ಮಡಿಕೇರಿ, ಫೆ. 18: ಕಳೆದೆರಡು ದಿನಗಳ ಹಿಂದೆ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಮಡಿಕೇರಿ ಬ್ಲಾಕ್ ಕಾಂಗ್ರೆಸ್ ಪದಾಧಿಕಾರಿಗಳು ಹಾಗೂ ಕಾರ್ಯಕರ್ತರ ಸಭೆಯೊಂದು ಜರುಗಿದ್ದು; ಈ ಸಭೆಯಲ್ಲಿ ವಿಚಾರವೊಂದಕ್ಕೆ ಸಂಬಂಧಿಸಿದಂತೆ ತೀವ್ರ ಅಸಮಾಧಾನ ವ್ಯಕ್ತಗೊಂಡ ಪ್ರಕರಣ ನಡೆದಿದೆ. ಈ ಕುರಿತಾಗಿ ಪಕ್ಷದ ಜಿಲ್ಲಾ ಅಧ್ಯಕ್ಷರಾಗಿರುವ ಕೆ.ಕೆ. ಮಂಜುನಾಥ್ ಅವರ ಕುರಿತಾಗಿಯೂ ಆಕ್ರೋಶ ವ್ಯಕ್ತಗೊಂಡಿರುವದಾಗಿ ತಿಳಿದು ಬಂದಿದೆ.ಸಭೆಯಲ್ಲಿ ಎಂಎಲ್ಸಿ ವೀಣಾ ಅಚ್ಚಯ್ಯ, ಕೆಪಿಸಿಸಿ ಸದಸ್ಯರಾದ ಕೆ.ಪಿ. ಚಂದ್ರಕಲಾ ಅವರುಗಳೂ ಹಾಜರಿದ್ದು; ಪ್ರಕರಣವನ್ನು ತಿಳಿಗೊಳಿಸಲು ಪ್ರಯಾಸ ಪಡಬೇಕಾಯಿತೆನ್ನಲಾಗಿದೆ. ಮಡಿಕೇರಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾಗಿರುವ ಅಪ್ರುರವೀಂದ್ರ ಅವರ ಅಧ್ಯಕ್ಷತೆಯಲ್ಲಿ ಈ ಸಭೆ ನಡೆದಿದ್ದು; ಮಡಿಕೇರಿ ಬ್ಲಾಕ್ನ ಅಧೀನದಲ್ಲಿ ಬರುತ್ತಿದ್ದು; ಮಡಿಕೇರಿ ನಗರ ಕಾಂಗ್ರೆಸ್ ಸಮಿತಿಯನ್ನು ಕೆಪಿಸಿಸಿಯ ಅಧಿಕೃತ ಅನುಮತಿ ಇಲ್ಲದೆ; ಜಿಲ್ಲಾ ಅಧ್ಯಕ್ಷರೇ ಮಡಿಕೇರಿ ನಗರ ಬ್ಲಾಕ್ ಕಾಂಗ್ರೆಸ್ ಎಂದು ರಚನೆ ಮಾಡಿದ್ದಾರೆ ಎಂಬ ವಿಚಾರ ಅಸಮಾಧಾನಕ್ಕೆ ಎಡೆಯಾಗಿತ್ತು.ಪ್ರಸ್ತುತ ಜಿಲ್ಲಾ ಕಾಂಗ್ರೆಸ್ನಲ್ಲಿ ಮಡಿಕೇರಿ ವಿಧಾನಸಭಾ ಕ್ಷೇತ್ರಕ್ಕೆ ಒಳಪಟ್ಟಂತೆ; ಮಡಿಕೇರಿ, ಕುಶಾಲನಗರ ಹಾಗೂ ಸೋಮವಾರಪೇಟೆ ಬ್ಲಾಕ್ ಹಾಗೂ ವೀರಾಜಪೇಟೆ ವಿಧಾನ ಸಭಾ ಕ್ಷೇತ್ರಕ್ಕೆ ಸಂಬಂಧಿಸಿದಂತೆ; ವೀರಾಜಪೇಟೆ, ನಾಪೋಕ್ಲು ಹಾಗೂ ಪೊನ್ನಂಪೇಟೆ ಬ್ಲಾಕ್ ಕಾಂಗ್ರೆಸ್ ಎಂಬ ಒಟ್ಟು ಆರು ಬ್ಲಾಕ್ಗಳು ಕಾರ್ಯನಿರ್ವಹಿಸುತ್ತಿವೆ.
