ಜ್ಞಾನ ಪೂರ್ಣವಾಗಬೇಕಾದರೆ ಮನಸ್ಸು ಬುದ್ಧಿಯಲ್ಲಿ, ಲಯಬೇಕು ಎನ್ನುವರು. ಇದನ್ನು ಶಿವರಾತ್ರಿಯ ತತ್ವ ತಿಳಿಸುತ್ತದೆ. ಶಿವನ ಆರಾಧನೆಗೆ ಒಳ್ಳೆಯ ಪರ್ವಕಾಲ ಶಿವರಾತ್ರಿ. ಶಿವನನ್ನು ಈಶ್ವರ, ಶಿವ, ಶಂಕರ ರುದ್ರ ಎಂದು ಹಲವಾರು ನಾಮಗಳಿಂದ ಕರೆಯುವರು. ಶಿವ ಎಂದರೆ ಈಶ್ವರ; ಲೋಕದ ಒಡೆಯ, ಶಂಕರ ಪ್ರಪಂಚಕ್ಕೆ ಶುಭತರುವವನು, ಶಿವನ ಉಪಾಸನೆಯನ್ನು ಹಿಂದಿನಿಂದಲೂ ಮಾಡುತ್ತಾ ಬಂದಿರುವರು. ಶಿವ ಎಂದರೆ ಮುಕ್ಕಣ್ಣ, ಮೂರು ಕಣ್ಣುಳ್ಳವನೆಂದರ್ಥ. ಮೂರನೆಯ ಕಣ್ಣು ಜ್ಞಾನದ ಕಣ್ಣು, ಶಿವನ ವಾಹನ ವೃಷಭ (ನಂದಿ) ಶಿವನು ನಾಗಾಭರಣ. ನಾಗ ಎಂದರೆ ಹಾವು, ನಾಗನನ್ನು ಶಿವ ಆಭರಣವನ್ನಾಗಿ ಧರಿಸುವದರ ಸಂಕೇತ ಕಾಮ, ರೋಗಗಳನ್ನು ಆತ್ಮ ಅಂಕೆಯಲ್ಲಿ ಇರಿಸಿಕೊಂಡಿರು ವದು, ಭಸ್ಮ ಲೇಪನ-ಶಿವನು ವಿಭೂತಿ ಪುರುಷ, ಭಸ್ಮ ಆರೋಗ್ಯ ಹಾಗೂ ವೈರಾಗ್ಯವನ್ನು ಸೂಚಿಸುವದು, ಶಿವ ನೀಲಕಂಠ. ವಿಶ್ವಕ್ಕೆ ಬಾದೆ ಉಂಟು ಮಾಡುವ ಅಜ್ಞಾನದ ಕೆಡುಕನ್ನು ವಿಷದ ಮೂಲಕ ಹೀರಿ ಕಂಠದಲ್ಲಿ ಧರಿಸಿದ್ದಾನೆಂದು ಹೇಳುವರು, ಶಿವನ ಪ್ರತೀಕಗಳಲ್ಲಿ ಲಿಂಗಕ್ಕೆ ಹೆಚ್ಚಿನ ಮಹತ್ವ. ದೇಹವೇ ದೇಗುಲ; ಜೀವನವೇ ಶಿವ, ಅಜ್ಞಾನವನ್ನು ಕಿತ್ತೆಸೆದು ನಾನೇ ಅವನೆಂಬ ಭಾವದಿಂದ ಶಿವನನ್ನು ಪೂಜಿಸಬೇಕೆಂದು ಬಸವಣ್ಣನವರ ವಚನಗಳಲ್ಲಿ ತಿಳಿಸಲಾಗಿದೆ.

ಶಿವರಾತ್ರಿಯ ಕಥೆಗಳ ಕೇಂದ್ರ ಬಿಂದುವೇ ಬೇಡರ ಕಣ್ಣಪ್ಪ. ಬೇಡರ ಕಣ್ಣಪ್ಪನು ಬೇಡನಾದರೂ ತನ್ನ ಶುದ್ಧ ಭಕ್ತಿಯಿಂದ, ಬಾಣಗಳಿಂದ ತನ್ನ ಕಣ್ಣನ್ನು ಕಿತ್ತು ಶಿವನಿಗೆ ನೀಡಿದನೆಂಬ ಪುರಾಣ ಕತೆಯುಂಟು. ಶಿವರಾತ್ರಿ ಆಧ್ಯಾತ್ಮ ದರ್ಶನಗಳ ಮಹಾರಾತ್ರಿ. ಶಿವಭಕ್ತಿ, ಶಿವಧ್ಯಾನದ ಸಂಗಮದ ಶುಭರಾತ್ರಿ, ಶಿವರಾತ್ರಿಯ ಆಚರಣೆಗಳು ನಮ್ಮಲ್ಲಿ ಜನಪ್ರಿಯತೆ ಪಡೆದಿವೆ. ಅಂದು ಶಿವಧ್ಯಾನ ಮನೆ, ದೇವಸ್ಥಾನಗಳಲ್ಲಿ ನಿರಂತರ ಪೂಜೆ, ಶಿವಭಜನೆ ಮಂತ್ರೋಚ್ಛಾರಣೆ, ಅರ್ಚನೆ, ಅಭಿಷೇಕ, ಕೀರ್ತನೆ, ಉಪವಾಸ, ಜಾಗರಣೆಗಳು ನಡೆಯುವವು. ಶಿವನು ಲೋಕದ ಜನರಿಗಾಗಿ ಅಂದು ಅವತರಿಸಿ ಬಂದಾಗ ನಿದ್ರೆಯಿಲ್ಲದೆ ಜಾಗರೂಕ ರಾಗಿದ್ದು, ಜಾಗರಣೆ ಮಾಡುವರು. ರುದ್ರಾಭಿಷೇಕ, ಬಿಲ್ವ ಪತ್ರಾರ್ಚಣೆ, ಪಂಚಾಕ್ಷರಿ ಮಂತ್ರ ಶಿವನಿಗೆ ಸಮರ್ಪಿಸುವರು.

?ಚೊಟ್ಟೆಯಂಡಮಾಡ ಲಲಿತಕಾರ್ಯಪ್ಪ,

ಟಿ.ಶೆಟ್ಟಿಗೇರಿ.