ವಿಶೇಷ ವರದಿ: ರಫೀಕ್ ತೂಚಮಕೇರಿ ಪೆÇನ್ನಂಪೇಟೆ, ಫೆ. 18: ಕೊಡಗಿನ ಪ್ರಮುಖ ವಾಣಿಜ್ಯ ಬೆಳೆಯಾದ ಕಾಫಿ, ಬೆಳೆಗಾರರ ಬದುಕು ಕಟ್ಟಿಕೊಳ್ಳುವ ಆಸರೆ ಬೆಳೆಯಾಗಿದೆ. ವರ್ಷಕ್ಕೆ ಒಂದು ಬಾರಿ ಬರುವ ಫಸಲಿಗಾಗಿ ಬೆಳೆಗಾರರು ವರ್ಷವಿಡೀ ದುಡಿದು ಹಲವು ಕನಸುಗಳನ್ನು ಹೊತ್ತುಕೊಂಡಿರುತ್ತಾರೆ. ಫಸಲನ್ನು ಕೊಯ್ದು ಮಾರಾಟ ಮಾಡಿದ ನಂತರ ಬೆಳೆಗಾರರು ಕೆಲ ವ್ಯಾಪಾರಿಗಳಿಂದ ಮೋಸಕ್ಕೆ ಬಲಿಯಾಗುತ್ತಿರುವ ಘಟನೆ ಇತ್ತೀಚೆಗೆ ಜಿಲ್ಲೆಯಲ್ಲಿ ಸಾಮಾನ್ಯವಾಗತೊಡಗಿದೆ. ನಿರಂತರವಾಗಿ ಪಂಗನಾಮ ಹಾಕಿಸಿಕೊಳ್ಳುತ್ತಿದ್ದರೂ ಕೊಡಗಿನ ಬೆಳೆಗಾರರು ಮಾತ್ರ ಪಾಠ ಕಲಿಯುತ್ತಿಲ್ಲ.

ಕಾಫಿ ಮಾತ್ರವಲ್ಲದೆ ಮತ್ತೊಂದು ಪ್ರಮುಖ ಬೆಳೆಯಾದ ಕರಿಮೆಣಸು ಮಾರಾಟದಲ್ಲೂ ಬೆಳೆಗಾರರು ಮೋಸಕ್ಕೆ ಬಲಿಯಾದ ಘಟನೆ ಸಾಕಷ್ಟಿದೆ. ಇದರಿಂದ ಬೆಳೆಗಾರರು ಕಂಗಾಲಾಗುತ್ತಿರುವುದು ಒಂದೆಡೆಯಾದರೆ ಪ್ರಾಮಾಣಿಕವಾಗಿ ವಹಿವಾಟು ನಡೆಸುತ್ತಿರುವ ವ್ಯಾಪಾರಿಗಳ ಮೇಲೂ ಇದರ ಪರಿಣಾಮ ಬೀಳುತ್ತಿದೆ. ದಿಢೀರನೆ ಹುಟ್ಟಿಕೊಳ್ಳುವ ಕೆಲ ವ್ಯಾಪಾರಿಗಳು ಔಟ್ ಟರ್ನ್(ಉತ್ಪನ್ನದ ಗುಣಮಟ್ಟ) ಮತ್ತು ತೇವಾಂಶದ (ಒoisಣuಡಿe) ಹೆಸರಿನಲ್ಲಿ ಬೆಳೆಗಾರರನ್ನು ವಂಚಿಸಿ ಹಣಮಾಡುವ ದಂಧೆಗೆ ಇಳಿಯುತ್ತಿದ್ದಾರೆ. ಪರಿಚಯವಿಲ್ಲದ ವ್ಯಾಪಾರಸ್ಥರ ಯಾವುದೇ ಪೂರ್ವಪರ ವಿಚಾರಿಸದೆ ಅವರ ‘ಅಧಿಕ ಬೆಲೆಯ’ ಆಮಿಷಕ್ಕೆ ಬಲಿಯಾಗುವ ಬೆಳೆಗಾರರು, ಕೊನೆಗೆ ಮೋಸ ಹೋದ ನಂತರ ಕೈಕೈ ಹಿಸುಕಿಕೊಳ್ಳುವ ಪರಿಸ್ಥಿತಿ ನಿರ್ಮಾಣವಾಗುತ್ತಿದೆ. ಮುಗ್ಧ ಬೆಳೆಗಾರರನ್ನು ವಂಚಿಸಿ ಶ್ರೀಮಂತರಾಗುವ ಕೆಲ ವ್ಯಾಪಾರಿಗಳು ಕ್ಷಣಿಕದ ಐಷಾರಾಮಿ ಜೀವನ ನಡೆಸುತ್ತಾ ಮೆರೆಯುತ್ತಾರೆ. ನಂತರ ಬೆಳೆಗಾರರ ಬಾಕಿ ಹಣವನ್ನು ಪಾವತಿಸಲು ದೊಡ್ಡ ಮೊತ್ತದ ಹಣವನ್ನು ಸಾಲ ಮಾಡಬೇಕಾಗುತ್ತದೆ. ಈ ಸಾಲವನ್ನು ತೀರಿಸಲಾಗದೆ ಊರು ಬಿಡುವ ಪರಿಸ್ಥಿತಿ ನಿರ್ಮಾಣವಾಗುತ್ತಿದೆ.

