ಶನಿವಾರಸಂತೆ, ಫೆ. 15: ಕೋಳಿ ಸಾಕಾಣೆ ಮುಖಾಂತರ ಮೊಟ್ಟೆಗಳನ್ನು ಮಾರಾಟಗೊಳಿಸಿ ಆ ಮೂಲಕ ಆರ್ಥಿಕ ಸುಧಾರಣೆ ಕಂಡುಕೊಳ್ಳುವ ಆಮಿಷವೊಡ್ಡಿ ಬಳಿಕ ಮೋಸಗೊಳಿಸಿರುವ ಜಾಲವೊಂದು ಬೆಳಕಿಗೆ ಬಂದಿದೆ. ಈ ಬಗ್ಗೆ ಶನಿವಾರಸಂತೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕಳೆದ ವರ್ಷ ಅಂದರೆ ತಾ. 13.5.2019ರಂದು ಕೇರಳದ ಒಮೆಗಾ 3.6 ಕಂಪೆನಿಯವರೊಂದಿಗೆ ರೈತ ನೀತು ನಾಗೇಶ್ ಒಪ್ಪಂದ ಮಾಡಿಕೊಂಡು ಕೋಳಿ ಸಾಕಾಣೆ ಮಾಡುವ ಸಲುವಾಗಿ ವಿವಿಧ ದಿನಾಂಕಗಳಂದು ಒಟ್ಟು ರೂ. 5 ಲಕ್ಷ ಹಣವನ್ನು ಕಂಪೆನಿಯ ಖಾತೆಗೆ ಪಾವತಿ ಮಾಡಿದ್ದರು. 500 ಕೋಳಿಗಳನ್ನು ಒಮೆಗಾ 3.6 ಕಂಪೆನಿಯಿಂದ ಪಡೆದುಕೊಂಡು ಸಾಕಾಣೆ ಮಾಡಿದ್ದರು. ನಂತರದ ದಿನಗಳಲ್ಲಿ ಕಂಪೆನಿಯವರು ಕೊಟೇಶನ್ ಹಾಗೂ ಜಾಹೀರಾತಿನಲ್ಲಿ ನೀಡಿದ್ದ ಮಾಹಿತಿಯಂತೆ ಕೋಳಿಗಳು ನಿರೀಕ್ಷಿಸಿದ ಮೊಟ್ಟೆಗಳನ್ನು ಹಾಕಲಿಲ್ಲ ಮತ್ತು ಕೋಳಿಗಳು ಸತ್ತು ಹೋಗಿದ್ದವು. ಇದರಿಂದಾಗಿ ಅವರ ಹಣವನ್ನು ನೀಡದೆ ಇದ್ದುದರಿಂದ ಮ್ಯಾನೇಜರ್ ಬೆನ್ಸಿನ್ ಅವರನ್ನು ರೈತರಾದ ನೀತು ನಾಗೇಶ್ ಭೇಟಿ ಮಾಡಿ, ಒಮೆಗಾ 3.6 ಕಂಪೆನಿಯವರೊಂದಿಗೆ ಮಾತನಾಡಿದ್ದಾರೆ. ದಿನಾಂಕ 13.9.2019ರಂದು ರದ್ಧತಿ ಒಪ್ಪಂದ ಮಾಡಿಕೊಂಡರು. ಒಪ್ಪಂದದಂತೆ ಕಂಪೆನಿ ಪರವಾಗಿ ಮ್ಯಾನೇಜರ್ 28.9.2019ರಂದು ನೀತು ನಾಗೇಶ್ ಅವರಿಂದ ಕೋಳಿಗಳನ್ನು ಪಡೆದು ಕೊಂಡು ದಿನಾಂಕ 13.12.2019ರಂದು ಹಣವನ್ನು ನೀಡುವುದಾಗಿ ತಿಳಿಸುತ್ತಾ ಬಂದಿದ್ದರೂ ಕೂಡ ಹಣವನ್ನು ನೀಡಲಿಲ್ಲ. ಆ ಬಳಿಕ ನೀತು ನಾಗೇಶ್ ನಂಜನಗೂಡಿನಲ್ಲಿರುವ ಒಮೆಗಾ ಕಚೇರಿಗೆ ತೆರಳಿ ವಿಚಾರಿಸಿದ್ದಾರೆ. ಈ ಸಂದರ್ಭ ಆ ವ್ಯಕ್ತಿಗಳು ಕಚೇರಿಯನ್ನು ಖಾಲಿ ಮಾಡಿಕೊಂಡು ಹೋಗಿದ್ದು ಮುಚ್ಚಲ್ಪಟ್ಟಿತ್ತು. ಅದಲ್ಲದೆ ಕಂಪೆನಿ ಪರವಾಗಿ ಎಲ್.