ನಾಪೋಕ್ಲು, ಫೆ. 17: ಮನೆ ಮಾಲೀಕರೊಬ್ಬರಿಗೆ ಆತನ ಪತ್ನಿಯ ಸಲಹೆಯಂತೆ; ಮಹಿಳೆಯೊಬ್ಬರು ಮಧ್ಯಾಹ್ನದ ಊಟವನ್ನು ತಯಾರಿಸಿ ಬಡಿಸುವ ವೇಳೆ; ಅಚಾನಕ್ಕಾಗಿ ಮೇಲೆರಗಿರುವ ಮಾಲೀಕ; ಆಕೆಯ ಮಾನಭಂಗಕ್ಕೆ ಯತ್ನಿಸಿರುವ ಪ್ರಸಂಗವೊಂದು ತಡವಾಗಿ ಬೆಳಕಿಗೆ ಬಂದಿದೆ. ಎಮ್ಮೆಮಾಡು ಜಮಾಅತ್ ಅಧ್ಯಕ್ಷ ಕೆ.ಎಸ್. ಖಾದರ್ ಹಾಜಿ ವಿರುದ್ಧ ಈ ಕುರಿತು ಮೊಕದ್ದಮೆ ದಾಖಲಾಗಿದೆ.
ತಾ. 12 ರಂದು ಖಾದರ್‍ಹಾಜಿ ಸಂಸಾರ ಕಾರ್ಯನಿಮಿತ್ತ ಮಡಿಕೇರಿಗೆ ತೆರಳಿದ್ದಾಗಿ ಪುಕಾರಿನಲ್ಲಿ ಆರೋಪಿಸಲಾಗಿದೆ. ಈ ವೇಳೆ ಆತನ ಪತ್ನಿಯ ಸಲಹೆ ಮೇರೆಗೆ; ಗೃಹಿಣಿಯೊಬ್ಬರು ಮಾಲೀಕನಿಗೆ ಊಟ ತಯಾರಿಸಿ; ಮಧ್ಯಾಹ್ನ 1.30ರ ಸಮಯದಲ್ಲಿ ಕೊಂಡೊಯ್ದು ಅಡುಗೆ ಕೋಣೆಯಲ್ಲಿ ಬಡಿಸಲು ಮುಂದಾಗಿದ್ದಾಗಿ ದೂರಿಕೊಂಡಿದ್ದಾರೆ.
ಈ ಸಂದರ್ಭ ಖಾದರ್‍ಹಾಜಿ ಆಕೆಯ ಕೈ ಹಿಡಿದು ಎಳೆದುಕೊಂಡಿದ್ದಲ್ಲದೆ; ತನ್ನನ್ನು ಅಪ್ಪಿಕೊಂಡಿದ್ದಾಗಿಯೂ; ತಾನು ಆತನ ಹಿಡಿತದಿಂದ ತಪ್ಪಿಸಿಕೊಂಡು ತನ್ನ ಮನೆಯೊಳಗೆ ಓಡಿ ಬಂದು ತಂದೆ ಹಾಗೂ ಗಂಡನಿಗೆ ವಿಷಯ ತಿಳಿಸಿದ್ದಾಗಿ ವಿವರಿಸಿದ್ದಾರೆ. ಆ ಮೇರೆಗೆ ತಂದೆಯು ಎಮ್ಮೆಮಾಡು ಜಮಾಅತ್ ಸಮಿತಿಗೆ ಪುಕಾರು ನೀಡಿದ್ದರೂ ಯಾವದೇ ಕ್ರಮ ತೆಗೆದುಕೊಂಡಿಲ್ಲ ಎಂದು ನೊಂದಾಕೆ ಅಳಲು ತೋಡಿಕೊಂಡಿದ್ದಾರೆ.
ಹೀಗಾಗಿ ತಾನು ಇಂದು (ತಾ.17) ತಡವಾಗಿ ಬಂದು ನಾಪೋಕ್ಲು ಪೊಲೀಸ್ ಠಾಣೆಯಲ್ಲಿ ಸೂಕ್ತ ಕಾನೂನು ಕ್ರಮಕ್ಕೆ ಕೋರಿ ಪುಕಾರು ನೀಡಿರುವದಾಗಿ ಆಕೆ ತಿಳಿಸಿದ್ದಾರೆ. ಆ ಕಾರಣ ಪೊಲೀಸರು ಆರೋಪಿ ವಿರುದ್ಧ ಪೊಲೀಸ್ ಕಾಯ್ದೆ 354 (ಎ) ಹಾಗೂ 506ರ ಅಡಿಯಲ್ಲಿ ಮೊಕದ್ದಮೆ ದಾಖಲಿಸಿದ್ದಾರೆ.
ಆರೋಪಿ ನಾಪತ್ತೆ : ಈ ಕೃತ್ಯದ ಸಂದರ್ಭ ಮಹಿಳೆಯ ಕುಟುಂಬಕ್ಕೆ ಜಮಾಅತ್‍ನಿಂದ ಬಹಿಷ್ಕಾರದೊಂದಿಗೆ; ಗಡಿಪಾರು ಮಾಡಿಸುವದಾಗಿ ಹಾಗೂ ಕೊಲೆಬೆದರಿಕೆ ಹಾಕಿರುವದಾಗಿ ನೊಂದಾಕೆ ಬಹಿರಂಗಗೊಳಿಸಿದ್ದಾರೆ. ಆಕೆ ನೀಡಿರುವ ದೂರಿನ ಮೇರೆ ಪೊಲೀಸರು ತನಿಖೆ ಕೈಗೊಂಡಿದ್ದು; ಇದೀಗ ಖಾದರ್ ಹಾಜಿ ತಲೆಮರೆಸಿಕೊಂಡಿದ್ದಾಗಿ ಪೊಲೀಸ್ ಮೂಲಗಳಿಂದ ಗೊತ್ತಾಗಿದೆ.
- ದುಗ್ಗಳ