ಕಾಫಿ ಚೀಲದ ಲೆಕ್ಕದಲ್ಲಿ ಹಾಗೂ ಕಾಫಿಯ ತೂಕದಲ್ಲಿ ಅತ್ಯಂತ ಚಾಣಾಕ್ಷತನದಿಂದ ಬೆಳೆಗಾರರಿಗೆ ಮೋಸ ಮಾಡುವ ಪ್ರಕರಣಗಳು ದಿನೇ ದಿನೇ ಹೆಚ್ಚುತ್ತಿವೆ. ಕೇವಲ ‘ಅಧಿಕ ಬೆಲೆ'ಯ ಆಸೆಯಿಂದಾಗಿ ಬೆಳೆಗಾರರು ತಮಗೆ ತಿಳಿಯದಂತೆಯೇ ಮೋಸಕ್ಕೆ ಬಲಿಯಾಗುತ್ತಿದ್ದಾರೆ. ಮಾರುಕಟ್ಟೆ ದರಕ್ಕಿಂತ ಹೆಚ್ಚಿನ ದರ ದೊರೆಯಿತೆಂದು ಸಮಾಧಾನ ಪಟ್ಟುಕೊಳ್ಳುವ ಬೆಳೆಗಾರರು, ತೂಕದಲ್ಲೊ ಅಥವಾ ಚೀಲ ಲೆಕ್ಕದಲ್ಲೊ ತಮಗೆ ಪಂಗನಾಮ ಬಿದ್ದ ವಿಷಯದ ಬಗ್ಗೆ ಗಮನವೇ ಹರಿಸುತ್ತಿಲ್ಲ.

ಮಾರುಕಟ್ಟೆ ಬೆಲೆಗಿಂತ ‘ಅಧಿಕ ಬೆಲೆ’ ದೊರೆತರೆ ಅದೇ ದೊಡ್ಡ ತೃಪ್ತಿ ಎಂದು ಪರಿಗಣಿಸಿರುವ ಕೆಲ ಕಾಫಿ ಬೆಳೆಗಾರರು ಅದರ ಹಿಂದಿರುವ ಯಾವುದೇ ನಷ್ಟದ ಲೆಕ್ಕಾಚಾರವನ್ನು ಹಾಕುತ್ತಿಲ್ಲ. ಮಾರುಕಟ್ಟೆ ಬೆಲೆಗಿಂತ ಜಾಸ್ತಿ ಬೆಲೆಯಲ್ಲಿ ಕಾಫಿ ಖರೀದಿಸಲು ಸಾಧ್ಯವೇ ಇಲ್ಲ. ಮಾರುಕಟ್ಟೆ ದರಕ್ಕಿಂತ ಹೆಚ್ಚಿನ ಬೆಲೆಗೆ ಖರೀದಿಸುತ್ತಾರೆ ಎಂದರೆ ಯಾವುದೋ ಒಂದು ಮೋಸ ಇದೆ ಎಂಬುದು ಹಗಲಿನಷ್ಟೇ ಸತ್ಯವಾದ ಸಂಗತಿಯಾಗಿರುತ್ತದೆ.

ಕೆಲ ಅಪ್ರಮಾಣಿಕ ವ್ಯಾಪಾರಿಗಳು ಮೋಸವೆಸಗುವದಕ್ಕೆ ಬೆಳೆಗಾರರೇ ಪರೋಕ್ಷವಾಗಿ ಕಾರಣರಾಗುತ್ತಿದ್ದಾರೆ. ‘ಅಧಿಕ ಬೆಲೆ'ಯ ಆಮಿಷಕ್ಕೆ ಬಲಿಯಾಗಿ ಆ ವ್ಯಾಪಾರಿಯ ಯಾವುದೇ ಪೂರ್ವಪರಗಳನ್ನು ವಿಚಾರಿಸದೆ ತಮ್ಮ ಫಸಲಿಗೆ ಬೆಲೆ ಅಧಿಕ ದೊರೆಯುತ್ತದೆಯಲ್ಲಾ ಎಂಬ ಏಕಮಾತ್ರ ಉದ್ದೇಶದಿಂದ ಟನ್ ಲೆಕ್ಕದಲ್ಲಿ ಕಾಫಿ ಮತ್ತು ಕರಿಮೆಣಸನ್ನು ನೀಡುತ್ತಾರೆ. ಕೆಲ ತಿಂಗಳ ಬಳಿಕ ಆಮಿಷ ತೋರಿದ ವ್ಯಾಪಾರಿ ನಾಪತ್ತೆಯಾದಾಗ ಬೆಳೆಗಾರರು ಆಕಾಶ ನೋಡಬೇಕಾಗುತ್ತದೆ. ಈ ರೀತಿಯ ಪ್ರಕರಣಗಳು ಕೊಡಗಿನಲ್ಲಿ ಹಲವು ವರ್ಷಗಳಿಂದ ನಡೆಯುತ್ತಿದೆ. ಈ ಕುರಿತು ಪತ್ರಿಕೆಗಳಲ್ಲಿ ಸುದ್ದಿ ಪ್ರಕಟಗೊಳ್ಳುತ್ತಿದ್ದರೂ ಬೆಳೆಗಾರರು ಮಾತ್ರ ಜಾಗೃತಿಯಾಗುತ್ತಿಲ್ಲ.