ಎಸ್. ಪ್ರಮೋದ್, ಸಂಪತ್, ಸೆಲ್ವಿ, ಪ್ರಮೋದ್ ಸೆರ್ಲಿ, ಬೆನ್ನಿ ಅಲಿಯಾಸ್ ಬೆನ್ಸನ್, ವಿಷ್ಣು, ರೇಷ್ಮಾ, ಅರುಣ್ ರಾಮಚಂದ್ರನ್, ವಿಷುಕುಮಾರ್ ಹಾಗೂ ಸುನಿಲ್ ರಾಬಿನ್ ಅವರುಗಳು ‘‘ನಿಮ್ಮ ಮೇಲೆ ಕೇರಳದಲ್ಲಿ ದೂರು ನೀಡಿರುತ್ತೇವೆ. ನಿಮ್ಮನ್ನು ಸುಮ್ಮನೆ ಬಿಡುವುದಿಲ್ಲ’’ ಎಂದು ರೈತ ನೀತು ನಾಗೇಶ್‍ಗೆ ಜೀವ ಬೆದರಿಕೆ ಹಾಕಿರುತ್ತಾರೆ. ಈ ಬಗ್ಗೆ ರೈತ ನಾಗೇಶ್ ಶನಿವಾರಸಂತೆ ಪೊಲೀಸ್ ಠಾಣೆಗೆ ನೀಡಿದ ದೂರಿನ ಮೇರೆ, ಪೊಲೀಸ್ ಠಾಣಾಧಿಕಾರಿ ಕೃಷ್ಣನಾಯಕ್ ವಿಧಿ 406, 418, 420, 506 ಐಪಿಸಿ ಯಡಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.
-ನರೇಶ್ಚಂದ್ರ
ರಾಷ್ಟ್ರಮಟ್ಟಕ್ಕೆ ಆಯ್ಕೆ
ಮಡಿಕೇರಿ, ಫೆ. 15: ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ, ನವದೆಹಲಿ, ರಾಜ್ಯ ಶಿಕ್ಷಣ ಸಂಶೋಧನೆ ಮತ್ತು ತರಬೇತಿ ಇಲಾಖೆ ಹಾಗೂ ಸಾರ್ವಜನಿಕ ಶಿಕ್ಷಣ ಇಲಾಖೆಯ ಸಂಯುಕ್ತ ಆಶ್ರಯದಲ್ಲಿ ಮಂಡ್ಯ ಜಿಲ್ಲೆಯ ಶ್ರೀ ಆದಿಚುಂಚನಗಿರಿ ಮಹಾಸಂಸ್ಥಾನದಲ್ಲಿ ರಾಜ್ಯಮಟ್ಟದ ವಿಜ್ಞಾನ ವಸ್ತು ಪ್ರದರ್ಶನವು ನಡೆಯಿತು. ಈ ರಾಜ್ಯಮಟ್ಟದ ಇನ್‍ಸ್ಪೈರ್ ಮಾನಕ್ ಅವಾರ್ಡ್ - 2019-20 ವಿಜ್ಞಾನ ವಸ್ತು ಪ್ರದರ್ಶನದಲ್ಲಿ ಭಾಗಮಂಡಲದ ಜ್ಞಾನೋದಯ ಆಂಗ್ಲ ಮಾಧ್ಯಮ ಪ್ರೌಢಶಾಲೆಯ ಹತ್ತನೆಯ ತರಗತಿ ವಿದ್ಯಾರ್ಥಿ ಶೃಜನ್ ಬಿ.ಎಸ್. ಬಾಲ ವಿಜ್ಞಾನಿಯಾಗಿ ಪ್ರದರ್ಶಿಸಿದ ‘ಸೆನ್ಸಾರ್ ಅಂಬ್ರೆಲಾ’ವು ರಾಷ್ಟ್ರಮಟ್ಟಕ್ಕೆ ಆಯ್ಕೆಯಾಗಿದೆ. ಈತ ಮುಂದೆ ದೆಹಲಿಯಲ್ಲಿ ನಡೆಯಲಿರುವ ರಾಷ್ಟ್ರಮಟ್ಟದ ಪ್ರದರ್ಶನದಲ್ಲಿ ಕರ್ನಾಟಕ ರಾಜ್ಯವನ್ನು ಪ್ರತಿನಿಧಿಸಲಿದ್ದು, ಅಯ್ಯಂಗೇರಿ ಗ್ರಾಮದ ಬಿದ್ಯಂಡ ಸುರೇಂದ್ರ ಹಾಗೂ ಜಯಮಾಲ ದಂಪತಿಯ ಪುತ್ರನಾಗಿದ್ದಾನೆ.
