ಸಿದ್ದಾಪುರ, ಫೆ.16: ಕಾಡಾನೆಗಳ ಹಾವಳಿಯನ್ನು ತಡೆಗಟ್ಟಲು ರೈಲ್ವೆ ಬ್ಯಾರಿಕೇಡ್ಗಳ ಕಾಮಗಾರಿ ಭರದಿಂದ ಸಾಗುತ್ತಿದೆ. ಜಿಲ್ಲೆಯಲ್ಲಿ ಕಾಡಾನೆ ಮತ್ತು ಮಾನವ ಸಂಘರ್ಷ ದಿನದಿಂದ ದಿನಕ್ಕೆ ಮಿತಿಮೀರುತ್ತಲೇ ಇದೆ. ಕಾಡಾನೆ ದಾಳಿಗೆ ತುತ್ತಾಗಿ ಪ್ರಾಣ ಕಳೆದುಕೊಂಡವರ ಸಂಖ್ಯೆ ವರ್ಷದಿಂದ ವರ್ಷಕ್ಕೆ ಹೆಚ್ಚಾಗುತ್ತಲೇ ಇದೆ. ಈ ಸಮಸ್ಯೆಯನ್ನು ಕೊನೆಗಾಣಿಸಲು ಅರಣ್ಯ ಇಲಾಖೆ ಸೋಲಾರ್ ಬೇಲಿ ನಿರ್ಮಿಸಿತ್ತು. ಜೊತೆಗೆ ಕಂದಕಗಳನ್ನು ನಿರ್ಮಿಸಿ ಆನೆಗಳಿಂದ ರೈತರಿಗೆ ರಕ್ಷಣೆ ನೀಡಲು ಯೋಜನೆಗಳನ್ನು ಜಾರಿ ಮಾಡಿತ್ತು. ಆದರೆ ಇದ್ಯಾವುದೂ ನಿರೀಕ್ಷಿತ ಫಲನೀಡಿರಲಿಲ್ಲ. ಅಲ್ಲದೆ ಕಾಡಾನೆಗಳ ಹಿಂಡು ಕಾಫಿ ತೋಟಗಳಲ್ಲಿ ಬೀಡು ಬಿಟ್ಟು ಅಲ್ಲೆ ಮರಿಗಳನ್ನು ಹಾಕಿವೆ. ಕಾಡಿನಿಂದ ನಾಡಿಗೆ ಲಗ್ಗೆ ಇಟ್ಟಿರುವ ಕಾಡಾನೆಗಳು ನಿರಂತರವಾಗಿ ದಾಳಿ ಮಾಡುತ್ತಿದ್ದು ರೈತರು ಬಾರೀ ಸಂಕಷ್ಟ ಅನುಭವಿಸಿದ್ದಾರೆ. ಕೊಡಗಿನ ವೀರಾಜಪೇಟೆ ತಾಲೂಕಿನ ಸಿದ್ದಾಪುರ, ಮಾಲ್ದಾರೆ ಮತ್ತು ದುಬಾರೆ ಸುತ್ತಮುತ್ತಲಿನ ಸಂರಕ್ಷಿತ ಅರಣ್ಯ ಪ್ರದೇಶದಿಂದ ಬರುವ ಕಾಡಾನೆಗಳು ಭಾರೀ ಪ್ರಮಾಣದಲ್ಲಿ ರೈತರ ಬೆಳೆ ನಾಶ ಮಾಡುತ್ತ್ತಿವೆ. ಹಲವು ಮಂದಿಯನ್ನು ಬಲಿತೆಗೆದುಕೊಂಡಿವೆ. ಹೀಗಾಗಿ ಹಲವು ವರ್ಷಗಳ ಬೇಡಿಕೆ ಆಗಿದ್ದ ರೈಲ್ವೇ ಕಂಬಿ ಬೇಲಿ ನಿರ್ಮಾಣಕ್ಕೆ ಅರಣ್ಯ ಇಲಾಖೆ ಮುಂದಾಗಿದೆ. ಮಾಲ್ದಾರೆ ಸಂರಕ್ಷಿತಾರಣ್ಯದ ಮೀನುಕೊಲ್ಲಿ ವಲಯದಿಂದ ನೆಲ್ಯಹುದಿಕೇರಿ ಬರಡಿಯಿಂದ ದುಬಾರೆ ಸಂರಕ್ಷಿತಾರಣ್ಯದವರೆಗೆ ಒಟ್ಟು 8.5 ಕಿಲೋಮೀಟರ್ ವ್ಯಾಪ್ತಿಯಲ್ಲಿ ರೈಲ್ವೆ ಕಂಬಿಗಳನ್ನು ಬಳಸಿ ಬೇಲಿ ನಿರ್ಮಿಸಲಾಗುತ್ತಿದೆ. ಎರಡೂವರೆ ಅಡಿ ಸುತ್ತಳತೆ, ಐದು ಅಡಿ ಆಳದ ಚೌಕಾಕಾರದ ಗುಂಡಿಯನ್ನು ಪ್ರತಿ ಹತ್ತು ಅಡಿಗೆ ಒಂದರಂತೆ ತೆಗೆಯಲಾಗುತ್ತಿದೆ. ಐದು ಅಡಿ ಆಳಕ್ಕೆ ರೈಲ್ವೆ ಕಂಬಿಯನ್ನು ಕಾಂಕ್ರಿಟ್ ಹಾಕಿ ಹೂಳಲಾಗುತ್ತದೆ. ಇದೇ ಕಂಬಿ ಭೂಮಿಯಿಂದ 7 ಅಡಿ ಎತ್ತರ ಇರಲಿದ್ದು ಆನೆ ಯಾವುದೇ ಕಾರಣಕ್ಕೂ ಬೇಲಿ ದಾಟಿ ಕಾಡಿನಿಂದ ನಾಡಿಗೆ ಬರದಂತೆ ರೈಲ್ವೆ ಬೇಲಿ ನಿರ್ಮಿಸಲಾಗುತ್ತಿದೆ. ಇದಕ್ಕಾಗಿ ಪ್ರತೀ ಒಂದು ಕಿಲೋಮೀಟರ್ಗೆ 1.20 ಕೋಟಿಯಂತೆ ಹತ್ತೂವರೆ ಕೋಟಿ ವ್ಯಯಿಸಲಾಗುತ್ತಿದೆ.ಈಗಾಗಲೇ ಕಾಡಾನೆಗಳ ಹಾವಳಿ ತಡೆಗಟ್ಟುವ ನಿಟ್ಟಿನಲ್ಲಿ ಅರಣ್ಯ ಇಲಾಖೆ ರಾಜ್ಯ ಹಾಗೂ ಹೊರ ರಾಜ್ಯಗಳಿಂದ ರೈಲ್ವೆ ಬ್ಯಾರಿಕೇಡ್ ಗಳನ್ನು ಸಂಗ್ರಹಿಸಿ ಕಾಮಗಾರಿಗಳಿಗೆ ಆಸಕ್ತಿ ವಹಿಸಿದೆ. ಎಲ್ಲಾ ಗ್ರಾಮಗಳಲ್ಲಿ ರೈಲ್ವೆ ಬ್ಯಾರಿಕೇಡ್ ಗಳನ್ನು ಅಳವಡಿಸಲಿ ಎಂದು ಬೆಳೆಗಾರರು ಹಾಗೂ ಕಾರ್ಮಿಕರು ಒತ್ತಾಯಿಸಿದ್ದಾರೆ.
- ಎ.ಎನ್. ವಾಸು