ಕರಿಕೆ, ಫೆ.18: ಬೆಂಕಿಯ ಮುಂಜಾಗ್ರತೆ, ಪ್ರಾಣಿಗಳ ಚಲನವಲನ ಮತ್ತು ಕಳ್ಳಬೇಟೆ ತಡೆಗಟ್ಟುವ ಉದ್ದೇಶದಿಂದ ಅರಣ್ಯ ಇಲಾಖೆಯ ಮಡಿಕೇರಿ ಉಪವಿಭಾಗದ ಸಂಪಾಜೆ ವಲಯದಲ್ಲಿ ಮೂವತ್ತು ಕ್ಯಾಮರಾ ಗಳನ್ನು ಅಳವಡಿಸಲಾಗಿದೆ.
ಈ ಬಗ್ಗೆ 'ಶಕ್ತಿ' ಗೆ ಮಾಹಿತಿ ನೀಡಿದ ಸಂಪಾಜೆ ವಲಯ ಅರಣ್ಯಾಧಿಕಾರಿ ಮಧುಸೂದನ್ ಅವರು ಬಿಸಿಲಿನ ತಾಪಮಾನ ಹೆಚ್ಚಾಗಿರುವುದರಿಂದ ಅರಣ್ಯ ಪ್ರದೇಶದಲ್ಲಿ ಬೆಂಕಿ ಕಾಣಿಸಿಕೊಳ್ಳುವ ಸಂಭವವಿರುವದಲ್ಲದೆ ಮೀಸಲು ಅರಣ್ಯದ ಗಡಿಭಾಗದ ಗ್ರಾಮಸ್ಥರು ಅರಣ್ಯ ಪ್ರದೇಶದೊಳಗೆ ಸಂಚರಿಸುವುದರಿಂದ ಅನಾಹುತ ತಪ್ಪಿಸಲು ಹಾಗೂ ಕಿಡಿಗೇಡಿಗಳು, ಕಳ್ಳ ಬೇಟೆಗಾರರ ಚಲನವಲನಗಳನ್ನು ಗಮನಿಸಲು ಈ ಕ್ಯಾಮರಾ ಅಳವಡಿಕೆ ಸಹಕಾರಿಯಾಗಿದೆ.
ಕಾಡ್ಗಿಚ್ಚಿನಿಂದ ಅರಣ್ಯ ಹಾಗೂ ಅಳಿವಿನಂಚಿನಲ್ಲಿರುವ ಪ್ರಾಣಿ ಪಕ್ಷಿ ಪ್ರಭೇದಗಳ ಸಂರಕ್ಷಣೆ ಇಲಾಖೆಯ ಗುರಿಯಾಗಿದೆ ಎಂದರು. ದಬ್ಬಡ್ಕ ಶಾಖೆಯ ಉಪ ವಲಯ ಅರಣ್ಯಾಧಿಕಾರಿ ರಾಘವ ,ಅರಣ್ಯ ರಕ್ಷಕ ಪುನಿತ್ ಹಾಗೂ ಇತರ ಇಲಾಖೆಯ ಸಿಬ್ಬಂದಿಗಳು ಕಾಡಿನಲ್ಲಿ ಕ್ಯಾಮರಾ ಅಳವಡಿಕೆ ಕಾರ್ಯದಲ್ಲಿ ಪಾಲ್ಗೊಂಡಿದ್ದರು.
-ಸುಧೀರ್