ಶನಿವಾರಸಂತೆ, ಫೆ. 18: ರಾಜಕೀಯ ನಾಯಕತ್ವ, ಅಧಿಕಾರ ವಹಿಸಿಕೊಂಡವರು ಸಮಚಿತ್ತದಿಂದ ಸಮಾಲೋಚನೆ ನಡೆಸಿ ಪಕ್ಷ ಸಂಘಟನೆ ಮಾಡಿಕೊಳ್ಳಬೇಕು ಎಂದು ಕೆಪಿಸಿಸಿ ಸದಸ್ಯ ಟಿ.ಪಿ. ರಮೇಶ್ ಸಲಹೆ ನೀಡಿದರು. ಪಟ್ಟಣದ ಶ್ರೀ ರಾಮ ಮಂದಿರದ ಸಮುದಾಯ ಭವನದಲ್ಲಿ ನಡೆದ ಕಾಂಗ್ರೆಸ್ ಕಾರ್ಯಕರ್ತರ ಸಭೆಯಲ್ಲಿ ಅವರು ಮಾತನಾಡಿದರು.

ವಕೀಲ ಚಂದ್ರಮೌಳಿ ಮಾತನಾಡಿ, ನಾಯಕತ್ವದ ಕೊರತೆಯಿಂದ ಪಕ್ಷದ ಕಾರ್ಯಕರ್ತರಲ್ಲಿ ಭಿನ್ನಾಭಿಪ್ರಾಯಗಳು ಮೂಡುತ್ತಿವೆ. ಗುಂಪುಗಾರಿಕೆಯಿಂದ ಹೊರಬರಬೇಕು ಎಂದರು. ಕುಶಾಲನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬಿ.ಎಸ್. ಅನಂತಕುಮಾರ್ ಮಾತನಾಡಿ, ಪಕ್ಷದ ಕಾರ್ಯಕರ್ತರ ಸಂಘಟನೆ ಬೂತ್ ಅಧ್ಯಕ್ಷರ ಹೊಣೆ ಯಾಗಿದ್ದು, ಕ್ರಿಯಾಶೀಲರಾಗಬೇಕು ಎಂದು ಕರೆ ನೀಡಿದರು.

ಮುಖಂಡ ಕೆ.ಎಂ. ಲೋಕೇಶ್ ಮಾತನಾಡಿ, ಚುನಾವಣೆ ಬಂದಾಗ ಕಾರ್ಯಕರ್ತರಲ್ಲಿ ಭಿನ್ನಾಭಿಪ್ರಾಯ ಮೂಡುವುದು ಸಹಜ. ಒಗ್ಗಟ್ಟು ಮುಖ್ಯವಾಗಿದ್ದು, ಕೆಲಸ ಮಾಡುವ ನಿಷ್ಟಾವಂತ ಕಾರ್ಯಕರ್ತರಿಗೆ ಟಿಕೆಟ್ ನೀಡಬೇಕು ಎಂದರು. ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಕೆ.ಕೆ. ಮಂಜುನಾಥ್ ಮಾತನಾಡಿ, ಕಾಂಗ್ರೆಸ್ ಚುನಾವಣಾ ತಂತ್ರಗಾರಿಕೆಯಲ್ಲಿ ಎಡವಿದೆ. ಬಿ.ಜೆ.ಪಿ. ಜನವಿರೋಧಿ ಪಕ್ಷ ಎಂಬುದರ ವಿಶ್ಲೇಷಣೆಯಾಗಬೇಕು ಎಂದರು.

ಅಧ್ಯಕ್ಷತೆ ವಹಿಸಿದ್ದ ಸೋಮವಾರಪೇಟೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಡಿ.ಪಿ. ಸತೀಶ್ ಮಾತನಾಡಿ, ಪಕ್ಷದ ಹಿರಿಯರನ್ನು ಗುರುತಿಸಿ ಗೌರವಿಸಬೇಕು ಎಂದರು. ಹಂಡ್ಲಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ನೂತನ ಅಧ್ಯಕ್ಷ ವೀರೇಂದ್ರ ಹಾಗೂ ಶನಿವಾರಸಂತೆ ಸಹಕಾರ ಸಂಘದ ನೂತನ ನಿರ್ದೇಶಕ ಎಸ್.ಯು. ಆನಂದ್ ಅವರನ್ನು ಸನ್ಮಾನಿಸಲಾಯಿತು. ಪಕ್ಷದ ವಕ್ತಾರ ಎಸ್.ಎಂ. ಚಂಗಪ್ಪ, ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷೆ ರಾಜಮ್ಮ ರುದ್ರಯ್ಯ, ತಾಲೂಕು ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಶೀಲಾ ಡಿಸೋಜ, ಹೋಬಳಿ ಅಧ್ಯಕ್ಷ ಅಬ್ಬಾಸ್, ವಲಯ ಅಧ್ಯಕ್ಷ ಬಿ.ಟಿ. ರಂಗಸ್ವಾಮಿ, ಅಲ್ಪಸಂಖ್ಯಾತರ ತಾಲೂಕು ಘಟಕದ ಅಧ್ಯಕ್ಷ ಶಾಹಿದ್ ಖಾನ್, ಪ್ರಮುಖ ಮಹಮ್ಮದ್ ಪಾಶ, ವಿವಿಧ ಬೂತ್ ಪದಾಧಿಕಾರಿಗಳು ಉಪಸ್ಥಿತರಿದ್ದರು.