ಸಿದ್ದಾಪುರ, ಫೆ. 16: ಸಂತ್ರಸ್ತರಿಗೆ ಪುನರ್ವಸತಿ ಕಲ್ಪಿಸಬೇಕೆಂದು ಒತ್ತಾಯಿಸಿ ನಡೆಯುತ್ತಿರುವ ಅಹೋರಾತ್ರಿ ಪ್ರತಿಭಟನೆ ಮುಂದುವರೆದಿದೆ.
ಕಳೆದ ಒಂದು ವಾರಗಳಿಂದ ಸಿದ್ದಾಪುರ ಗ್ರಾಮ ಪಂಚಾಯಿತಿ ಕಚೇರಿ ಆವರಣದಲ್ಲಿ ಸಂತ್ರಸ್ತರು ಅಡುಗೆ ತಯಾರಿಸಿ ಅಲ್ಲಿಯೆ ಊಟ ಮಾಡಿ ಅಲ್ಲೇ ನಿದ್ರಿಸುತ್ತಿದ್ದಾರೆ. ದಿನನಿತ್ಯ ನಡೆಯುತ್ತಿರುವ ಅಹೋರಾತ್ರಿ ಪ್ರತಿಭಟನೆಯಲ್ಲಿ ನದಿತೀರದ ನೂರಾರು ಮಹಿಳೆಯರು ಭಾಗವಹಿಸುತಿದ್ದಾರೆ. ಜಿಲ್ಲಾಡಳಿತವು ಪುನರ್ವಸತಿ ಕಲ್ಪಿಸುವವರೆಗೂ ತಾವು ಪ್ರತಿಭಟನೆಯನ್ನು ಕೈಬಿಡುವುದಿಲ್ಲ ಎಂದು ತಿಳಿಸಿದ್ದಾರೆ.
ಸಿದ್ದಾಪುರ ಗ್ರಾಮ ಪಂಚಾಯಿತಿ ಸದಸ್ಯರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು. ಜಿಲ್ಲಾಡಳಿತವು ಸಂತ್ರಸ್ತರಿಗೆ ಪುನರ್ವಸತಿ ಕಲ್ಪಿಸಿಕೊಡುವ ನಿಟ್ಟಿನಲ್ಲಿ ಈಗಾಗಲೇ ಅಮ್ಮತ್ತಿ ಹೋಬಳಿ ಕಂದಾಯ ಇಲಾಖೆ ಅಧಿಕಾರಿಗಳಿಗೆ ಒತ್ತುವರಿ ಜಾಗದ ಪಟ್ಟಿ ತಯಾರಿಸುವಂತೆ ತಿಳಿಸಿದೆ. ಈ ಹಿನ್ನೆಲೆಯಲ್ಲಿ ಕಂದಾಯ ಇಲಾಖಾಧಿಕಾರಿಗಳು ಸಿದ್ದಾಪುರದ ಸುತ್ತಮುತ್ತಲು ಜಾಗಗಳನ್ನು ಪರಿಶೀಲನೆ ನಡೆಸುತ್ತಿದ್ದಾರೆ. ಈತನ್ಮಧ್ಯೆ ಜಿಲ್ಲಾಡಳಿತ ಒತ್ತುವರಿದಾರರಿಂದ ಜಾಗ ಪಡೆದುಕೊಳ್ಳಲು ಭೂನ್ಯಾಯಮಂಡಳಿಗೆ ಅರ್ಜಿ ಸಲ್ಲಿಸಿದೆ ಎಂದು ತಿಳಿದುಬಂದಿದೆ.