ಕುಶಾಲನಗರ, ಫೆ. 18: ಕುಶಾಲನಗರ ಸಮೀಪದ ಉದ್ಯಮಿಯೊಬ್ಬರು ತನ್ನ ಮಗಳ ಹುಟ್ಟುಹಬ್ಬವನ್ನು ಸಮಾಜ ಸೇವೆ ಮಾಡುವ ಮೂಲಕ ಆಚರಿಸಿದ ಬಗ್ಗೆ ವರದಿಯಾಗಿದೆ.

ಬಸವನಹಳ್ಳಿಯ ಧಾತ್ರಿ ಕಂಸ್ಟ್ರಕ್ಷನ್ ಮಾಲೀಕ ಬಾಲಕೃಷ್ಣ ಅವರು ತಮ್ಮ ಪುತ್ರಿ ಧಾತ್ರಿ ಹುಟ್ಟುಹಬ್ಬದ ನೆನಪಿಗಾಗಿ ಕುಶಾಲನಗರ ಮಹಿಳಾ ಸಮಾಜದ ನರ್ಸರಿ ಆವರಣವನ್ನು ಜೆಸಿಬಿ ಬಳಸುವ ಮೂಲಕ ಉಚಿತವಾಗಿ ಸಮತಟ್ಟುಗೊಳಿಸುವ ಕಾರ್ಯ ನಡೆಸಿದ್ದಾರೆ.

ಮಹಿಳಾ ಸಮಾಜದ ನರ್ಸರಿ ಶಾಲೆಯಲ್ಲಿ ನೂರಾರು ಪುಟ್ಟ ಮಕ್ಕಳು ಕಲಿಯುತ್ತಿದ್ದು ಅವರು ಆಟೋಟ ಚಟುವಟಿಕೆ ಮತ್ತಿತರ ಕಾರ್ಯಕ್ರಮಗಳಿಗೆ ಸಹಕಾರವಾಗುವ ನಿಟ್ಟಿನಲ್ಲಿ ಅಂದಾಜು ರೂ. 13 ಸಾವಿರ ವೆಚ್ಚದಲ್ಲಿ ಈ ಕಾಮಗಾರಿ ನಡೆಸಿದ್ದಾರೆ. ಕಳೆದ 4 ವರ್ಷಗಳಿಂದಲೂ ಕೂಡ ಪ್ರತಿ ವರ್ಷ ತಮ್ಮ ಪುತ್ರಿಯ ಹುಟ್ಟುಹಬ್ಬಕ್ಕೆ ಬಾಲಕೃಷ್ಣ ಹಲವು ಸಾಮಾಜಿಕ ಕಾರ್ಯಗಳನ್ನು ಕೈಗೊಳ್ಳುತ್ತಿರುವ ಮೂಲಕ ಜನಮನ್ನಣೆಗಳಿಸಿದ್ದಾರೆ. ಕಳೆದ ಬಾರಿ ಬಸವನಹಳ್ಳಿಯ ಅಂಗನವಾಡಿ ಕಟ್ಟಡಕ್ಕೆ ಬಣ್ಣ ಬಳಿಯುವ ಮೂಲಕ ಮೂಲಭೂತ ಸೌಲಭ್ಯ ಕಲ್ಪಿಸಿದ್ದರು.