ಸೋಮವಾರಪೇಟೆ, ಫೆ. 18: ತಾಲೂಕಿನ ಕಂದಾಯ ಇಲಾಖೆ ಮತ್ತು ಹಲವಷ್ಟು ಗ್ರಾಮ ಪಂಚಾಯಿತಿಗಳಲ್ಲಿ ಸರ್ಕಾರದ ವಿವಿಧ ಕಾಮಗಾರಿ, ಅನುದಾನಗಳಿಗೆ ಅಧಿಕಾರಿಗಳು ಮತ್ತು ಜನಪ್ರತಿನಿಧಿ ಗಳಿಂದ ಲಂಚಕ್ಕೆ ಬೇಡಿಕೆ ಇಡಲಾಗುತ್ತಿದೆ ಎಂಬ ವಿಷಯ ಇಲ್ಲಿನ ತಾ.ಪಂ. ಸಭಾಂಗಣದಲ್ಲಿ ನಡೆದ ತಾಲೂಕು ಪಂಚಾಯಿತಿ ಸಾಮಾನ್ಯ ಸಭೆಯಲ್ಲಿ ಗಂಭೀರ ಚರ್ಚೆಗೆ ಕಾರಣವಾಯಿತು.

ತಾ.ಪಂ. ಅಧ್ಯಕ್ಷೆ ಪುಷ್ಪ ರಾಜೇಶ್ ಅಧ್ಯಕ್ಷತೆಯಲ್ಲಿ ಪಂಚಾಯಿತಿ ಸಭಾಂಗಣದಲ್ಲಿ ನಡೆದ ತಾ.ಪಂ. ಸಾಮಾನ್ಯ ಸಭೆಯಲ್ಲಿ ಈ ಬಗ್ಗೆ ಆರೋಪಗಳು ಕೇಳಿಬಂದವು. ವಿವಿಧ ವಸತಿ ಯೋಜನೆಯಲ್ಲಿ ಕೆಲ ಗ್ರಾಮ ಪಂಚಾಯಿತಿಗಳ ಕೆಲವು ಸದಸ್ಯರು ಫಲಾನುಭವಿಗಳಿಂದ ಮನೆಯೊಂದಕ್ಕೆ ತಲಾ ರೂ. 25 ಸಾವಿರಗಳನ್ನು ಪಡೆದುಕೊಂಡಿರುವ ಬಗ್ಗೆ ದೂರುಗಳು ಬಂದಿವೆ ಎಂದು ತಾಲೂಕು ಪಂಚಾಯಿತಿ ಉಪಾಧ್ಯಕ್ಷ ಎಂ.ಬಿ. ಅಭಿಮನ್ಯುಕುಮಾರ್ ಸಭೆಯ ಆರಂಭದಲ್ಲೇ ಆರೋಪಿಸಿದರು.

ಬಡ ಫಲಾನುಭವಿಗಳಿಂದ ಹಣಕ್ಕೆ ಬೇಡಿಕೆ ನೀಡುವದು ಅಕ್ಷಮ್ಯ. ಇಂತಹ ಬೇಡಿಕೆಗಳನ್ನು ಜನಪ್ರತಿನಿಧಿಗಳು ಇಟ್ಟರೆ, ಫಲಾನುಭವಿಗಳು ಲೋಕಾಯುಕ್ತಕ್ಕೆ ದೂರು ನೀಡಬೇಕು ಎಂದು ಅಭಿಮನ್ಯು ಹೇಳಿದರು. ಕೆಲ ಸದಸ್ಯರು 25 ಸಾವಿರ ಲಂಚ ಪಡೆಯುವ ಬಗ್ಗೆ ತಮಗೂ ದೂರು ಬಂದಿದೆ. ಇದಕ್ಕೆÉ ಕಡಿವಾಣ ಹಾಕಬೇಕಾಗಿದೆ ಎಂದು ಸದಸ್ಯೆ ಕುಸುಮಾ ಆಶ್ವಥ್ ಹೇಳಿದರು.