ಆದರೆ ಈ ತನಕ ಮಡಿಕೇರಿ ಬ್ಲಾಕ್ನ ಅಧೀನದಲ್ಲಿ ಬರುತ್ತಿದ್ದ ಮಡಿಕೇರಿ ನಗರ ಕಾಂಗ್ರೆಸ್ ಸಮಿತಿಯನ್ನು ಈಗಿನ ಜಿಲ್ಲಾ ಅಧ್ಯಕ್ಷರೇ ತಮ್ಮದೇ ನಿರ್ಧಾರದಂತೆ ಪ್ರತ್ಯೇಕವಾಗಿ ಮಡಿಕೇರಿ ನಗರ ಬ್ಲಾಕ್ ಎಂಬದಾಗಿ ಬದಲಾಯಿಸಿದ್ದಾರೆ ಎಂಬದು ಈ ಸಭೆಯಲ್ಲಿ ಗೊಂದಲ ಸೃಷ್ಟಿಸಿತ್ತು.
ಈ ಬಗ್ಗೆ ಅಂದಿನ ಸಭೆಯಲ್ಲಿ ಸ್ವತಃ ಮಡಿಕೇರಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಅಪ್ರುರವೀಂದ್ರ ಸೇರಿದಂತೆ ಇನ್ನಿತರ ಹಲವಾರು ಕಾರ್ಯಕರ್ತರು, ಪ್ರಮುಖರು ಕಿಡಿಕಾರಿದ್ದಾರೆ. ಸಭೆಗೆ ಜಿಲ್ಲಾ ಅಧ್ಯಕ್ಷ ಕೆ.ಕೆ. ಮಂಜುನಾಥ್ ಕುಮಾರ್ ಅವರು ತಡವಾಗಿ ಆಗಮಿಸಿದ್ದು; ಅವರನ್ನು ಈ ಸಂದರ್ಭ ತರಾಟೆಗೆ ತೆಗೆದುಕೊಳ್ಳಲಾಗಿದೆ. ಪಕ್ಷದ ಪ್ರಮುಖರಾದ ಎಂಎಲ್ಸಿ ವೀಣಾ ಅಚ್ಚಯ್ಯ, ಕೆಪಿಸಿಸಿ ಸದಸ್ಯೆ ಕೆ.ಪಿ. ಚಂದ್ರಕಲಾ ಸೇರಿದಂತೆ ಇತರರಿಗೆ ಈ ಬದಲಾವಣೆಯ ಅಧಿಕೃತ ಮಾಹಿತಿ ಇರಲಿಲ್ಲವೆನ್ನಲಾಗಿದ್ದು; ಈ ಬಗ್ಗೆ ಅವರುಗಳೂ ಸಭೆಗೆ ವಿವರಿಸಿದ್ದಾರೆ.
ಬಳಿಕ ಕಾವೇರುತ್ತಿದ್ದ ಚರ್ಚೆಯನ್ನು ವೀಣಾ ಅಚ್ಚಯ್ಯ, ಚಂದ್ರಕಲಾ, ಹೆಚ್.ಎಂ. ನಂದಕುಮಾರ್ ಮತ್ತಿತರರು ಸರಿ ದಾರಿಗೆ ತರಲು
(ಮೊದಲ ಪುಟದಿಂದ) ತೀವ್ರ ಪ್ರಯಾಸ ಪಡಬೇಕಾಯಿತು ಎನ್ನಲಾಗಿದ್ದು; ಈ ವಿಚಾರವನ್ನು ಕೆಪಿಸಿಸಿಯಲ್ಲಿ ಚರ್ಚಿಸಿ ಈ ಹಿಂದಿನಂತೆ ಯಥಾಸ್ಥಿತಿಯಲ್ಲೇ ಮುಂದುವರಿಸುವ ಭರವಸೆ ನೀಡಿದ ಬಳಿಕ ಸಭೆ ತಹಬದಿಗೆ ಬಂದಿದೆ. ಮತ್ತೋರ್ವ ಕೆಪಿಸಿಸಿ ಸದಸ್ಯ ಟಿ.ಪಿ. ರಮೇಶ್ ಅವರು ಸಭೆಯ ಆರಂಭದಲ್ಲಿ ಹಾಜರಿದ್ದರೂ ಬಳಿಕ ಸಭೆಯಲ್ಲಿ ಈ ವಿಚಾರದ ಚರ್ಚೆ ಎದುರಾದ ಸಂದರ್ಭ ಇತರ ಕೆಲಸದ ನಿಮಿತ್ತ ತೆರಳಿದ್ದರೆನ್ನಲಾಗಿದೆ.