ಕೊರೊನಾ ಬಗ್ಗೆ ಮುನ್ನೆಚ್ಚರಿಕಾ ಕ್ರಮ
ಕುಶಾಲನಗರ, ಫೆ 15: ಜಿಲ್ಲೆಯ ಗಡಿಭಾಗ ಬೈಲುಕೊಪ್ಪೆಯಲ್ಲಿ ಕೊರೊನಾ ಮಾರಣಾಂತಿಕ ರೋಗದ ಬಗ್ಗೆ ತೀವ್ರತರಹದ ಮುನ್ನೆಚ್ಚರಿಕೆ ವಹಿಸಿರುವ ದೃಶ್ಯಗಳು ಕಂಡುಬಂದಿವೆ. ನಿರಾಶ್ರಿತ ಟಿಬೇಟಿಯನ್ ಶಿಬಿರಕ್ಕೆ ಆಗಮಿಸುವ ಎಲ್ಲಾ ವಿದೇಶಿಗರ ಬಗ್ಗೆ ನಿಗಾವಹಿಸಲಾಗುತ್ತಿದ್ದು ವೈದ್ಯಕೀಯ ತಪಾಸಣೆಗೆ ಒಳಪಡಿಸಲಾಗುತ್ತಿದೆ. ತಾ. 24 ರಿಂದ ಟಿಬೇಟಿಯನ್ ನೂತನ ವರ್ಷಾಚರಣೆ ಹಿನ್ನೆಲೆಯಲ್ಲಿ ವಿಶ್ವದ ಎಲ್ಲೆಡೆಗಳಿಂದ ಟಿಬೇಟಿಯನ್ ಕುಟುಂಬ ಸದಸ್ಯರು ಹಾಗೂ ವಿದೇಶಿ ಗರು ಆಗಮಿಸುವ ನಿರೀಕ್ಷೆಯಿದ್ದು ಮೈಸೂರು ಜಿಲ್ಲಾ ಆರೋಗ್ಯ ಇಲಾಖೆ ಸೂಚನೆಯಂತೆ ಪ್ರತಿ ಮನೆಮನೆಗೆ ವೈದ್ಯರ ತಂಡ ಭೇಟಿ ಮಾಡಿ ಕೊರೊನಾ ಜಾಗೃತಿ ಬಗ್ಗೆ ಮಾಹಿತಿ ಒದಗಿಸಲಾಗಿದೆ ಎಂದು ಸರಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯರು ತಿಳಿಸಿದ್ದಾರೆ. ಇದರೊಂದಿಗೆ ಟಿಬೇಟಿಯನ್ ಆರೋಗ್ಯ ಕೇಂದ್ರಗಳ ಸಿಬ್ಬಂದಿಗಳು ಕೂಡ ಮನೆಮನೆಗೆ ಕರಪತ್ರಗಳನ್ನು ಹಂಚುವ ಕೆಲಸದಲ್ಲಿ ತೊಡಗಿದ್ದಾರೆ.