ಶಾಂತಳ್ಳಿಯಲ್ಲಿ ಕಂದಾಯ ಇಲಾಖೆಯಿದ್ದು, ಅಲ್ಲಿನ ಸಿಬ್ಬಂದಿಗಳು ಸರಿಯಾಗಿ ಕೆಲಸ ನಿರ್ವಹಿಸುತ್ತಿಲ್ಲ. ಬಸ್ ಸೌಕರ್ಯವಿಲ್ಲದ ದೂರದ ಊರಿನಿಂದ ಬಂದ ರೈತರಿಗೆ ಸರಿಯಾಗಿ ಕೆಲಸ ಮಾಡಿಕೊಡದೆ ಸತಾಯಿಸುತ್ತಿದ್ದಾರೆ. ಎಲ್ಲ ಕೆಲಸಗಳಿಗೂ ಇಂತಿಷ್ಟು ಕೊಡಲೇ ಬೇಕಾಗಿದೆ. ಹಣ ಕೊಡದೇ ಇದ್ದರೆ ಬಡ ರೈತರ ಕೆಲಸಗಳು ಆಗುವದೇ ಇಲ್ಲ ಎಂದು ಶಾಂತಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಬಗ್ಗನ ಅನಿಲ್‍ಕುಮಾರ್ ಆರೋಪಿಸಿದರು. 94ಸಿ ಸೇರಿದಂತೆ ಇನ್ನಿತರ ಯೋಜನೆಗಳಲ್ಲಿ ಹಕ್ಕುಪತ್ರಕ್ಕಾಗಿ ಅರ್ಜಿ ಸಲ್ಲಿಸಲು ಲಂಚ ಕೇಳುತ್ತಿದ್ದಾರೆ ಎಂದು ದೂರಿದರು.

ಹಕ್ಕುಪತ್ರಕ್ಕಾಗಿ ಯಾರೂ ಲಂಚ ಕೊಡಬೇಕಿಲ್ಲ. ಕಂದಾಯ ಸಿಬ್ಬಂದಿಗಳು ಅಂತಹ ಬೇಡಿಕೆ ಇಟ್ಟರೆ ತನ್ನ ಗಮನಕ್ಕೆ ತರಬೇಕು ಎಂದು ತಹಶೀಲ್ದಾರ್ ಗೋವಿಂದರಾಜ್ ಹೇಳಿದರು. ತಾಲೂಕಿನ ಆರು ಹೋಬಳಿಗಳಲ್ಲಿ 94ಸಿಯಲ್ಲಿ 13593 ಅರ್ಜಿಗಳು ಸಲ್ಲಿಕೆಯಾಗಿತ್ತು. 2557 ಜನರಿಗೆ ಹಕ್ಕುಪತ್ರ ನೀಡಲಾಗಿದೆ. 8925 ಅರ್ಜಿಗಳು ಕೆಲ ಕಾರಣಗಳಿಂದ ತಿರಸ್ಕøತಗೊಂಡಿವೆ. ಉಳಿದವರಿಗೆ ಇನ್ನೆರಡು ತಿಂಗಳಲ್ಲಿ ಹಕ್ಕುಪತ್ರ ವಿತರಿಸಲಾಗುವದು. ಸಿ ಮತ್ತು ಡಿ ಯಲ್ಲಿ 1444 ಅರ್ಜಿಗಳ ಪರಿಶೀಲನೆ ನಡೆಯುತ್ತಿದ್ದು, ಫಲಾನುಭವಿಗಳು ನಿಗದಿತ ಮೊತ್ತವನ್ನು ಪಾವತಿಸಿದರೆ, ಶೀಘ್ರದಲ್ಲೇ ಹಕ್ಕುಪತ್ರ ವಿತರಿಸಲಾಗುವದು ಎಂದು ಗೋವಿಂದರಾಜ್ ಹೇಳಿದರು.

ಸರ್ಕಾರದ ಸಾಲಮನ್ನಾ ಯೋಜನೆಯಡಿ ತಾಲೂಕಿನ 15987 ರೈತರಿಗೆ ರೂ. 106.19 ಕೋಟಿ ಹಣ ಬರಬೇಕಾಗಿದ್ದು, ಇದರ ಪೈಕಿ 13,191 ರೈತರಿಗೆ ರೂ. 100.91 ಕೋಟಿ ನೀಡಲಾಗಿದೆ. ಬಾಕಿ ಇರುವ 2997 ರೈತರಿಗೆ ರೂ. 5.27 ಕೋಟಿ ಬರಬೇಕಾಗಿದೆ. ಇದಕ್ಕೆ ಸಂಬಂಧಿಸಿ ದಂತೆ ಸರ್ಕಾರದ ಮಟ್ಟದಲ್ಲಿ ಜಿಲ್ಲಾಧಿಕಾರಿಗಳ ಚರ್ಚೆ ನಡೆಯುತ್ತಿದೆ ಎಂದು ತಾಲೂಕು ಸಹಕಾರ ಅಭಿವೃದ್ಧಿ ಅಧಿಕಾರಿ ಮೋಹನ್ ಮಾಹಿತಿ ನೀಡಿದರು.