ಕೊಡಗಿನ ವಿವಿಧೆಡೆ ಕಾಫಿ ಖರೀದಿ ಅಂಗಡಿ ಮತ್ತು ಕಾಫಿ ಡಿಪೆÇೀ ಪ್ರಾರಂಭಿಸುವ ಕೆಲ ವ್ಯಾಪಾರಿಗಳು, ಆರಂಭದಲ್ಲಿ ಬೆಳೆಗಾರರ ವಿಶ್ವಾಸ ಗಿಟ್ಟಿಸುವಂತೆ ಮಾಡುವಲ್ಲಿ ಕೆಲವು ನಾಟಕದ ತಂತ್ರ ಅನುಸರಿಸುತ್ತಾರೆ. ಹೆಚ್ಚಿನ ಬೆಲೆಗೆ ಖರೀದಿಸಿ ಮೊದಮೊದಲು ಹಣವನ್ನು ನಿಗದಿತ ಸಮಯದಲ್ಲೇ ನೀಡುತ್ತಾರೆ. ನಂತರ ಅವರ ಪರಿಚಯಸ್ಥರ ಕಾಫಿಯನ್ನು ತಮಗೆ ಕೊಡಿಸಲು ಶಿಪಾರಸು ಮಾಡುವಂತೆ ಒತ್ತಡ ಹಾಕುತ್ತಾರೆ. ಅಲ್ಲಿಂದ ಕಾಫಿ ಬರುತ್ತಿದ್ದಂತೆ ಮೋಸದ ಲೆಕ್ಕಾಚಾರ ಆರಂಭವಾಗಿ ದೊಡ್ಡ ಮೊತ್ತ ಪಾವತಿಗೆ ಬಾಕಿ ಉಳಿಸಿ ರಾತ್ರೋರಾತ್ರಿ ಜಾಗಖಾಲಿ ಮಾಡುತ್ತಾರೆ. ವರ್ಷಗಳು ಉರುಳಿದಂತೆ ಪ್ರಕರಣದ ತೀವ್ರತೆಗೆ ಕಡಿಮೆಯಾಗುತ್ತದೆ. ಪಂಗನಾಮ ಹಾಕಿಸಿಕೊಂಡ ಬೆಳೆಗಾರರು ಕೂಡ ತಮ್ಮ ಸಿಟ್ಟಿನಿಂದ ತಣ್ಣಗಾಗಿರುತ್ತಾರೆ. ಇದನ್ನೇ ಕಾಯುವ ಪಂಗನಾಮ ಹಾಕಿದ ವಂಚಕ ವ್ಯಾಪಾರಿಗಳು ಮತ್ತೆ ಕೊಡಗಿಗೆ ಬಂದು ಬೇರೆಡೆ ಕಾಫಿ ವ್ಯಾಪಾರ ಮತ್ತು ಡಿಪೆÇೀ ಆರಂಭಿಸಿ ಅದೇ ಹಳೆಯ ಚಾಳಿಯನ್ನು ಮುಂದುವರಿಸಲು ಯೋಜನೆ ರೂಪಿಸುತ್ತಾರೆ. ಹಳೇ ಬಾಕಿದಾರರಿಗೆ ಸ್ವಲ್ಪ ಹಣ ನೀಡಿ ಅವರನ್ನು ಸಮಾಧಾನಿಸಿ ಮತ್ತೆ ಹೆಚ್ಚಿನ ಬೆಲೆಗೆ ಕಾಫಿ ಖರೀದಿಸಿ ಮೋಸದ ಷಡ್ಯಂತ್ರ ರೂಪಿಸುವವರ ವಿರುದ್ಧ ಎಚ್ಚರ ವಹಿಸದಿದ್ದರೆ ಬೆಳೆಗಾರರಿಗೆ ಮತ್ತೆ ಪಂಗನಾಮ ಕಟ್ಟಿಟ್ಟ ಬುತ್ತಿಯಾಗುತ್ತದೆ.

