ಶನಿವಾರಸಂತೆ, ಫೆ. 18: ಪುಸ್ತಕ, ಪೀಸ್ ಅಫ್ ಚಾಕ್, ಡಸ್ಟರ್ ಹಿಡಿದು ಬರುತ್ತಿದ್ದ ಶಿಕ್ಷಕರು ಇವತ್ತು ಮಾತ್ರ ವಿಭಿನ್ನವಾಗಿ ಬಂದಿದ್ದರು. ತಲೆಯಲ್ಲೊಂದು ಟೋಪಿ, ಕೈಯಲ್ಲೊಂದು ಮ್ಯಾಜಿಕ್ ಸ್ಟಿಕ್ ಪಕ್ಕಾ ಜಾದುಗಾರನಂತೆ ಬಂದಿದ್ದರು. ವಿದ್ಯಾರ್ಥಿಗಳಲ್ಲಿ ಒಂದಷ್ಟು ಕೌಶಲ್ಯಯುಕ್ತ ಚಟುವಟಿಕೆಗಳನ್ನು ರೂಪಿಸಲು ಸಾರ್ವಜನಿಕ ಶಿಕ್ಷಣ ಇಲಾಖೆ ತಿಂಗಳ ಮೂರನೇ ಶನಿವಾರವನ್ನು ಬ್ಯಾಗ್ ಲೆಸ್ ದಿನವನ್ನಾಗಿ ಆಚರಣೆಗೆ ಆದೇಶಿಸಿದೆ. ಈ ನಿಟ್ಟಿನಲ್ಲಿ ಸರ್ಕಾರಿ ಶಾಲೆಗಳಲ್ಲಿ ತಿಂಗಳ ಮೂರನೇ ಶನಿವಾರ ವಿವಿಧ ಚಟುವಟಿಕೆಗಳನ್ನು ಆಚರಿಸ ಲಾಗುತ್ತಿದೆ. ಚಿತ್ರಕಲೆ, ಸಂಗೀತ, ನೃತ್ಯ, ಜಾನಪದ ಆಟಗಳು, ರಂಗೋಲಿ, ಮಕ್ಕಳ ಸಂತೆ ಹೀಗೆ ಹಲವಾರು ಚಟುವಟಿಕೆಗಳನ್ನು ಅಂದು ನಡೆಸಲಾಗುತ್ತದೆ. ಕೆಲ ಶಾಲೆಗಳಲ್ಲಿ ಈ ರೀತಿಯ ಚಟುವಟಿಕೆಗಳ ನಿರ್ವಹಣೆ ಕಂಡರೆ ಇನ್ನು ಕೆಲವು ಶಾಲೆಗಳಲ್ಲಿ ಅತ್ತ ಪಠ್ಯವು ಇಲ್ಲದೆ ಇತ್ತ ಚಟುವಟಿಕೆಯು ಇಲ್ಲದೆ ಆ ದಿನ ವ್ಯರ್ಥವಾಗುವುದು ಉಂಟು. ಆದರೆ ಶನಿವಾರಸಂತೆ ಸಮೀಪದ ಮುಳ್ಳೂರು ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಕ್ರಿಯಾಶೀಲ ಶಿಕ್ಷಕ ಸತೀಶ ಸಿ ಎಸ್ ವಿದ್ಯಾರ್ಥಿಗಳಿಗೆ ಮ್ಯಾಜಿಕ್ ಟ್ರಿಕ್ಸ್ ಹೇಳಿಕೊಡುವುದರ ಮೂಲಕ ವಿನೂತನವಾಗಿ ಬ್ಯಾಗ್ ರಹಿತ ದಿನವನ್ನು ಅರ್ಥಪೂರ್ಣವಾಗಿ ಆಚರಿಸಿದರು. ಮೆಜಿಷಿಯನ್ನರ ಕರೆಯದೆ ತಾವೇ ವಿದ್ಯಾರ್ಥಿಗಳಿಗಾಗಿ ಮ್ಯಾಜಿಕ್ ಕಲಿತು ಬೋಧಿಸಿದ್ದು