ಚೆಟ್ಟಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಅನೇಕರು ಪೈಸಾರಿ ಜಾಗವನ್ನು ಒತ್ತುವರಿ ಮಾಡಿಕೊಂಡಿ ದ್ದಾರೆ. ಅದನ್ನು ತೆರವುಗೊಳಿಸಿ ಕಸವಿಲೇವಾರಿ ಘಟಕ ಸ್ಥಾಪಿಸಬೇಕು. ಸಮುದಾಯ ಭವನದ ಹತ್ತಿರ ಕಸ ಹಾಕಲು ಪ್ರಯತ್ನಿಸಿದರೆ, ದೊಡ್ಡಮಟ್ಟದ ಪ್ರತಿಭಟನೆ ಹಮ್ಮಿಕೊಳ್ಳಲಾಗುವದು ಎಂದು ಬಲ್ಲಾರಂಡ ಮಣಿ ಉತ್ತಪ್ಪ ಹೇಳಿದರು.

ಯುವ ಜನ ಸೇವಾ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕರು ಯಾವದೇ ಸಭೆಗಳಿಗೆ ಹಾಜರಾಗುತ್ತಿಲ್ಲ. ಸೋಮವಾರಪೇಟೆ ತಾಲೂಕಿನ ಬಗ್ಗೆ ತಾತ್ಸಾರ ಮಾಡಲಾ ಗುತ್ತಿದೆ ಎಂದು ಅಭಿಮನ್ಯುಕುಮಾರ್ ದೂರಿದರು. ಪೊನ್ನಂಪೇಟೆ ಕ್ರೀಡಾ ಹಾಸ್ಟೆಲ್‍ನಲ್ಲಿ ನಡೆದಿರುವ ಹಾಕಿ ಕ್ರೀಡೆಯ ಆಯ್ಕೆ ಪ್ರಕ್ರಿಯೆ ಬಗ್ಗೆ ಕೆಲವು ಪೋಷಕರು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಸೋಮವಾರಪೇಟೆ ಪ್ರತಿಭಾವಂತ ಕ್ರೀಡಾಪಟುಗಳಿಗೆ ಅನ್ಯಾಯವಾಗಿದೆ. ಕೂಡಲೇ ಜಿಲ್ಲಾಧಿಕಾರಿಗಳು ಮಧ್ಯಪ್ರವೇಶಿಸಿ ಈಗ ನಡೆದಿರುವ ಆಯ್ಕೆಯನ್ನು ತಡೆಹಿಡಿದು, ಮತ್ತೊಮ್ಮೆ ಪಾರದರ್ಶಕವಾಗಿ ಆಯ್ಕೆ ಶಿಬಿರ ನಡೆಸುವಂತೆ ತಾಪಂ ಸಭೆಯಲ್ಲಿ ನಿರ್ಣಯ ಕೈಗೊಂಡು ಜಿಲ್ಲಾಧಿಕಾರಿ ಗಳಿಗೆ ಕಳುಹಿಸಲು ಅಭಿಮನ್ಯುಕುಮಾರ್ ಸಭೆಯ ಅನುಮತಿ ಕೇಳಿದರು.

ಇದರೊಂದಿಗೆ ಅಧಿಕಾರಿಯ ವಿರುದ್ಧ ಕ್ರಮಕ್ಕೆ ಆಗ್ರಹಿಸುವಂತೆ ಸಭೆಯಲ್ಲಿ ನಿರ್ಣಯಿಸಲಾಯಿತು. ಹಾಕಿ ಆಯ್ಕೆಯಲ್ಲಿ ಸೋಮವಾರಪೇಟೆ ತಾಲೂಕಿನ ಒಬ್ಬರನ್ನೂ ಆಯ್ಕೆ ಮಾಡದಿರುವ ಬಗ್ಗೆ ಸಭೆಯಲ್ಲಿ ಬೇಸರ ವ್ಯಕ್ತಪಡಿಸಲಾಯಿತು. ಮತ್ತೊಮ್ಮೆ ಆಯ್ಕೆ ಪ್ರಕ್ರಿಯೆ ನಡೆಸುವಂತೆ ಜಿಲ್ಲಾಧಿಕಾರಿಗಳಿಗೆ ಮನವಿ ಮಾಡಲು ನಿರ್ಣಯಿಸಲಾಯಿತು.