ಟಿಬೇಟಿಯನ್ ಕೇಂದ್ರ ಕಚೇರಿಯಿಂದ ನೀಡಲಾಗಿರುವ ಹರ್ಬಲ್ ಮಾತ್ರೆ, ಔಷಧಿಗಳನ್ನು ಮುನ್ನೆಚ್ಚರಿಕೆ ಕ್ರಮವಾಗಿ ಸರಬರಾಜು ಮಾಡಲಾಗಿದೆ ಎಂದು ಟಿಬೇಟಿಯನ್ ಶಿಬಿರದ ಪ್ರತಿನಿಧಿಗಳು ತಿಳಿಸಿದ್ದಾರೆ.
ಇಂದಿನಿಂದ ಚಿನ್ನತಪ್ಪ ಉತ್ಸವ
ಭಾಗಮಂಡಲ, ಫೆ. 15: ಅಯ್ಯಂಗೇರಿ ಗ್ರಾಮದಲ್ಲಿ ಚಿನ್ನತಪ್ಪ ಉತ್ಸವ ತಾ.16 ರಿಂದ 18ರವರೆಗೆ ನಡೆಯಲಿದ್ದು, ಮೂರು ದಿನಗಳ ಕಾಲ ನಡೆಯುವ ವಿಶಿಷ್ಟ ‘ಚಿನ್ನತಪ್ಪ’ ಹಬ್ಬದಲ್ಲಿ ಶ್ರೀಕೃಷ್ಣನದು ಎನ್ನಲಾದ ಕೊಳಲಿಗೆ ವಿವಿಧ ವಿಧಿ ವಿಧಾನದೊಂದಿಗೆ ಪೂಜೆ ಸಲ್ಲಿಸುವುದೇ ‘ಚಿನ್ನತಪ್ಪ’ ಹಬ್ಬದ ವಿಶೇಷ.
ಜಿಲ್ಲೆಯಲ್ಲಿಯೇ ಏಕೈಕ ಕೃಷ್ಣ ದೇಗುಲವಿರುವ ಏಕೈಕ ಗ್ರಾಮ ಎಂಬ ಹೆಗ್ಗಳಿಕೆಯೂ ಅಯ್ಯಂಗೇರಿಗಿದೆ. ಗೊಲ್ಲ ಜನಾಂಗದವರು ಹಾಗೂ ಊರಿನ ಇತರ ಜನಾಂಗದವರು ಒಗ್ಗೂಡಿ ನಡೆಸುವ ಈ ಹಬ್ಬ ಪ್ರತಿವರ್ಷ ಬೇಸಿಗೆಯಲ್ಲಿ ಮೂರು ದಿನಗಳ ಕಾಲ ವಿವಿಧ ಸಂಪ್ರದಾಯದೊಂದಿಗೆ ನೆರವೇರುತ್ತದೆ.
ಈ ಹಬ್ಬದಲ್ಲಿ ಕೊಳಲನ್ನು ಎತ್ತಿಕೊಳ್ಳುವವರಿಗೆ ಶ್ರೀಕೃಷ್ಣ ಪರಮಾತ್ಮನದು ಎನ್ನಲಾದ ಆಭರಣವನ್ನು ತೊಡಿಸಲಾಗುತ್ತದೆ. ಎತ್ತು ಪೋರಾಟದ ಎತ್ತುಗಳನ್ನು ಗದ್ದೆಯಲ್ಲೇ ಮೂರು ಸುತ್ತು ಓಡಿಸಲಾಗುತ್ತದೆ. ಬಿಳಿ ಸೀರೆ ಉಟ್ಟ ಹದಿನಾರು ಕುಟುಂಬದ ಮಹಿಳೆಯರು ಚೆಂಬುಚೆರ್ಕ್ ಒಪ್ಪಿಸುವ ಪದ್ದತಿ ಇದೆ. ಇಲ್ಲಿ ಗೊಲ್ಲ ಜನಾಂಗದ ವರೇ ಪೂಜೆಯನ್ನು ಮಾಡುವ ಸಂಪ್ರದಾಯ ಬೆಳೆದು ಬಂದಿದೆ.