ಈ ಸಭೆಗೆ ಮಡಿಕೇರಿ ನಗರ ಕಾಂಗ್ರೆಸ್ ಸಮಿತಿಯ ಅಧ್ಯಕ್ಷರಾಗಿರುವ ಅಬ್ದುಲ್ರಜಾಕ್ ಸೇರಿದಂತೆ; ನಗರ ಕಾಂಗ್ರೆಸ್ನಲ್ಲಿರುವ ಅಲ್ಪಸಂಖ್ಯಾತ ವರ್ಗಕ್ಕೆ ಸೇರಿದ ಪ್ರಮುಖರು ಯಾರೂ ಪಾಲ್ಗೊಂಡಿರಲಿಲ್ಲವೆನ್ನಲಾಗಿದೆ.
ಜಿಲ್ಲಾ ಅಧ್ಯಕ್ಷರು ತಮ್ಮದೇ ಧಾಟಿಯಲ್ಲಿ ನಡೆದುಕೊಳ್ಳುತ್ತಿದ್ದು; ಪಕ್ಷಕ್ಕೆ ಮುಜುಗರ ತರುತ್ತಿದ್ದಾರೆ ಎಂಬ ಆಕ್ಷೇಪವೂ ಕೇಳಿ ಬಂದಿದೆ. ನಗರ ಕಾಂಗ್ರೆಸ್ ಅಧ್ಯಕ್ಷರು ‘ವೀಕೆಂಡ್ ರಾಜಕಾರಣಿ’ ಯೊಬ್ಬರು ಬೆಂಗಳೂರಿನಿಂದ ಆಗಮಿಸುವ ಸಂದರ್ಭ ಅವರ ಬಗ್ಗೆ ಮಾತ್ರ ಆಸಕ್ತಿ ತೋರುತ್ತಿರುವ ಆರೋಪವೂ ಕೇಳಿ ಬಂತೆನ್ನಲಾಗಿದೆ.
ಮತ್ತೊಂದು ಯಡವಟ್ಟು
ಸಭೆಯ ಕೊನೆಯ ಹಂತದಲ್ಲಿ ಸಭೆಗೆ ಆಗಮಿಸಿದ ಪಕ್ಷದ ಪ್ರಮುಖರಾದ ಚಂದ್ರಮೌಳಿ ಅವರು ತಮ್ಮ ಮಾತಿನ ಸಂದರ್ಭದಲ್ಲಿ ಹೇಳಿದ ಮಾತೊಂದು ಸಭೆಯಲ್ಲಿ ಗೊಂದಲಕ್ಕೆ ಎಡೆಯಾಯಿ ತೆನ್ನಲಾಗಿದೆ. ತಾವು ವಿಧಾನಸಭಾ ಚುನಾವಣೆಯಲ್ಲಿ ಸೋತಿದ್ದರಿಂದ ವೀಣಾ ಅಚ್ಚಯ್ಯ ಅವರು ಎಂಎಲ್ಸಿಯಾಗಿದ್ದಾರೆ ಎಂದು ಚಂದ್ರಮೌಳಿ ಹೇಳಿದ್ದು; ಇತರ ಕಾರ್ಯಕರ್ತರನ್ನು ಕೆರಳಿಸಿದೆ.
ವೀಣಾ ಅಚ್ಚಯ್ಯ ಹಲವು ದಶಕದಿಂದ ಕಾಂಗ್ರೆಸ್ಗೆ ಸಲ್ಲಿಸಿದ್ದ ಸೇವೆಯಿಂದ ಎಂಎಲ್ಸಿ ಯಾಗಿದ್ದಾರೆಯೇ ವಿನಹ ಬೇರೆ ರೀತಿಯ ಕೃಪಾಕಟಾಕ್ಷದಿಂದ ಅಲ್ಲ ಎಂದು ಚಂದ್ರಕಲಾ ಸೇರಿದಂತೆ ಹಲವರು ಈ ಸಂದರ್ಭ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಈ ನಡುವೆ ಕೆಲವರು ಜಿಲ್ಲಾಧ್ಯಕ್ಷ ಮೆಚ್ಚುಗೆಗಳಿಸಲು ಸಾಮಾಜಿಕ ಜಾಲತಾಣದಲ್ಲಿ ಅಸಂಬದ್ಧ ಸಂದೇಶಗಳನ್ನು ಹಾಕುತ್ತಿದ್ದಾರೆ. ಎಂಬ ವಿಚಾರವೂ ಆ ದಿನದ ಸಭೆಯಲ್ಲಿ ಬಿಸಿ ಬಿಸಿ ಚರ್ಚೆಗೆ ಎಡೆಯಾಗಿದ್ದು; ಈ ಬಗ್ಗೆಯೂ ಸೂಚನೆ ನೀಡಿ ಮುಂದಿನ ದಿನಗಳಲ್ಲಿ ಗಮನ ಹರಿಸಿ ಕ್ರಮವಹಿಸಲು ತೀರ್ಮಾನಿಸಲಾಗಿದೆ ಎಂದು ತಿಳಿದು ಬಂದಿದೆ.