ಪ್ರತ್ಯಕ್ಷ ಸಾಕ್ಷಿಯಾದ ಪ್ರಕರಣ

ಇತ್ತೀಚಿಗೆ ಬಿಟ್ಟಂಗಾಲದ ಬೆಳೆಗಾರರೊಬ್ಬರು ತಮ್ಮ ಒಣಗಿದ ಕಾಫಿಯನ್ನು ನೋಡಲು ವ್ಯಾಪಾರಿಯೊಬ್ಬರನ್ನು ಆಹ್ವಾನಿಸಿದರು. ಅವರು ಆ ಕಾಫಿಯನ್ನುü ನೋಡಿ ಮಾರುಕಟ್ಟೆ ಬೆಲೆಯಲ್ಲಿ ಕ್ರಯ ನಿಗದಿಪಡಿಸಿದ್ದರು. ಇದರಿಂದ ತೃಪ್ತರಾಗದ ಆ ಬೆಳೆಗಾರರು ಮತ್ತೊಬ್ಬ ವ್ಯಾಪಾರಿಯನ್ನು ಕರೆಸಿ ಕ್ರಯ ನಿಗದಿಪಡಿಸುವಂತೆ ಸೂಚಿಸಿದರು. ಮೊದಲ ವ್ಯಾಪಾರಿಗಿಂತಲೂ ಅಧಿಕ ಬೆಲೆ ನಿಗದಿಪಡಿಸಿದ್ದರಿಂದ ಸಂತೋಷಗೊಂಡ ಆ ಬೆಳೆಗಾರÀ ತಮ್ಮ ಒಣಗಿದ ಕಾಫಿಯ ಪೈಕಿ ಸ್ವಲ್ಪ ಭಾಗವನ್ನು ಹೆಚ್ಚು ಕ್ರಯ ನಿಗದಿಪಡಿಸಿದ ವ್ಯಾಪಾರಿಗೆ ಮಾರಾಟ ಮಾಡಿದರು. ಇದರಂತೆ ಕಾಫಿ ಚೀಲವನ್ನು ಲಾರಿಗೆ ತುಂಬಿಸುತ್ತಿದ್ದಾಗ ಸಂಶಯಗೊಂಡು ಬೆಳೆಗಾರ

(ಮೊದಲ ಪುಟದಿಂದ) ಚೀಲವನ್ನು ಅವರ ಯಂತ್ರದಲ್ಲಿ ತೂಗಿ ನೋಡಿದಾಗ ಎಲ್ಲಾ ಚೀಲದಲ್ಲಿ 50 ಕೆ.ಜಿ.ಗೆ ಬದಲಾಗಿ 56ಕೆ.ಜಿ.ಕಾಫಿ ಇದ್ದದ್ದು ಪತ್ತೆಯಾಯಿತು. ಇದರಿಂದ ಆಕ್ರೋಶಗೊಂಡ ಬೆಳೆಗಾರ ವ್ಯಾಪಾರಿಗೆ ಸ್ಥಳದಲ್ಲೇ ‘ತಕ್ಕಶಾಸ್ತಿ' ಮಾಡಿ ಕಳಿಸಿದ್ದಾರೆ. ಈ ರೀತಿಯ ಪ್ರಕರಣಗಳು ಹಲವೆಡೆ ನಡೆಯುತ್ತಿದ್ದರೂ ಬೆಳೆಗಾರರು ಮಾತ್ರ ಇದುವರೆಗೂ ಇದನ್ನು ಗಂಭೀರವಾಗಿ ಪರಿಗಣಿಸಿಲ್ಲ. ವೀರಾಜಪೇಟೆಯಲ್ಲಿ ಕಾಫಿ ಖರೀದಿಸಿ ಹತ್ತಾರು ಬೆಳೆಗಾರರಿಗೆ ಭಾರೀ ಮೊತ್ತದ ಹಣವನ್ನು ವಂಚಿಸಿ ಇತ್ತೀಚೆಗೆ ವ್ಯಾಪಾರಿಯೊಬ್ಬ ಪರಾರಿಯಾಗಿರುವ ಸುದ್ದಿ ಮಾಧ್ಯಮಗಳಲ್ಲಿ ಪ್ರಕಟಗೊಂಡಿದೆ.