ಇಲ್ಲಿ ವಿಶೇಷ. ವಿದ್ಯಾರ್ಥಿಗಳು ಕೂಡ ಅಷ್ಟೇ ಆಸಕ್ತಿಯಿಂದ ಕಾರ್ಯಕ್ರಮವನ್ನು ವೀಕ್ಷಿಸಿ ಸಂತಸಪಟ್ಟರಲ್ಲದೆ ತಾವು ಕೂಡ ಒಂದಷ್ಟು ಮ್ಯಾಜಿಕ್ ಆಟಗಳನ್ನು ಕರಗತ ಮಾಡಿಕೊಂಡು ಪ್ರದರ್ಶಿಸಿ ಅತೀವ ಆನಂದಪಟ್ಟರು
ವಾಸ್‍ನ್ನೊಳಗಿಂದ ತೆಗೆದ ಬಾಲ್ ಮತ್ತೆ ವಾಸ್‍ನೊಳಗೆ ಪ್ರತ್ಯಕ್ಷ ವಾಗುವುದು, ಮ್ಯಾಜಿಕ್ ಪ್ಯಾಡ್‍ನಲ್ಲಿ ಒಂದೊಮ್ಮೆ ಖಾಲಿ ಕಂಡರೆ ಮತ್ತೊಮ್ಮೆ ಚಿತ್ರ ಪ್ರತ್ಯಕ್ಷವಾಗುತ್ತಿತ್ತು, ಖಾಲಿ ಬ್ಯಾಟ್‍ನಲ್ಲಿ ನಕ್ಷತ್ರ ಗೋಚರ, ವಿವಿಧ ಅಳತೆಯ ಹಗ್ಗಗಳು ಒಂದೇ ಅಳತೆಯಾಗಿ ಗೋಚರಿಸುವುದು. ಕಾರ್ಡ್ ಮೇಲೆ ಇಟ್ಟ ಕಡ್ಡಿ ನಿರ್ವಾತದಲ್ಲಿ ಹಾಗೆಯೇ ನಿಲ್ಲುವುದು ಎಲ್ಲವನ್ನು ನೋಡುತ್ತಾ ವಿದ್ಯಾರ್ಥಿಗಳು ಓ.... ಎಂದು ಉದ್ಗರಿಸುತ್ತಾ ಆಶ್ಚರ್ಯಚಕಿತರಾಗಿ ವೀಕ್ಷಿಸುತ್ತಿದ್ದದ್ದು ವಿಶೇಷವಾಗಿತ್ತು. ತಂತಿ ಮತ್ತು ರಿಂಗ್, ಆಣಿಗಳ ಬಂಧ ಬಾಲ್ ಪಿರಮಿಡ್ ಹೀಗೆ ಹತ್ತು ಹಲವು ಫಜಲುಗಳನ್ನು ವಿದ್ಯಾರ್ಥಿ ಗಳು ಬಿಡಿಸಿ ಆನಂದಿಸಿದರು. 20ಕ್ಕೂ ಅಧಿಕ ಮ್ಯಾಜಿಕ್ ಟ್ರಿಕ್ಸ್‍ಗಳನ್ನು ನಿರ್ವಹಿಸಿದರಲ್ಲದೆ ಅವುಗಳನ್ನು ಬಿಡಿಸುವ ವಿಧಾನವನ್ನು ಕೂಡ ಅನಾವರಣಗೊಳಿಸಿದರು. ಶಿಕ್ಷಕ ಸತೀಶ್ ಮಾತನಾಡಿ, ಯಾವ ವಿದ್ಯಾರ್ಥಿಗಳಲ್ಲಿ ಯಾವ ಪ್ರತಿಭೆ ಅಡಗಿರುತ್ತದೆಯೋ ಗೊತ್ತಿಲ್ಲ, ಈ ಹಂತದಲ್ಲಿ ವಿದ್ಯಾರ್ಥಿಗಳಿಗೆ ಎಲ್ಲಾ ರೀತಿಯ ಚಟುವಟಿಕೆಗಳನ್ನು ಪರಿಚಯಿಸುವ ಪ್ರಯತ್ನ ಮಾಡುವುದು ನಮ್ಮ ಕರ್ತವ್ಯ ಎಂದು ತಿಳಿಸಿದರು. - ನರೇಶ್