ಸೋಮವಾರಪೇಟೆ ಪಟ್ಟಣ ಪಂಚಾಯಿತಿ ಕಚೇರಿಯಲ್ಲಿ ಕೆಲ ಸಿಬ್ಬಂದಿಗಳು ಫಾರಂ ನಂ. 3 ಪಡೆಯಲು 2 ರಿಂದ 6 ಸಾವಿರ ಲಂಚ ಪಡೆಯುತ್ತಿದ್ದಾರೆ. ಇಲ್ಲಿನ ಮಹಿಳಾ ಸಿಬ್ಬಂದಿಯೊಬ್ಬರು ಪಂಚಾಯಿತಿಯ ಹಿಡಿತ ಪಡೆದು ಕೊಂಡಿದ್ದಾರೆ. ಅವರನ್ನು ವರ್ಗಾವಣೆಗೊಳಿಸಬೇಕು. ಯಾರು ಹೇಳುವವರೂ ಕೇಳುವರೂ ಇಲ್ಲದಂತಾಗಿದೆ. ಪಟ್ಟಣ ಹಾಗೂ ಚೌಡ್ಲು ಗ್ರಾ.ಪಂ. ವ್ಯಾಪ್ತಿಯಲ್ಲಿ ಕಳಪೆ ಗುಣಮಟ್ಟದ ಮಾಂಸ ಮಾರಾಟ ಮಾಡಲಾಗುತ್ತಿದೆ. ಮಾಂಸವನ್ನು ತೆರೆದಿಟ್ಟು ಮಾರಾಟ ಮಾಡಲಾಗುತ್ತಿದೆ. ತ್ಯಾಜ್ಯಗಳನ್ನು ನೇರವಾಗಿ ಕಕ್ಕೆಹೊಳೆಗೆ ಸುರಿಯುತ್ತಿದ್ದಾರೆ ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಅಭಿಮನ್ಯುಕುಮಾರ್ ಆರೋಪಗಳ ಸುರಿಮಳೆಗೈದರು.

ಪಟ್ಟಣದಲ್ಲಿ ಇಂದಿರಾ ಕ್ಯಾಂಟೀನ್ ಕಾಮಗಾರಿಯನ್ನು ಪ್ರಾರಂಭಿಸಬೇಕು. ಅಸಡ್ಡೆ ಯಾಕೆ? ಪಟ್ಟಣ ಪಂಚಾಯಿತಿಯವರು ಬಡವರಿಗೆ ಅನ್ಯಾಯ ಮಾಡುತ್ತಿದ್ದಾರೆ ಎಂದು ಸದಸ್ಯರಾದ ಬಿ.ಬಿ. ಸತೀಶ್, ಅನಂತ್‍ಕುಮಾರ್ ಆಕ್ಷೇಪ ವ್ಯಕ್ತಪಡಿಸಿದರು.

ಅಂಬೇಡ್ಕರ್ ವಸತಿ ಶಾಲೆಗೆ ರೂ. 14 ಕೋಟಿ ಮಂಜೂರಾಗಿದ್ದು, ತೋಳೂರುಶೆಟ್ಟಳ್ಳಿ ಪ್ರಸಾದ್ ಪೌಢಶಾಲೆ ಜಾಗದಲ್ಲಿ ಕಾಮಗಾರಿ ಪ್ರಾರಂಭಗೊಳ್ಳಲಿದ್ದು, ಹದಿನೆಂಟು ತಿಂಗಳ ಒಳಗಾಗಿ ಪೂರ್ಣಗೊಳಿ ಸಲಾಗುವದು ಎಂದು ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕ ಶೇಖರ್ ಅವರು, ತಾ.ಪಂ. ಸದಸ್ಯೆ ತಂಗಮ್ಮ ಅವರ ಪ್ರಶ್ನೆಗೆ ಉತ್ತರಿಸಿದರು.

ರೈತರು ಸಂಕಷ್ಟದಲ್ಲಿದ್ದು ಸಾಲಮನ್ನಾ ಯೋಜನೆ ಪ್ರತಿಯೊಬ್ಬರಿಗೂ ಸಿಗಬೇಕು ಎಂದು ಮಣಿ ಉತ್ತಪ್ಪ, ಸಬಿತಾ, ಸತೀಶ್, ವಿಜು ಚಂಗಪ್ಪ, ಜಯಣ್ಣ, ಕುಶಾಲಪ್ಪ, ಧರ್ಮಪ್ಪ ಮತ್ತಿತರು ಒತ್ತಾಯಿಸಿದರು. ವೇದಿಕೆ ಯಲ್ಲಿ ತಾ.ಪಂ. ಕಾರ್ಯನಿರ್ವ ಹಣಾಧಿಕಾರಿ ಸುನಿಲ್‍ಕುಮಾರ್ ಇದ್ದರು.