯಿಂದ ಮಾರ್ಚ್ 1 ರಂದು ಕಾರ್ಮಿಕ ಸಮ್ಮಾನ್ ದಿನಾಚರಣೆಯನ್ನು ಆಚರಿಸಲಾಗುತ್ತಿದ್ದು, ಅಸಂಘಟಿತ ಕಾರ್ಮಿಕ ವಲಯದಲ್ಲಿ ಕೆಲಸ ಮಾಡುವ 12 ವರ್ಗಗಳ ಕಾರ್ಮಿಕರಿಗೆ ಕಾರ್ಮಿಕ ಸಮ್ಮಾನ ಪ್ರಶಸ್ತಿ ನೀಡುವ ಸಂಬಂಧ ಅಪರ ಜಿಲ್ಲಾಧಿಕಾರಿ ಡಾ. ಸ್ನೇಹ ಅವರ ಅಧ್ಯಕ್ಷತೆಯಲ್ಲಿ ಪೂರ್ವಭಾವಿ ಸಭೆ ನಡೆಯಿತು.

ಅಸಂಘಟಿತ ಕಾರ್ಮಿಕ ವಲಯಗಳಾದ, ಹಮಾಲರು, ಟೈಲರ್‍ಗಳು, ಚಿಂದಿ ಆಯುವವರು, ಗೃಹ ಕಾರ್ಮಿಕರು, ಮೆಕಾನಿಕ್‍ಗಳು, ಅಗಸರು, ಅಕ್ಕಸಾಲಿಗರು, ಕಮ್ಮಾರರು, ಕುಂಬಾರರು, ಕ್ಷೌರಿಕರು, ಭಟ್ಟಿ ಕಾರ್ಮಿಕರು, ಖಾಸಗಿ ವಾಹನ ಚಾಲಕರುಗಳಿಗೆ ತಾ. 17 ರೊಳಗೆ ಕಾರ್ಮಿಕ ಸಮ್ಮಾನ್ ಪ್ರಶಸ್ತಿಗಾಗಿ ಅರ್ಜಿ ಸಲ್ಲಿಸಲು ಕಾಲಾವಕಾಶ ನೀಡಲಾಗಿತ್ತು.

ಆದರೆ ಈವರೆಗೂ ಹೆಚ್ಚಿನ ಕಾರ್ಮಿಕರು ಅರ್ಜಿ ಸಲ್ಲಿಸಲು ಸಾಧ್ಯವಾಗದ ಹಿನ್ನೆಲೆ ಸಂಘ-ಸಂಸ್ಥೆಗಳ ಮನವಿಯ ಮೇರೆಗೆ ಅಪರ ಜಿಲ್ಲಾಧಿಕಾರಿಗಳು ತಾ. 20 ರ ಸಂಜೆ 5.30 ರವರೆಗೆ ಅರ್ಜಿ ಸಲ್ಲಿಕೆಗೆ ಅವಕಾಶ ಮಾಡಲು ಸಭೆಯಲ್ಲಿ ನಿರ್ಧರಿಸಲಾಯಿತು.