ವೀರಾಜಪೇಟೆ, ಫೆ.17: ಕ್ರೀಡೆಯಿಂದ ಹತ್ತು ಹಲವಾರು ಪ್ರಯೋಜನಗಳಿವೆ. ಕ್ರೀಡಾಸಕ್ತಿ ಇದ್ದರೆ ಜೀವನ ಉತ್ಸಾಹವು ಹೆಚ್ಚಾಗುತ್ತದೆ ಎಂದು ಪದ್ಮಶ್ರೀ ಪ್ರಶಸ್ತಿ ವಿಜೇತ ಒಲಂಪಿಯನ್ ಡಾ.ಮೊಳ್ಳೆರ ಪಿ ಗಣೇಶ್ ಹೇಳಿದರು.
ವೀರಾಜಪೇಟೆಯ ಕಾವೇರಿ ಪದವಿ ಮತ್ತು ಪದವಿ ಪೂರ್ವ ಕಾಲೇಜು, ಬೆಂಗಳೂರಿನ ಹೆಚ್. ಎಸ್. ಆರ್. ಲೇಔಟ್ ಕೊಡವ ಸಮಾಜ ಹಾಗೂ ಕರ್ತುರ ಮುದ್ದಪ್ಪ ಅವರ ಕುಟುಂಬದ ವತಿಯಿಂದ ಕಾಲೇಜಿನ ಮೈದಾನದಲ್ಲಿ ಆಯೋಜಿಸಲಾಗಿದ್ದ ಪುರುಷರ ದಕ್ಷಿಣ ವಲಯ ಆಹ್ವಾನಿತ ಕರ್ತುರ ಮುದ್ದಪ್ಪ ಮತ್ತು ಗೌರಿ ಮುದ್ದಪ್ಪ ಜ್ಞಾಪಕಾರ್ಥ ಅಂತರ್ ಕಾಲೇಜು ಹಾಕಿ ಪಂದ್ಯಾವಳಿಯ ಸಮಾರೋಪ ಸಮಾರಂಭದಲ್ಲಿ ಮಾತನಾಡಿದರು.
ವೈದ್ಯರಾದ ಡಾ.ಬೆಳ್ಳಿಯಪ್ಪ ಮಾತನಾಡಿ, ಕ್ರೀಡೆಯಲ್ಲಿ ಉತ್ತಮ ಸಾಧನೆ ಮಾಡುವುದರಿಂದ ಹಲವಾರು ಉದ್ಯೋಗಾವಕಾಶವನ್ನು ಪಡೆದು ಕೊಂಡು ಜೀವನ ಕಟ್ಟಿಕೊಳ್ಳಬಹುದು ಎಂದರು. ಮಾಜಿ ಅಂತರಾಷ್ಟ್ರೀಯ ಆಟಗಾರರಾದ ಚೆಪ್ಪುಡಿರ ಪೂಣಚ್ಚ ಮತ್ತು ಕೂತಂಡ ಪೂಣಚ್ಚ ಮಾತನಾಡಿ; ಕೊಡಗು ಜಿಲ್ಲೆಯು ಮುಂದಿನ ದಿನಗಳಲ್ಲಿ ಇನ್ನೂ ಅತ್ಯುತ್ತಮ ಹಾಕಿ ಆಟಗಾರರನ್ನು ದೇಶಕ್ಕೆ ಕೊಡುಗೆಯಾಗಿ ನೀಡಲಿ ಎಂದು ಹಾರೈಸಿದರು.
ವೇದಿಕೆಯಲ್ಲಿ ಕಾವೇರಿ ಪದವಿ ಕಾಲೇಜಿನ ಪ್ರಾಂಶುಪಾಲರಾದ ಪ್ರೊ. ಇಟ್ಟೀರ ಕಮಲಾಕ್ಷಿ, ಕಾವೇರಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಎನ್ ಎಮ್ ನಾಣಯ್ಯ, ದೈಹಿಕ ಶಿಕ್ಷಣದ ನಿರ್ದೇಶಕರಾದ ಡಾ. ಎಮ್. ಎಮ್. ದೇಚಮ್ಮ ಮತ್ತು ಎಮ್.ಎ. ನಾಚಪ್ಪ, ಪಂದ್ಯಾವಳಿಯ ಸಂಚಾಲಕರಾದ ಚಿಮ್ಮಣಮಾಡ ಸೋಮಣ್ಣ, ಬೆಂಗಳೂರಿನ ಲೋಕೇಶ್, ನಾಥನ್ ಹಾಗೂ ರವಿಗೌಡ ಉಪಸ್ಥಿತರಿದ್ದರು.
ಪಂದ್ಯಾವಳಿಯ ವೀಕ್ಷಕ ವಿವರಣೆಯನ್ನು ಚೆಪ್ಪುಡಿರ ಕಾರ್ಯಪ್ಪ ಮತ್ತು ಮಾಳೇಟಿರ ಶ್ರೀನಿವಾಸ್ ನಡೆಸಿಕೊಟ್ಟರು. ಪಂದ್ಯಾವಳಿಯ ಅಂತಿಮ ಪಂದ್ಯವು ಆತಿಥೇಯ ಕಾವೇರಿ ಪದವಿ ಕಾಲೇಜು ವೀರಾಜಪೇಟೆ ಹಾಗೂ ಮೂರ್ನಾಡು ಪ್ರಥಮ ದರ್ಜೆ ಕಾಲೇಜಿನ ನಡುವೆ ನಡೆಯಿತು.
ಮೂರ್ನಾಡು ಪ್ರಥಮ ದರ್ಜೆ ಕಾಲೇಜು ತಂಡವು ಆತಿಥೇಯ ತಂಡವನ್ನು 5-2 ಅಂತರದಿಂದ ಸೋಲಿಸಿ ಜಯ ಸಾಧಿಸಿತು. ಬೆಂಗಳೂರಿನ ಸೆಂಟ್ ಜೊಸೇಫ್ ಕಾಲೇಜಿನ ಬೋಪಯ್ಯ ಉತ್ತಮ ಮಿಡ್ ಫೀಲ್ಡರ್, ಮೂರ್ನಾಡು ಪ್ರಥಮ ದರ್ಜೆ ಕಾಲೇಜಿನ ಪ್ರಜ್ವಲ್ ಉತ್ತಮ ಡಿಫೆಂಡರ್ ಹಾಗೂ ಮಂಜು ಉತ್ತಮ ಗೋಲ್ ಕೀಪರ್ ಪ್ರಶಸ್ತಿ ಪಡೆದುಕೊಂಡರು. ಪಂದ್ಯಾವಳಿಯ ಉತ್ತಮ ಆಟಗಾರನಾಗಿ ವೀರಾಜಪೇಟೆಯ ಕಾವೇರಿ ಪದವಿ ಕಾಲೇಜಿನ ಪೊನ್ನಣ್ಣ ಎ ಎಮ್ ಹಾಗೂ ಉತ್ತಮ ಮುನ್ನಡೆ ಆಟಗಾರನಾಗಿ ಸಿ.ಎಮ್. ಬೋಪಣ್ಣ ಪ್ರಶಸ್ತಿ ಪಡೆದರು.