ಮಡಿಕೇರಿ, ಫೆ. 17: ಕರ್ನಾಟಕ ಸರಕಾರ ಜಿಲ್ಲಾ ಪಂಚಾಯಿತಿ ಕೊಡಗು, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಕೊಡಗು ವೈದ್ಯಕೀಯ ವಿಜ್ಞಾನಗಳ ಸಂಸ್ಥೆ, ರಕ್ತನಿಧಿ ಕೇಂದ್ರ ಜಿಲ್ಲಾ ಆಸ್ಪತ್ರೆ ಮಡಿಕೇರಿ, ಪ್ರಾಥಮಿಕ ಆರೋಗ್ಯ ಕೇಂದ್ರ ಸಂಪಾಜೆ, ಉದ್ಭವ್ ಶೈಕ್ಷಣಿಕ ಮತ್ತು ಗ್ರಾಮೀಣ ಅಭಿವೃದ್ಧಿ ಸೇವಾಸಂಸ್ಥೆ ಬೆಂಗಳೂರು, ಗ್ರಾಮ ಪಂಚಾಯಿತಿ ಸಂಪಾಜೆ, ಶ್ರೀ ಭಗವಾನ್ ಸಂಘ ಊರುಬೈಲು, ಪಯಸ್ವಿನಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘ ಸಂಪಾಜೆ, ನೆಲ್ಲಿಕುಮೇರಿ ಫ್ರೆಂಡ್ಸ್ ಕ್ಲಬ್ ಕಲ್ಲುಗುಂಡಿ, ಆಶಾ ಕಾರ್ಯಕರ್ತೆಯರು ಹಾಗೂ ಸಾರ್ವಜನಿಕರ ಸಹಭಾಗಿತ್ವದೊಂದಿಗೆ ಸಂಪಾಜೆ ಲಯನ್ಸ್ ಕ್ಲಬ್ ಆಶ್ರಯದಲ್ಲಿ ದಿ. ಬಾಲಚಂದ್ರ ಕಳಗಿ ಸ್ಮರಣಾರ್ಥ ಸ್ವಯಂಪ್ರೇರಿತ ರಕ್ತದಾನ ಶಿಬಿರ ಸಂಪಾಜೆ ಗ್ರಾಮ ಪಂಚಾಯತ್ ಅಧ್ಯಕ್ಷ ಕುಮಾರ್ ಚೆದ್ಕಾರ್ ಅಧ್ಯಕ್ಷತೆಯಲ್ಲಿ ಜರುಗಿತು. ಕಾರ್ಯಕ್ರಮದ ಉದ್ಘಾಟನೆಯನ್ನು ಸಂಪಾಜೆ ಲಯನ್ಸ್ ಕ್ಲಬ್ ಅಧ್ಯಕ್ಷ ಕಿಶೋರ್ ಕುಮಾರ್ ಪಿ.ಬಿ. ನೆರವೇರಿಸಿದರು.
ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಎನ್.ಎಸ್. ದೇವಿಪ್ರಸಾದ್, ಡಾ. ಕರುಂಬಯ್ಯ, ಡಾ. ಸದಾನಂದ ನಾಯಕ್, ಡಾ| ಸಂದೀಪ್ ನಾಯಕ್, ರಮಾದೇವಿ ಕಳಗಿ, ಡಾ. ವಿನುತ ಹೆಚ್.ಎಸ್. ಪಾಲ್ಗೊಂಡಿದ್ದರು. ಶಿಬಿರದಲ್ಲಿ ಒಟ್ಟು 57 ಮಂದಿ ದಾನಿಗಳು ಹೆಸರು ನೋಂದಾಯಿಸಿದ್ದು ಅದರಲ್ಲಿ 49 ದಾನಿಗಳಿಂದ ಒಟ್ಟು 34 ಯುನಿಟ್ ರಕ್ತ ಸಂಗ್ರಹಿಸಲಾಯಿತು.
ಮಲ್ಲಿಕಾರ್ಜುನ ಕಾರ್ಯಕ್ರಮ ನಿರೂಪಿಸಿದರು. ರಜನಿ ಪ್ರಾರ್ಥಿಸಿದರು. ಕಿಶೋರ್ ಕುಮಾರ್ ಪಿ.ಬಿ. ಸ್ವಾಗತಿಸಿ, ಹಿರಿಯ ಆರೋಗ್ಯ ನಿರೀಕ್ಷಕ ಲೋಕನಾಥ ವಂದಿಸಿದರು.