ಒಣಗಿದ ಕಾಫಿಯನ್ನು ಸಂಗ್ರಹಿಸಿಡಲು ಸೂಕ್ತ ಜಾಗವಿಲ್ಲ ಎಂಬ ಕಾರಣದಿಂದ ಹಲವು ಬೆಳೆಗಾರರು ವ್ಯಾಪಾರಿಗಳ ಬಳಿ ಕಾಫಿಯನ್ನು ಠೇವಣಿಯಿ ರಿಸುವ ಈ ಪದ್ಧತಿ ಜಿಲ್ಲೆಯಲ್ಲಿ ಹಿಂದಿನಿಂದಲೂ ಜಾರಿಯಲ್ಲಿದೆ. ನಿಗದಿತ ಅವಧಿಯಲ್ಲೇ ಈ ವಹಿವಾಟನ್ನು ಮುಗಿಸುವ ವಿಶ್ವಾಸನೀಯ ವ್ಯಾಪಾರಿಗಳೂ ಇದ್ದಾರೆ. ಎಲ್ಲಾ ವ್ಯಾಪಾರಿಗಳನ್ನು ಒಂದೇ ತಕ್ಕಡಿಯಲ್ಲಿ ತೂಗುವುದು ಸಾಧ್ಯವಿಲ್ಲ. ಆದರೆ ಕೆಲ ಬೆಳೆಗಾರರು ತಮ್ಮ ಕಾಫಿಯನ್ನು ಚೀಲಕ್ಕೆ ರೂ. 200ರಿಂದ 300 ‘ಅಧಿಕ ಬೆಲೆ’ಯ ಆಸೆಗಾಗಿ ಪೂರ್ವಪರ ತಿಳಿಯದ ವ್ಯಾಪಾರಿಗಳ ಬಳಿ ಠೇವಣಿಯಿರಿಸುತ್ತಿದ್ದಾರೆ. ಇದೂ ಕೂಡ ವ್ಯಾಪಾರಿಗಳನ್ನು ‘ಊರು ಬಿಡಲು’ ಉತ್ತೇಜಿಸುವ ಕ್ರಮಗಳಲ್ಲಿ ಒಂದಾಗಿದೆ. ಇದರಿಂದ ತಮ್ಮ ವರ್ಷದ ಇಡೀ ಪಸಲನ್ನು ಕೆಲ ಬೆಳೆಗಾರರು ಕಳೆದುಕೊಳ್ಳುತ್ತಿದ್ದಾರೆ.

ಕಾಫಿಗೆ ಮುಕ್ತ ಮಾರುಕಟ್ಟೆ ದೊರೆತ ನಂತರ: 1995ರ ನಂತರ ಕಾಫಿ ಮುಕ್ತ ಮಾರುಕಟ್ಟೆಗೆ ಒಳಪಟ್ಟಿತು. ಇದರಿಂದಾಗಿ ಸಹಜವಾಗಿಯೇ ಕಾಫಿ ವ್ಯಾಪಾರಸ್ಥರು ಈ ಉದ್ಯಮದಲ್ಲಿ ತಮ್ಮನ್ನು ತೊಡಗಿಸಿಕೊಂಡರು. ಅಲ್ಲದೆ, ಬೆಳೆಗಾರರು ವ್ಯಾಪಾರಿಗಳನ್ನು ಮತ್ತು ವ್ಯಾಪಾರಿಗಳು ಬೆಳೆಗಾರರನ್ನು ಆಶ್ರಯಿಸುವುದು ಈ ಉದ್ಯಮದಲ್ಲಿ ಅನಿವಾರ್ಯವಾಯಿತು. ಇತ್ತೀಚಿನ ಕೆಲ ವರ್ಷದವರೆಗೂ ಕಾಫಿ ಬೆಳೆಗಾರರ ಮತ್ತು ಕಾಫಿ ವ್ಯಾಪಾರಿಗಳ ಮಧ್ಯೆ ಉತ್ತಮ ವಿಶ್ವಾಸನೀಯ ಸಂಬಂಧವಿತ್ತು. 2017ರ ಜುಲೈನಿಂದ ಕೇಂದ್ರ ಸರಕಾರ ಜಿಎಸ್ಟಿ ಜಾರಿಗೆ ತಂದ ಬಳಿಕ ಕಾಫಿ ಉದ್ಯಮಕ್ಕೆ ನಿಗದಿಯಾಗಿದ್ದ ಶೇ.5.5% ಮೌಲ್ಯವರ್ಧಿತ ತೆರಿಗೆ (ವ್ಯಾಟ್)ರದ್ದುಗೊಂಡಿತ್ತು. ಅಲ್ಲದೆ ಕೇಂದ್ರ ಸರಕಾರ ಕಾಫಿಯನ್ನು ಜಿಎಸ್ಟಿಯಿಂದ ಹೊರತುಪಡಿಸಿತು. ಇದರಿಂದ ಕಾಫಿ ಉದ್ಯಮಕ್ಕೆ ಯಾವುದೇ ತೆರಿಗೆ ನೋಂದಣಿ ಇಲ್ಲದೆ ವ್ಯಾಪಾರಸ್ಥರ ಸಂಖ್ಯೆ ಹಿಂದಿಗಿಂತಲೂ ಹೆಚ್ಚಾಯಿತು.

