ಶ್ರೀಮಂಗಲ, ಫೆ. 17 : ಪೊನ್ನಂಪೇಟೆ - ಶ್ರೀಮಂಗಲ ಮುಖ್ಯ ಹೆದ್ದಾರಿಯ ಟಿ.ಶೆಟ್ಟಿಗೇರಿಯಲ್ಲಿ ಭಾನುವಾರ ರಾತ್ರಿ ಬೈಕ್ ಡಿಕ್ಕಿಯಾಗಿ ಅಪರಿಚಿತ ವ್ಯಕ್ತಿ ತೀವ್ರಗಾಯಗೊಂಡು ನಂತರ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. ಅಪರಿಚಿತ ವ್ಯಕ್ತಿಯೊಂದಿಗೆ 4 ವರ್ಷದ ಗಂಡು ಮಗು ಸಣ್ಣ ಪುಟ್ಟ ಗಾಯದೊಂದಿಗೆ ಪಾರಾಗಿದ್ದು, ಮಗುವಿನ ಪೋಷಕರು ಯಾರೆಂದು ತಿಳಿಯದೆ ಇದೀಗ ಪೋಷಕರಿಗಾಗಿ ಹುಡುಕಾಟ ನಡೆಯುತ್ತಿದೆ.ತಾ. 16 ರ ರಾತ್ರಿ 8.45ರ ವೇಳೆಗೆ ಟಿ.ಶೆಟ್ಟಿಗೇರಿಯಿಂದ ತನ್ನ ಮನೆಗೆ ಕೆ.ಬಾಡಗ ಗ್ರಾಮದ ಯುವಕ ಪೆಮ್ಮಣಮಾಡ ಮಂದಣ್ಣ(22) ಎಂಬಾತ ತನ್ನ ಪಲ್ಸರ್ ಬೈಕ್ ಕೆ.ಎ.05 ಜೆಹೆಚ್ 7182 ನÀಲ್ಲಿ ತೆರಳುತ್ತಿದ್ದ ಸಂದರ್ಭ ರಸ್ತೆಯ ತಿರುವುವಿನಲ್ಲಿ ಮಗುವಿನೊಂದಿಗೆ ತೆರಳುತ್ತಿದ್ದ ಅಪರಿಚಿತ ವ್ಯಕ್ತಿಗೆ ಬೈಕ್ ಡಿಕ್ಕಿಯಾಗಿದೆ. ಈ ಸಂದರ್ಭ ಬೈಕ್ ಸವಾರ ಮಂದಣ್ಣ ಟಿ.ಶೆಟ್ಟಿಗೇರಿಯ ಪ್ರದೀಶ್ ಎಂಬವರ ಅಟೋರಿಕ್ಷದಲ್ಲಿ ಶ್ರೀಮಂಗಲ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಕರೆದೊಯ್ದು ಪ್ರಥಮ ಚಿಕಿತ್ಸೆ ಕೊಡಿಸಿ ನಂತರ ಹೆಚ್ಚಿನ ಚಿಕಿತ್ಸೆಗೆ ಗೋಣಿಕೊಪ್ಪ ಸರಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡುತ್ತಿದ್ದ ಸಂದರ್ಭದಲ್ಲಿ ರಾತ್ರಿ 10 ಗಂಟೆಗೆ ಸುಮಾರಿಗೆ 35 ವರ್ಷ ಪ್ರಾಯದ ಆ ಅಪರಿಚಿತ ವ್ಯಕ್ತಿ ಮೃತಪಟ್ಟಿದ್ದಾನೆ.
