ಮಡಿಕೇರಿ, ಫೆ. 17: ಜಿಲ್ಲಾ ಪಂಚಾಯಿತಿ, ಸೋಮವಾರಪೇಟೆ ತಾಲೂಕು ಪಂಚಾಯಿತಿ, ಕೊಡಗು ಜಿಲ್ಲಾ ಪಶುಪಾಲನೆ ಮತ್ತು ಪಶು ವೈದ್ಯ ಇಲಾಖೆ, ಚೆಟ್ಟಳ್ಳಿ ಪಶು ಚಿಕ್ಸಿತಾಲಯ, ಗ್ರಾಮ ಪಂಚಾಯಿತಿ ಚೆಟ್ಟಳ್ಳಿ ಹಾಗೂ ಚಾಮುಂಡಿ ರೈತ ಒಕ್ಕೂಟ ನೆಲ್ಲಿಹಡ್ಲು ಇವರ ಸಂಯುಕ್ತ ಆಶ್ರಯದಲ್ಲಿ ಚೆಟ್ಟಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ನೆಲ್ಲಿಹಡ್ಲುವಿನಲ್ಲಿ ಉಚಿತ ಪಶು ಚಿಕ್ಸಿತಾ ಶಿಬಿರ ಹಾಗೂ ರಾಷ್ಟ್ರೀಯ ಕೃತಕ ಗರ್ಭಧಾರಣಾ ಯೋಜನೆ ಅರಿವು ಕಾರ್ಯಕ್ರಮ ನಡೆಯಿತು.
ಕಾರ್ಯಕ್ರಮದಲ್ಲಿ ಚೆಟ್ಟಳ್ಳಿ ಪಶು ಚಿಕ್ಸಿತಾಲಯದ ಮುಖ್ಯ ಪಶು ವೈದ್ಯಾಧಿಕಾರಿ ಸಂಜೀವ ಕುಮಾರ್ ಆರ್. ಶಿಂಧೆ ರೈತರಿಗೆ ಸರ್ಕಾರದ ವಿವಿಧ ಯೋಜನೆಗಳ ಬಗ್ಗೆ, ರಾಷ್ಟ್ರೀಯ ಕೃತಕ ಗರ್ಭಧಾರಣೆಯ ಬಗ್ಗೆ, ರಾಸುಗಳ ಆರೈಕೆ, ವಿಮೆ ಬಗ್ಗೆ ಮಾಹಿತಿ ನೀಡುವುದರ ಮೂಲಕ ಯೋಜನೆಗಳ ಸದುಪಯೋಗ ಪಡಿಸಿಕೊಳ್ಳಬೇಕು ಎಂದರು.
ಜಿಲ್ಲಾ ಪಂಚಾಯಿತಿ ಸದಸ್ಯೆ ಸುನಿತಾ ಮಂಜುನಾಥ್ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ರೈತರು ಜಾನುವಾರು ಸಾಕಾಣಿಕೆಯ ಬಗ್ಗೆ ಹೆಚ್ಚಿನ ಒತ್ತು ನೀಡಬೇಕು. ಜೊತೆಗೆ ಪಶು ಚಿಕಿತ್ಸಾಲಯದಲ್ಲಿ ದೊರೆಯುವ ಸೌಲಭ್ಯವನ್ನು ಹೆಚ್ಚಿನ ರೀತಿಯಲ್ಲಿ ಪಡೆದು ಕೊಳ್ಳಬೇಕು. ಇಲಾಖೆ ವತಿಯಿಂದ ಫಲಾನುಭವಿಗಳಿಗೆ ನೀಡಲಾಗುವ ಕೋಳಿಮರಿಗಳ ಬಗ್ಗೆ ತಿಳಿಸಿದರು.
ಚೆಟ್ಟಳ್ಳಿ ಗ್ರಾ.ಪಂ. ಅಧ್ಯಕ್ಷೆ ಪಿ.ವಿ. ವತ್ಸಲಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ಹಸುಗಳಿಂದ ದೊರೆಯುವ ಉತ್ಪನ್ನಗಳು ದಿನನಿತ್ಯವು ಬೇಕಾಗಿರುವುದರಿಂದ ಹೆಚ್ಚಿನ ಸಂಖ್ಯೆಯಲ್ಲಿ ಹಸುಗಳನ್ನು ಸಾಕಿ ಸಲುಹುವುದರ ಜೊತೆಗೆ ವಿಮೆ ಮಾಡಿಸಬೇಕೆಂದು ಸಲಹೆ ನೀಡಿದರು.
ಸೋಮವಾರಪೇಟೆ ತಾಲೂಕು ಪಂಚಾಯಿತಿ ಸದಸ್ಯ ಬಲ್ಲಾರಂಡ ಮಣಿ ಉತ್ತಪ್ಪ ರೈತರಿಗೆ ಬಹುಮಾನ ವಿತರಿಸಿ ಮಾತನಾಡಿ ಇತ್ತೀಚಿನ ದಿನಗಳಲ್ಲಿ ಜಾನುವಾರುಗಳನ್ನು ಸಾಕುವವರ ಸಂಖ್ಯೆ ಕಡಿಮೆಯಾಗುತ್ತಿದ್ದು, ಆದಷ್ಟು ದೇಶೀ ಜಾನುವಾರುಗಳನ್ನು ಸಾಕಬೇಕೆಂದು ಮನವಿ ಮಾಡಿದರು.
ಚೆಟ್ಟಳ್ಳಿ ಗ್ರಾಮ ಪಂಚಾಯಿತಿ ಸದಸ್ಯ ಮಹಮದ್ ರಫಿ, ಚೆಟ್ಟಳ್ಳಿ ಸಹಕಾರ ಸಂಘದ ಉಪಾಧ್ಯಕ್ಷ ಎಂ.ಎಸ್. ಉಲ್ಲಾಸ, ಪಶು ಪಾಲನಾ ವೈದಕೀಯ ಪರೀಕ್ಷಕರು ಎಂ.ಬಿ. ಮೀನಾಕ್ಷಿ, ಹಿರಿಯ ಪಶು ವೈದ್ಯಕೀಯ ಪರೀಕ್ಷಕ ಎನ್.ಎಂ. ಸುರೇಶ್, ಇಲಾಖೆಯ ಸಿಬ್ಬಂದಿಗಳಾದ ಎ.ಪಿ. ಮೋಸಸ್ ಹಾಗೂ ಯುವರಾಜ್ ಹಾಜರಿದ್ದು. ಈ ಸಂದರ್ಭ ಹಾಜರಿದ್ದ ಸುಮಾರು 50 ಜಾನುವಾರುಗಳಿಗೆ ಉಚಿತ ಚಿಕಿತ್ಸೆ ನೀಡಿ ಲವಣ ಮಿಶ್ರಣ ಪುಡಿಯನ್ನು ನೀಡಲಾಯಿತು. ಪಶು ವೈದ್ಯಾಧಿಕಾರಿ ಸಂಜೀವ ಕುಮಾರ್ ಆರ್. ಶಿಂಧೆ ಸ್ವಾಗತಿಸಿದರು.