ಪ್ರತಿವರ್ಷ ಬೆಳಗ್ಗಿನ ಹಬ್ಬದೊಂದಿಗೆ ಆರಂಭಗೊಳ್ಳುವ ಉತ್ಸವ ಸಾವಿರಾರು ಮಂದಿ ಭಕ್ತರ ಸಮ್ಮುಖದಲ್ಲಿ ಧಾರೆ ಪೂಜೆ, ಪಟ್ಟಣಿ ಹಬ್ಬ, ಕತ್ತಲಾವರಿಸಿದ ನಂತರ ಆರಂಭಗೊಳ್ಳುವ ಪೂಜೆ ಬೆಳಗಿನ ಜಾವ ಎರಡು ಗಂಟೆಯವರೆಗೆ ಜರುಗುತ್ತದೆ. ಮರುದಿನ ಪಟ್ಟಣಿ ಹಬ್ಬ ನಡೆಯುತ್ತದೆ. ಊರ ಮಂದ್‍ನಲ್ಲಿ ಅಶ್ವತ್ಥ ವೃಕ್ಷದ ಕೆಳಗೆ ಶ್ರೀಕೃಷ್ಣನನ್ನು ಪೂಜಿಸುವುದರೊಂದಿಗೆ ವಿಶೇಷ ಸಾಂಸ್ಕøತಿಕ ಚಟುವಟಿಕೆಗಳು ನಡೆಯುತ್ತವೆ. ಕೆಲವು ಹಿರಿಯರ ಪ್ರಕಾರ ಶ್ರೀಕೃಷ್ಣ ಇಲ್ಲಿಗೆ ಬಂದಾಗ ತನ್ನ ಮೆಚ್ಚಿನ ಕೊಳಲನ್ನು ಬಿಟ್ಟು ಹೋದನಂತೆ. ಆ ಕೊಳಲನ್ನು ಶ್ರೀಕೃಷ್ಣನ ನೆನಪಿನಲ್ಲಿ ಆ ಊರಿನವರು ಜೋಪಾನವಾಗಿ ಕಾಯ್ದಿರಿಸಿ ಪೂಜಿಸುತ್ತಾ ಬಂದರಂತೆ. ಹಬ್ಬದ ದಿನ ಎತ್ತು ಪೋರಾಟ ನಡೆಯುತ್ತದೆ. ಉತ್ಸವದಂದು ಆಕಾಶದಲ್ಲಿ ಅಪರೂಪಕ್ಕೆ ಗರುಡ ಕಾಣಿಸಿಕೊಳ್ಳುತ್ತದೆ.
ಕೃಷ್ಣನ ಅನುಗ್ರಹಕ್ಕೆ ಪಾತ್ರರಾಗಲು ಪಟ್ಟಣಿ ಹಬ್ಬದಂದು ಹೆಚ್ಚಿನ ಭಕ್ತರು ಆಗಮಿಸುತ್ತಾರೆ. ಆ ದಿನ ಒಂದೊಂದು ಕುಟುಂಬದಿಂದ ಒಬ್ಬೊಬ್ಬ ಮಹಿಳೆ ಶ್ವೇತ ವಸ್ತ್ರ ಧರಿಸಿ ಹರಿವಾಣದಲ್ಲಿ ಹೂ ಅಕ್ಕಿ ದೀಪ ಹಿಡಿದು ಪಟ್ಟಣಿ ಹಬ್ಬದಲ್ಲಿ ಪಾಲ್ಗೊಳ್ಳುತ್ತಾರೆ. ಸಂಜೆ ಹೊಳೆಯಲ್ಲಿ ಮೀನಿಗೆ ಅಕ್ಕಿ ಹಾಕಲಾಗುತ್ತದೆ.