ಟಿ.ಶೆಟ್ಟಿಗೇರಿಯಲ್ಲಿ ಬೈಕ್ ಡಿಕ್ಕಿಯಾದ ಸಂದರ್ಭ ಗಾಯಗೊಂಡಿದ್ದ ಅಪರಿಚಿತ ವ್ಯಕ್ತಿಯನ್ನು ಬೈಕ್ ಸವಾರ ವಿಚಾರಿಸಿದಾಗ ತನ್ನ ಹೆಸರು ಮಣಿ ಎಂದಷ್ಟೇ ಹೇಳಿದ್ದು, ಮಂಪರು ಮತ್ತು ಗಾಯಗೊಂಡಿದ್ದರಿಂದ ತನ್ನ ಊರು ಇತರ ವಿವರವನ್ನು ಪಡೆಯಲು ಸಾಧ್ಯವಾಗಿಲ್ಲ. ಯರವ ಭಾಷೆ ಮಾತನಾಡುತ್ತಿರುವ ಸುಮಾರು 4 ವರ್ಷದ ಗಂಡು ಮಗುವನ್ನು ಪೊಲೀಸರು ಮತ್ತು ಬೈಕ್ ಸವಾರ ಮಂದಣ್ಣ (ಮೊದಲ ಪುಟದಿಂದ) ಸೇರಿ ಮಗುವಿನ ಪೋಷಕರ ಮಾಹಿತಿ ಪಡೆಯಲು ಪ್ರಯತ್ನಿಸುತ್ತಿದ್ದರೂ ಮಗು ಭಯಗೊಂಡು ಪ್ರತಿಕ್ರಿಯಿಸುತ್ತಿಲ್ಲ. ಸೋಮವಾರ ಬೆಳಿಗ್ಗೆ ಅಪಘಾತವಾಗಿರುವ ಸ್ಥಳಕ್ಕೆ ಪೊಲೀಸರು ಮಗುವನ್ನು ಕರೆತಂದು ಮಗು ಬಂದಿರುವ ದಾರಿಯನ್ನು ತಿಳಿಯಲು ಪ್ರಯತ್ನಿಸಿzರೂ ಯಾವುದೇ ಮಾಹಿತಿ ದೊರೆತಿಲ್ಲ. ಇದಲ್ಲದೆ, ಸಂತೆ ದಿನವಾದ ಸೋಮವಾರ ಟಿ.ಶೆಟ್ಟಿಗೇರಿ ಮತ್ತು ಶ್ರೀಮಂಗಲಕ್ಕೆ ಆಗಮಿಸಿರುವ ಕಾರ್ಮಿಕರನ್ನು ಮತ್ತು ಸ್ಥಳೀಯ ನಾಗರಿಕರನ್ನು ಮಗು ಹಾಗೂ ಅಪರಿಚಿತ ವ್ಯಕ್ತಿಯ (ಮೃತದೇಹ) ಫೋಟೋವನ್ನು ತೋರಿಸಿ ಪೋಷಕರ ಪತ್ತೆ ಹಚ್ಚಲು ಪ್ರಯತ್ನಿಸಲಾಯಿತು. ಮಗು ಹೇಳುವ ದಾರಿಯಲ್ಲಿ ಕಾಲ್ನಾಡಿಗೆಯಲ್ಲಿ ತೆರಳಿ ಪೋಷಕರನ್ನು ಮತ್ತು ಮಗುವಿನ ಮನೆಗೆ ಹೋಗುವ ದಾರಿಯನ್ನು ಪತ್ತೆ ಹಚ್ಚಲು ತೆರಳಿ ಎಷ್ಟೇ ಪ್ರಯತ್ನಿಸಿದರೂ ಸಂಜೆಯವರೆಗೆ ಯಾವುದೇ ಸುಳಿವು ದೊರೆತಿಲ್ಲ.
