ಶ್ರೀಮಂಗಲ, ಫೆ. 18: ತಾ. 16ರ ರಾತ್ರಿ ಟಿ.ಶೆಟ್ಟಿಗೇರಿಯ ಮುಖ್ಯ ರಸ್ತೆಯಲ್ಲಿ ಪಾದಚಾರಿಗೆ ಬೈಕ್ ಡಿಕ್ಕಿಯಾಗಿ ಮೃತಪಟ್ಟಿದ್ದು, ಆತನೊಂದಿಗೆ ಇದ್ದ 4 ವರ್ಷದ ಗಂಡು ಮಗು ಅನಾಥವಾಗಿತ್ತು. ಆದರೆ, ಶ್ರೀಮಂಗಲ ಪೊಲೀಸರ ನಿರಂತರ ಪ್ರಯತ್ನದಿಂದ ಮಗುವಿನ ಸಂಬಂಧಿಕರನ್ನು ಪತ್ತೆ ಹಚ್ಚಲಾಗಿದ್ದು; ಸಂಬಂಧಿಕರಿಗೆ ಮಗುವನ್ನು ಹಸ್ತಾಂತರಿಸಲಾಗಿದೆ.

ತಿತಿಮತಿ ಸಮೀಪ ಬೆಳೆಗಾರ ಒಕ್ಕಲಿಗರ ಮಹೇಶ್ ಎಂಬವರಲ್ಲಿ ಕಾರ್ಮಿಕರಾಗಿದ್ದ ಮಣಿಯನ್ನು ಬಿಟ್ಟು ಪತ್ನಿಕಾವೇರಿ ಟಿ.ಶೆಟ್ಟಿಗೇರಿ ಸಮೀಪ ಹರಿಹರ ಗ್ರಾಮದ ಸಂಬಂಧಿಕರಲ್ಲಿಗೆ ಬಂದಿದ್ದಳು. ಹಲವು ದಿನದಿಂದ ಬಾರದೇ ಇದ್ದುದ್ದಕ್ಕಾಗಿ ಪತ್ನಿಯನ್ನು ಹುಡುಕಿಕೊಂಡು 4 ವರ್ಷದ ಮಗುವಿನೊಂದಿಗೆ ಟಿ.ಶೆಟ್ಟಿಗೇರಿಗೆ ಭಾನುವಾರ ರಾತ್ರಿ ಬಂದಿದ್ದ ಮಣಿಗೆ ರಾತ್ರಿಯಾದ ಕಾರಣ ದಾರಿ ತೋಚದೆ ಹರಿಹರಗ್ರಾಮಕ್ಕೆ ತೆರಳುವ ಬದಲು ಟಿ.ಶೆಟ್ಟಿಗೇರಿಯಿಂದ ಶ್ರೀಮಂಗಲ ಕಡೆಗೆ ಮುಖ್ಯ ರಸ್ತೆಯಲ್ಲಿ ತೆರಳುತ್ತಿದ್ದ ಸಂದರ್ಭ ಬೈಕ್‍ಡಿಕ್ಕಿಯಾಗಿದೆ.

ಕೆ.ಬಾಡಗ ಗ್ರಾಮದ ಪಿ.ಮಂದಣ್ಣ ಅವರು ಚಾಲಿಸುತ್ತಿದ್ದ ಬೈಕ್‍ಗೆ ಡಿಕ್ಕಿಯಾಗಿ ಗಾಯಗೊಂಡು ಆಸ್ಪತ್ರೆ ಯಲ್ಲಿ ಮಣಿ(35) ಮೃತಪಟ್ಟಿದ್ದರು. ತೀವ್ರಗಾಯ ಗೊಂಡಿದ್ದ ಮಣಿಯನ್ನು ಆಸ್ಪತ್ರೆಗೆ ಸೇರಿಸುವ ಸಂದರ್ಭ ತನ್ನ ಹೆಸರು ಮಣಿ ಎಂದು ಮಾತ್ರ ಹೇಳಿದ್ದು, ಹೆಚ್ಚಿನ ಮಾಹಿತಿ ಹೇಳಲು ಸಾಧ್ಯವಾಗಿರಲಿಲ್ಲ. ಮಣಿಯೊಂದಿಗೆ ಜೊತೆಯಲ್ಲಿದ್ದ ಮಗುವಿಗೂ ಸಣ್ಣ ಪುಟ್ಟ ಗಾಯವಾಗಿತ್ತು.