-ಸುನಿಲ್ ಕುಯ್ಯಮುಡಿ
ಮಹಿಳೆ ನಾಪತ್ತೆ
ಮಡಿಕೇರಿ, ಫೆ. 15: ಮಹಿಳೆ ಯೋರ್ವರು ನಾಪತ್ತೆ ಯಾಗಿರುವ ಕುರಿತು ಮಡಿಕೇರಿ ಗ್ರಾಮಾಂತರ ಪೊಲೀಸರಿಗೆ ಪುಕಾರಾಗಿದೆ. ಪೊನ್ನತ್‍ಮೊಟ್ಟೆ ಚೇರಳ - ಶ್ರೀಮಂಗಲದ ಮಂಜುನಾಥ್ ಎಂಬವರ ಪತ್ನಿ ಆಶಾ (32) ಎಂಬವರು ಇತ್ತೀಚೆಗೆ ಕೂಲಿ ಕೆಲಸಕ್ಕೆಂದು ತೆರಳಿದ್ದು, ನಂತರ ಹಿಂತಿರುಗಿಲ್ಲ ಎಂದು ಆಕೆಯ ಮಾವ ಕೃಷ್ಣ ಪೊಲೀಸರಿಗೆ ದೂರು ನೀಡಿದ್ದಾರೆ. ಈ ಬಗ್ಗೆ ಮಾಹಿತಿ ದೊರೆತಲ್ಲಿ ಪೊಲೀಸ್ ಠಾಣೆಗೆ (228777) ಮಾಹಿತಿ ನೀಡಲು ಪ್ರಕಟಣೆ ಕೋರಿದೆ.
ಹಾಸನ-ಕೊಡಗು ಸಂಪರ್ಕ ಸೇತುವೆ ಪರಿಶೀಲಿಸಿದ ಶಾಸಕ ರಂಜನ್
ಸೋಮವಾರಪೇಟೆ, ಫೆ.15: ತಾಲೂಕಿನ ಕೊಡ್ಲಿಪೇಟೆ ಹೋಬಳಿ ವ್ಯಾಪ್ತಿಯ ಗಡಿ ಗ್ರಾಮಗಳಾದ ಹಂಪಾಪುರ-ಕೆಳಕೊಡ್ಲಿ ಸಮೀಪ ನಿರ್ಮಾಣಗೊಂಡಿರುವ ಕೊಡಗು-ಹಾಸನ ಸಂಪರ್ಕಿಸುವ ಬೃಹತ್ ಸೇತುವೆಯನ್ನು ಮಡಿಕೇರಿ ಕ್ಷೇತ್ರದ ಶಾಸಕ ಎಂ.ಪಿ. ಅಪ್ಪಚ್ಚು ರಂಜನ್ ಅವರು ಪರಿಶೀಲನೆ ನಡೆಸಿದರು.
ಕಳೆದ 5 ವರ್ಷಗಳ ಹಿಂದೆಯೇ ಸೇತುವೆ ನಿರ್ಮಾಣವಾಗಿದ್ದರೂ ಲಿಂಕ್ ರಸ್ತೆಯಿಲ್ಲದೇ ಇರುವದರಿಂದ ಸಾರ್ವಜನಿಕರ ಉಪಯೋಗಕ್ಕೆ ಬಳಕೆ ಯಾಗದಿರುವ ಬಗ್ಗೆ ಸಾರ್ವಜನಿಕರು, ಶಾಸಕ ರಂಜನ್ ಅವರ ಗಮನ ಸೆಳೆದ ಹಿನ್ನೆಲೆ ಸ್ಥಳಕ್ಕೆ ಭೇಟಿ ನೀಡಿದ ಅಪ್ಪಚ್ಚು ರಂಜನ್ ಅವರು, ಸೇತುವೆಯನ್ನು ಪರಿಶೀಲನೆ ನಡೆಸಿದರಲ್ಲದೇ, ಸಂಬಂಧಿಸಿದ ಅಭಿಯಂತರರೊಂದಿಗೆ ಮಾತುಕತೆ ನಡೆಸಿದರು.
ಈ ಹಿಂದೆ ಬಿಜೆಪಿ ಸರ್ಕಾರದಲ್ಲಿ ಬಸವರಾಜ ಬೊಮ್ಮಾಯಿ ಅವರು ನೀರಾವರಿ ಸಚಿವರಾಗಿದ್ದ ಸಂದರ್ಭ ಸೇತುವೆ ನಿರ್ಮಾಣಕ್ಕೆ ಅನುದಾನ ಒದಗಿಸಲಾಗಿತ್ತು. ರೂ. 13 ಕೋಟಿ ವೆಚ್ಚದಲ್ಲಿ ಸೇತುವೆಯನ್ನು ನಿರ್ಮಿಸಲಾಗಿದ್ದರೂ ಸಂಪರ್ಕ ರಸ್ತೆಯ ಕೊರತೆಯಿಂದ ಸಾರ್ವಜನಿಕರ ಬಳಕೆಗೆ ಮುಕ್ತವಾಗಿಲ್ಲ. ಈ ಹಿನ್ನೆಲೆ ಸಂಪರ್ಕ ರಸ್ತೆಗೆ 1 ಕೋಟಿ ಅನುದಾನಕ್ಕಾಗಿ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದ್ದು, ಅನುದಾನ ಬಿಡುಗಡೆಯಾದ ತಕ್ಷಣ ರಸ್ತೆ ಕಾಮಗಾರಿ ಪ್ರಾರಂಭಿಸಲಾಗುವದು ಎಂದು ಶಾಸಕರು ತಿಳಿಸಿದರು.