4 ವರ್ಷದ ಮಗು ಸರಿಯಾಗಿ ಏನನ್ನು ಹೇಳಲಾಗದೆ ಇರುವುದರಿಂದ ಸಾವಿಗೀಡಾದ ವ್ಯಕ್ತಿ ಮಗುವಿನ ತಂದೆ ಇರಬಹುದೆಂದು ಶಂಕಿಸಲಾಗಿದೆ. ಮಗು ಪೊಲೀಸರನ್ನು ಹಾಗೂ ಹೊಸಬರನ್ನು ಕಂಡು ಭಯ ಪಡುತ್ತಿದೆ. ಮಗುವಿನೊಂದಿಗೆ ಯರವ ಭಾಷೆಯಲ್ಲಿಯೇ ಮಾತನಾಡಿ ಪೋಷಕರ ಪತ್ತೆ ಹಚ್ಚಲು ಪ್ರಯತ್ನಿಸಲಾಗುತ್ತಿದ್ದು, ಮಗುವನ್ನು ಸ್ಥಳೀಯವಾಗಿ ವಾಸವಿರುವ ಯರವ ಜನಾಂಗದ ಮನೆ ಹಾಗೂ ಲೈನ್ ಮನೆಗಳಿಗೆ ತೆರಳಿ ಮಾಹಿತಿ ಪಡೆಯಲಾಗುತ್ತಿದೆ. ಮೃತಪಟ್ಟಾತ ಹೊರಗಿನಿಂದ ಬಂದಿರುವ ವ್ಯಕ್ತಿಯಾಗಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ.
ಮಗುವಿಗೂ ಕೈ ಹಾಗೂ ಹಣೆ ಭಾಗಕ್ಕೆ ಗಾಯವಾಗಿದ್ದು, ಮುಗ್ಧ ಮಗು ಏನನ್ನು ಹೇಳಲಾಗದೆ ತನ್ನ ಪೋಷಕರು ಇಲ್ಲದೆ ಪರಿತಪಿಸುತ್ತಿದೆ. ಪತ್ತೆ ಇಲ್ಲದೆ ಮಗುವನ್ನು ಮಾತನಾಡಿಸಿದ ಸಂದರ್ಭ ತನಗೆ ತಾಯಿ ಇರುವುದಾಗಿ ಹೇಳಿದ್ದು, ತನ್ನ ಮನೆಗೆ ಹೋಗುವ ರಸ್ತೆ ಬಗ್ಗೆ ಗೊಂದಲಕಾರಿಯಾಗಿ ಹೇಳಿಕೆ ನೀಡುತ್ತಿದೆ.
ಈ ಸಂದರ್ಭ ಬೈಕ್ ಸವಾರ ಮಂದಣ್ಣ ಅವರನ್ನು ವಿಚಾರಿಸಿದಾಗ ರಾತ್ರಿ ಬೈಕ್‍ನಲ್ಲಿ ತೆರಳುತ್ತಿದ್ದಾಗ ದಿಢೀರಾಗಿ ರಸ್ತೆ ಮಧ್ಯೆ ದಾಟಿದ ಸಂದರ್ಭ ಸಾಧ್ಯವಾಗುವಷ್ಟು ನಿಯಂತ್ರಣ ಮಾಡಿದರೂ ವ್ಯಕ್ತಿಗೆ ಬೈಕ್ ಡಿಕ್ಕಿಯಾಯಿತು ಎಂದು ಹೇಳಿಕೆ ನೀಡಿದ್ದು, ಮಂದಣ್ಣಗೂ ಕೈ, ಕಾಲುಗಳಿಗೆ ಗಾಯವಾಗಿದೆ.
ಶ್ರೀಮಂಗಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೋಷಕರ ಪತ್ತೆ ಹಚ್ಚಲು ಮತ್ತು ಅಪರಿಚಿತ ವ್ಯಕ್ತಿಯ ಶವ ಹಸ್ತಾಂತರಿಸಲು ವಾರಿಸುದಾರರ ಪತ್ತೆಗೆ ಪೊಲೀಸರು ನಿರಂತರ ಪ್ರಯತ್ನ ನಡೆಸುತ್ತಿದ್ದಾರೆ.
- ಹರೀಶ್ ಮಾದಪ್ಪ