1995ರಿಂದ 2014ರವರೆಗೆ ರೋಬಸ್ಟ ಮತ್ತು ಅರಬಿಕಾ ಕಾಫಿಗೆ ನಿಗದಿತ ಮಾರುಕಟ್ಟೆ ಬೆಲೆಯಲ್ಲಿ ವ್ಯವಹಾರ ನಡೆಯುತ್ತಿತ್ತು. ಈ ವೇಳೆ ಯಾವುದೇ ಔಟ್ ಟರ್ನ್ ಗೊಂದಲವಿರಲಿಲ್ಲ. ಈ ಅವಧಿಯಲ್ಲಿ ಕಾಫಿ ವ್ಯಾಪಾರಿಗಳ ಸಂಖ್ಯೆಯು ಅಷ್ಟಾಗಿ ಇರಲಿಲ್ಲ. ಕೊಡಗಿನಲ್ಲಿ ಉಂಟಾದ ಮಳೆಯ ಏರುಪೇರು, ರಸಗೊಬ್ಬರದ ಗುಣಮಟ್ಟ ಹಾಗೂ ಜಿಲ್ಲೆಯ ಹವಾಮಾನ ವೈಫಲ್ಯದಿಂದಾಗಿ ಕೊಡಗಿನ ಕಾಫಿ ಕೃಷಿಯ ಇಳುವರಿಯಲ್ಲಿ ಗಣನೀಯವಾದ ವ್ಯತ್ಯಯ ಕಂಡು ಬರತೊಡಗಿತು. ಇದರಿಂದ 2014-15 ಸಾಲಿನಿಂದ ಔಟ್ ಟರ್ನ್ ಲೆಕ್ಕಾಚಾರದಲ್ಲಿ ಕಾಫಿ ಖರೀದಿ ಆರಂಭಗೊಂಡಿತು. ಇದೀಗ ಸಂಪೂರ್ಣವಾಗಿ ಔಟ್ ಟರ್ನ್ ಲೆಕ್ಕಾಚಾರದಲ್ಲೇ ಕಾಫಿ ವಹಿವಾಟು ನಡೆಯುತ್ತಿದೆ. ಒಂದು ಹಂತದಲ್ಲಿ ಔಟ್ ಟರ್ನ್ ಮತ್ತು ತೇವಾಂಶದ ಆಧಾರದಲ್ಲಿ ಪ್ರಾಮಾಣಿಕವಾಗಿ ವ್ಯಾಪಾರ ನಡೆದರೆ ಬೆಳೆದ ಬೆಳೆಗಾರರಿಗೂ, ಖರೀದಿಸುವ ವ್ಯಾಪಾರಿಗಳಿಗೂ ಯಾವುದೇ ನಷ್ಟವಿಲ್ಲ. ಆದರೆ ಇದರೊಳಗೆ ಮೋಸ ನುಸುಳಿದರೆ ಅಂತಿಮವಾಗಿ ಬೆಳೆಗಾರ ಮಾತ್ರ ಕಂಗಾಲಾಗುತ್ತಾನೆ.

ಕಾಫಿ ವ್ಯಾಪಾರದಲ್ಲಿ ಮೋಸ ಹೇಗೆ?: ಒಣಗಿದ ಕಾಫಿಯಲ್ಲಿ ಗರಿಷ್ಠ ತೇವಾಂಶ ಶೇ.13%ರಷ್ಟು ಇರಬೇಕು ಎಂಬುದು ಉದ್ದಿಮೆಯ ನಿಯಮ. ಇದಕ್ಕಿಂತ ಜಾಸ್ತಿ ಇದ್ದರೆ ತಲಾ ಶೇ.1% ತೇವಾಂಶಕ್ಕೆ 50 ಕೆ.ಜಿ. ಕಾಫಿ ಚೀಲವೊಂದರಿಂದ 500 ಗ್ರಾ. ಕಾಫಿಯನ್ನು ಕಡಿತಗೊಳಿಸಲಾಗುತ್ತದೆ. ಶೇ.2% ರಷ್ಟು ತೇವಾಂಶವಿದ್ದರೆ 1ಕೆ.ಜಿ. ಕಡಿತಗೊಳಿಸಲಾಗುತ್ತದೆ. ಒಣಗಿಸಿದ ಕಣದಿಂದಲೇ ಮಾರಾಟ ಮಾಡುವ ಸಂದರ್ಭದಲ್ಲಿ ಕೆಲವೊಮ್ಮೆ ಶೇ. 18% ರಿಂದ 25% ರವರೆಗೆ ತೇವಾಂಶ ಇರುತ್ತದೆ. ಇದನ್ನು ಪ್ರಾಮಾಣಿಕ ವ್ಯಾಪಾರಿಗಳಿಗೆ ಮಾರುಕಟ್ಟೆ ಬೆಲೆಗೆ ಖರೀದಿಸಲು ಸಾಧ್ಯವಾಗುವುದಿಲ್ಲ.