ಹೇಮಾವತಿ ಹಿನ್ನೀರು ಪ್ರದೇಶದಲ್ಲಿರುವ ಈ ಸೇತುವೆಯನ್ನು ವೈಜ್ಞಾನಿಕವಾಗಿ ನಿರ್ಮಿಸಲಾಗಿದೆ. ಹೊಳೆಯಲ್ಲಿ ನೀರಿನ ಹರಿವು ಇದ್ದ ಸಂದರ್ಭವೇ ಕಾಮಗಾರಿಯನ್ನು ನಡೆಸಲಾಗಿದೆ. ರಸ್ತೆಯ ಕೊರತೆ ಇರುವ ಬಗ್ಗೆ ಸರ್ಕಾರದ ಗಮನ ಸೆಳೆಯ ಲಾಗಿದ್ದು, ಶೀಘ್ರವಾಗಿಯೇ ನೂತನ ರಸ್ತೆ ನಿರ್ಮಿಸಿ, ಸೇತುವೆಯನ್ನು ಉದ್ಘಾಟಿಸಲಾಗುವದು ಎಂದು ರಂಜನ್ ತಿಳಿಸಿದರು.
ಸ್ಥಳದಲ್ಲಿದ್ದ ಸ್ಥಳೀಯರಾದ ಭಗವಾನ್ ಅವರು ಪತ್ರಿಕೆಯೊಂದಿಗೆ ಮಾತನಾಡಿ, ಅಪ್ಪಚ್ಚುರಂಜನ್ ಅವರು ಸಚಿವರಾಗಿದ್ದ ಸಂದರ್ಭ ಅನುದಾನ ಬಿಡುಗಡೆಯಾಗಿದೆ. ಆದರೆ ಸೇತುವೆ ಇಂದಿಗೂ ಸಾರ್ವಜನಿಕರ ಬಳಕೆಗೆ ಮುಕ್ತವಾಗಿಲ್ಲ. ಕೋಟ್ಯಾಂತರ ವೆಚ್ಚಮಾಡಿ ಸೇತುವೆ ನಿರ್ಮಿಸಿದ್ದರೂ ಸಹ ಈಗಲೂ ಹಾಸನ, ಬಾಳುಪೇಟೆಗೆ ತೆರಳಬೇಕಿದ್ದರೆ 15 ಕಿ.ಮೀ. ಬಳಸು ದಾರಿಯಲ್ಲಿ ಸಾಗಬೇಕಿದೆ. ಈ ಸೇತುವೆಯಲ್ಲಿ ಸಾಗಿದರೆ ಕೇವಲ 3 ಕಿ.ಮೀ. ಅಂತರದಲ್ಲಿ ಹಾಸನದ ಮಗ್ಗೆ ಗ್ರಾಮಕ್ಕೆ ತಲುಪಬಹುದಾಗಿದೆ. ಸಾರ್ವಜನಿಕರು, ರೈತರು, ಬೆಳೆಗಾರರು, ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಆದಷ್ಟು ಶೀಘ್ರವಾಗಿ ರಸ್ತೆ ಕಾಮಗಾರಿ ಪ್ರಾರಂಭಿಸಲು ಅಭಿಯಂತರರು ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು.
ಈ ಸಂದರ್ಭ ಸ್ಥಳೀಯ ಪ್ರಮುಖರಾದ ಪ್ರಸಾದ್ ಪಟೇಲ್, ಮೋಕ್ಷಕ್, ವಿನೂತ್ ಶಂಕರ್, ನಾಗರಾಜ್