ಮಣಿ ಸಾವನ್ನಪ್ಪಿದ ಹಿನ್ನೆಲೆಯಲ್ಲಿ ಶ್ರೀಮಂಗಲ ಪೊಲೀಸರು ಮತ್ತು ಬೈಕ್ ಸವಾರ ಮಂದಣ್ಣ ಸೇರಿ ಮಗುವಿನ ಪೋಷಕರ ಪತ್ತೆಗೆ ನಿರಂತರ ಪ್ರಯತ್ನಪಟ್ಟಿದ್ದರು. ಮಗು ಸಹಿತ ಟಿ.ಶೆಟ್ಟಿಗೇರಿ, ಶ್ರೀಮಂಗಲ, ಕುಟ್ಟ, ವೀರಾಜಪೇಟೆ, ಗೋಣಿಕೊಪ್ಪದಲ್ಲಿ ವಿಚಾರಣೆ ಮಾಡಿದ್ದರು. ಸಾಮಾಜಿಕ ಜಾಲತಾಣ ದಲ್ಲಿ ಮಾಹಿತಿಯನ್ನು ಪೊಲೀಸರು ನೀಡಿದ್ದರು.ಈ ಹಿನ್ನೆಲೆ ತಿತಿಮತಿ ನೋಖ್ಯ ಗ್ರಾಮದ ಬೆಳೆಗಾರ ಮಹೇಶ್ ಅವರು ಪೊಲೀಸರನ್ನು ಸೋಮವಾರ ಸಂಜೆ ಸಂಪರ್ಕಿಸಿದ್ದಾರೆ.

ಬೆಳೆಗಾರ ಮಹೇಶ್ ಅವರಲ್ಲಿ ಮೃತಪಟ್ಟ ಮಣಿಯವರ ಹಿರಿಯ ಪುತ್ರ ಗಣೇಶ್ ಇದ್ದು, ಮಾಯಮುಡಿ ಗ್ರಾಮದಲ್ಲಿ ಮಣಿಯವರ ಸಹೋದರಿ ಇರುವುದು ಪತ್ತೆಯಾಗಿದೆ. ಅಪಘಾತ ಸಂದರ್ಭ ಮಣಿಯೊಂದಿಗಿದ್ದ ಮಗು ಮಣಿಯಕಿರಿಯ ಪುತ್ರ ಕೃಷ್ಣ ಎಂದು ಬೆಳೆಗಾರ ಮಹೇಶ್ ಮಾಹಿತಿ ನೀಡಿದ್ದಾರೆ. ಪೊಲೀಸರು ಮಗುವನ್ನು, ಮಗುವಿನ ಅಣ್ಣ ಹಾಗೂ ಮಾಲೀಕ ಮಹೇಶ್ ಅವರಿಗೆ ಒಪ್ಪಿಸಿದ್ದು, ಈ ಸಂದರ್ಭ ಸಂಬಂಧಿಕರನ್ನು ಕಂಡು ಮಗು ನಗುಮುಖದಿಂದ ತೆರಳಿತು ಎಂದು ಪೊಲೀಸರು ತಿಳಿಸಿದ್ದಾರೆ.

ಹರಿಹರಕ್ಕೆ ತೆರಳಿರುವ ಮಗುವಿನ ತಾಯಿಯನ್ನು ಪತ್ತೆ ಹಚ್ಚಿ ಕರೆತರುವುದಾಗಿ ಬೆಳೆಗಾರ ಮಹೇಶ್ ಮತ್ತು ಮಗುವಿನ ಅಣ್ಣ ತಿಳಿಸಿರುವುದಾಗಿ ಪೊಲೀಸರು ಮಾಹಿತಿ ನೀಡಿದ್ದಾರೆ. ಅಪಘಾತದಲ್ಲಿ ತಂದೆಯನ್ನು ಕಳೆದುಕೊಂಡು, ಗಾಯಗೊಂಡು ಅನಾಥವಾಗಿದ್ದ ಪುಟ್ಟ ಮಗು ನೋವಿನಲ್ಲಿಯೇ ಕೊನೆಗೆ ಸಂಬಂಧಿಕರ ಮಡಿಲು ಸೇರಿದೆ. ಗೋಣಿಕೊಪ್ಪ ಆರೋಗ್ಯ ಕೇಂದ್ರದಲ್ಲಿ ಇರಿಸಿದ್ದ ಮಣಿಯ ಮೃತದೇಹವನ್ನು ಪೊಲೀಸರು ಮರಣೋತ್ತರ ಪರೀಕ್ಷೆ ನಡೆಸಿ ಸಂಬಂಧಿಕರಿಗೆ ಒಪ್ಪಿದ್ದಾರೆ.

- ಹರೀಶ್‍ಮಾದಪ್ಪ