ಈ ಸಂದರ್ಭವನ್ನೆ ದುರುಪಯೋಗ ಪಡಿಸಲು ಕೆಲ ವಂಚಕ ವ್ಯಾಪಾರಿಗಳು ಕಾಯುತ್ತಿರುತ್ತಾರೆ. ತೇವಾಂಶ ಅಧಿಕವಿದ್ದರೂ ಮಾರುಕಟ್ಟೆ ದರಕ್ಕಿಂತ ರೂ. 50 ರಿಂದ 150 ಹಣ ಜಾಸ್ತಿ ನೀಡುವ ಆಮಿಷವನ್ನು ಬೆಳಗಾರರಿಗೆ ತೋರಿ ಸುತ್ತಾರೆ. ಮೊದಲೇ ಹೆಚ್ಚಿನ ಬೆಲೆಯ ನಿರೀಕ್ಷೆಯಲ್ಲಿರುವ ಕೆಲ ಮುಗ್ಧ ಬೆಳೆಗಾರರು ಈ ಸಂದರ್ಭದಲ್ಲಿ ‘ಡೀಲ್' ಕುದುರಿಸುತ್ತಾರೆ. ಮೋಸವಾಗುವುದೇ ಇಲ್ಲಿ.

ಅಧಿಕ ತೇವಾಂಶ ಮತ್ತು ಕಡಿಮೆ ಔಟ್ ಟರ್ನ್ ಇರುವ ಕಾಫಿಯನ್ನು ಮಾರುಕಟ್ಟೆ ಬೆಲೆಗಿಂತ ಹೆಚ್ಚಿನ ಬೆಲೆಗೆ ವ್ಯಾಪಾರಿಗಳು ಖರೀದಿಸುತ್ತಾರೆ ಎಂದರೆ ಅದು ಮೋಸವಲ್ಲದೆ ಮತ್ತೇನು ಅಲ್ಲ. ಕಣ್ಣಿಗೆ ಕಣ್ಣಿಟ್ಟು ನೋಡಿದರೂ ಇವರ ಮೋಸದ ತಂತ್ರವನ್ನು ಪತ್ತೆ ಹಚ್ಚುವುದು ಅಷ್ಟು ಸುಲಭವಲ್ಲ. ಕಡಿಮೆ ಔಟ್ ಟರ್ನ್ ಇರುವ ಮತ್ತು ಅಧಿಕ ತೇವಾಂಶವಿರುವ ಕಾಫಿಯನ್ನು ಹೆಚ್ಚಿನ ಬೆಲೆಗೆ ಖರೀದಿಸುತ್ತಾರೆ ಎಂದರೆ ಒಂದೋ ತೂಕದಲ್ಲಿ ಅಥವಾ ಚೀಲ ಲೆಕ್ಕದಲ್ಲಿ ಅಥವಾ ಅಟ್ಟಿ ಲೆಕ್ಕದಲ್ಲಿ ಮೋಸ ಶತಸಿದ್ಧವೆಂದೇ ಅರ್ಥ. ಇಲ್ಲವೇ 2ರಿಂದ 3 ತಿಂಗಳ ಅವಧಿಗೆ ರೂ.200ರಿಂದ 300 ಹಣ ಜಾಸ್ತಿ ನೀಡುವುದಾಗಿ ಬೆಳೆಗಾರರನ್ನು ನಂಬಿಸಿ ಕೊಂಡೊಯ್ಯುತ್ತಾರೆ. ಇಲ್ಲಿಯೂ ಪಂಗನಾಮದ ಸಾಧ್ಯತೆ ಹೆಚ್ಚಿರುತ್ತದೆ. ವಿಶೇಷವೇನೆಂದರೆ ಹೆಚ್ಚಿನ ಬೆಲೆಗೆ ಕೆಲ ವ್ಯಾಪಾರಿಗಳು ಕಾಫೀ ಖರೀದಿಸಿ ಅದನ್ನು ಅಂದೇ ಅಂದಿನ ಮಾರುಕಟ್ಟೆ ದರದಲ್ಲಿ ಬೇರೆ ಬೇರೆ ಹೋಲ್ಸೇಲ್ ವ್ಯಾಪಾರಿಗಳಿಗೆ ಮಾರಾಟ ಮಾಡುತ್ತಾರೆ. ಹಾಗಾದರೆ ಅಧಿಕ ಬೆಲೆ ನೀಡಿ ಕಾಫಿ ಖರೀದಿಸುವ ಹಿಂದಿರುವ ರಹಸ್ಯವೇನು ಎಂಬುದನ್ನು ಉಳಿಸಿಕೊಳ್ಳಬೇಕಾಗುತ್ತದೆ.

ಮತ್ತೊಂದು ಉದಾಹರಣೆ ಹೇಳುವುದಾದರೆ, ಇಂದಿನ ಮಾರುಕಟ್ಟೆ ದರದಲ್ಲಿ ರೊಬಸ್ಟ ಚೆರಿ 50ಕೆ.ಜಿ. ಕಾಫಿಗೆ ರೂ.3100 ಎಂದು ಕೆಲವು ಕಾಫಿ ಖರೀದಿ ಅಂಗಡಿಗಳ ಮುಂದೆ ಬೋರ್ಡ್ ಹಾಕಲಾಗಿರುತ್ತದೆ. ಇದನ್ನೇ ನಂಬಿ ಬೇರೆ ಬೇರೆ ಪ್ರದೇಶಗಳಿಂದ ಕಾಫಿಯನ್ನು ತರುವ ಮುಗ್ಧ ಬೆಳೆಗಾರರು ಕೊನೆಗೆ ತಮ್ಮ ಔಟ್ ಟರ್ನ್ ಆಧಾರದಲ್ಲಿ ಅವರಿಗೆ ದಕ್ಕುವುದು ರೂ.2900 ಹಣ ಮಾತ್ರ. ರೂ.3100ರ ಆಸೆಯಿಂದ ಬಂದ ಬಡ ಬೆಳೆಗಾರ, ವ್ಯಾಪಾರಿ ನೀಡಿದ ಹಣವನ್ನು ಪಡೆದು ನಿರಾಸೆಯಿಂದ ಮರಳುತ್ತಾರೆ. ಇದು ಇದೀಗ ಸಾಮಾನ್ಯವಾಗಿಬಿಟ್ಟಿದೆ.

ಪರಿಹಾರವೇನು?: ಬೆಳಗಾರರಿಗೆ ಇಂದು ಮಾರುಕಟ್ಟೆ ಧರ ತಿಳಿಯಲು ಅಂಗೈನಲ್ಲಿ ತಂತ್ರಜ್ಞಾನವಿದೆ. ಇದರಿಂದ ದೈನಂದಿನ ಕಾಫಿ ಮಾರುಕಟ್ಟೆಯ ವಿವರವನ್ನು ಕ್ಷಣಕ್ಷಣವೂ ತಿಳಿಯಬಹುದಾಗಿದೆ. ಗರಿಷ್ಠ ಶೇ. 13%ರಷ್ಟು ತೇವಾಂಶ ಮಾತ್ರವಿರುವಂತೆ ಕಾಫಿಯನ್ನು ಒಣಗಿಸಿ ತಮ್ಮ ತೂಕದ ಯಂತ್ರದಲ್ಲೇ ಕಾಫಿಯನ್ನು ತೂಗಿ ಚೀಲದಲ್ಲಿ ಸಂಗ್ರಹಿಸಿಡಬೇಕು. ತೇವಾಂಶ ಶೇ. 13%ಕ್ಕಿಂತ ಕಡಿಮೆಯಾದರೆ ಅಲ್ಲಿಯೂ ಬೆಳೆಗಾರನಿಗೆ ನಷ್ಟವಾಗುತ್ತದೆ. ಈ ಬಗ್ಗೆಯೂ ಬೆಳಗಾರರು ಗಮನಹರಿಸಬೇಕಿದೆ. ಅಲ್ಲದೆ ಕಾಫಿಯ ಔಟ್ ಟರ್ನ್‍ನನ್ನು ತಾವೇ ಪರೀಕ್ಷಿಸಿ ಖಾತ್ರಿಪಡಿಸಿಕೊಳ್ಳಬೇಕು. ಔಟ್ ಟರ್ನ್ ನಿರ್ಧರಿಸುವ ಅಧಿಕಾರವನ್ನು ವ್ಯಾಪಾರಿಗಳಿಗೆ ನೀಡದೆ ಬೆಳೆಗಾರರೇ ಖಚಿತಪಡಿಸಿಕೊಳ್ಳಬೇಕು. ಇದೀಗ ರೂ. 1000 ಮೊತ್ತಕ್ಕೆ ಔಟ್ ಟರ್ನ್ ಪರೀಕ್ಷಿಸುವ ಯಂತ್ರ ದೊರೆಯುವುದರಿಂದ ಪ್ರತಿ ಬೆಳೆಗಾರರು ತಮ್ಮ ಅನುಕೂಲಕ್ಕಾಗಿ ಇದನ್ನು ಇಟ್ಟುಕೊಳ್ಳುವುದು ಒಳ್ಳೆಯದು.

ನಂತರ ತಮ್ಮ ನಿರೀಕ್ಷಿತ ಮಾರುಕಟ್ಟೆ ಬೆಲೆಗೆ ವ್ಯಾಪಾರಿಗಳು ಒಪ್ಪುವುದಾದರೆ ತಾವೇ ತೂಗಿದ ಕಾಫಿಯನ್ನು ಲಾರಿಗೆ ತುಂಬಿಸಿ ಕಳಿಸಬೇಕು. ಇದಕ್ಕೂ ಮೊದಲು ಹಣ ಪಡೆದುಕೊಂಡಿರಬೇಕು. ಇದರಿಂದ ಮೋಸವನ್ನು ನಿಯಂತ್ರಿಸಬಹುದಾಗಿದೆ. ಅಲ್ಲದೆ ಹೀಗಾದರೆ ಯಾವ ವ್ಯಾಪಾರಿಯೂ ಬೆಳೆಗಾರರಿಗೆ ‘ಅಧಿಕ ಬೆಲೆ’ಯ ಆಮಿಷ ತೋರದೆ ಯೋಗ್ಯ ಬೆಲೆಯಲ್ಲಿ ಕಾಫಿ ಖರೀದಿಸುವುದು ಅನಿವಾರ್ಯವಾಗುತ್ತದೆ.