ವೀರಾಜಪೇಟೆ, ಫೆ. 16: 2020ನೇ ಸಾಲಿನ ಬಂಟರ ಸಮುದಾಯಕ್ಕೆ ಸೀಮಿತಗೊಂಡಂತೆ ಜಿಲ್ಲಾಮಟ್ಟದ ಕ್ರೀಡಾಕೂಟವು ಮೇ 1 ರಿಂದ 3 ರವರೆಗೆ ವೀರಾಜಪೇಟೆಯ ಸಂತ ಅನ್ನಮ್ಮ ಶಾಲಾ ಮ್ಯೆದಾನದಲ್ಲಿ ನಡೆಯಲಿದೆ ಎಂದು ಬಂಟರ ಸಂಘದ ತಾಲೂಕು ಕ್ರೀಡಾ ಸಮಿತಿ ಅಧ್ಯಕ್ಷ ಸುದೀಶ್ ರ್ಯೆ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಬಾರಿಯ ಕ್ರೀಡಾಕೂಟವನ್ನು ಬಂಟರ ಸಂಘದ ವೀರಾಜಪೇಟೆ ತಾಲೂಕು ಘಟಕದ ಕ್ರೀಡಾ ಸಮಿತಿಯು ಆಯೋಜಿಸಲಿದೆ. 3 ದಿನಗಳ ಕಾಲ ನಡೆಯುವ ಕ್ರೀಡಾಕೂಟದಲ್ಲಿ ಪುರುಷರಿಗೆ ಕ್ರಿಕೆಟ್, ವಾಲಿಬಾಲ್, ಹಗ್ಗಜಗ್ಗಾಟ, ಭಾರದ ಗುಂಡು ಎಸೆತ ಮಹಿಳೆಯರಿಗೆ ಥ್ರೋಬಾಲ್, ಹಗ್ಗಜಗ್ಗಾಟ ಹಾಗೂ ಪುಟ್ಟ ಮಕ್ಕಳಿಗೆ ವಿವಿಧ ಸ್ಪರ್ಧೆಗಳನ್ನು ಆಯೋಜಿಸಲಾಗಿದೆ. ಕ್ರಿಕೆಟ್ ಪಂದ್ಯಾಟದಲ್ಲಿ ಭಾಗವಹಿಸಲು ತಂಡ ನೋಂದಣಿಯ ಕೊನೆಯ ದಿನಾಂಕವನ್ನು ತಾ. 22 ರವರೆಗೆ ವಿಸ್ತರಿಸಲಾಗಿದೆ. ತಾ. 23 ರಂದು ಎಲ್ಲ ಕ್ರಿಕೆಟ್ ತಂಡಗಳ ನಾಯಕರ ಸಭೆಯನ್ನು ಕರೆಯಲಾಗಿದ್ದು, ಅಂದು ಎಲ್ಲ ನಾಯಕರ ಸಮ್ಮುಖದಲ್ಲಿ ಕ್ರಿಕೆಟ್ ಪಂದ್ಯದ ಟೈಸ್ ಹಾಕಲಾಗುವುದು ಎಂದರು.
ಕಾರ್ಯಾಧ್ಯಕ್ಷ ಸುರೇಶ್ ರ್ಯೆ ಮಾತನಾಡಿ, ಮೇ 3 ರಂದು ನಡೆಯಲಿರುವ ಸಮಾರೋಪ ಸಮಾರಂಭಕ್ಕೆ ಚಲನಚಿತ್ರ ನಟರು ಸೇರಿದಂತೆ ಸಮುದಾಯದ ಪ್ರಮುಖರು ಭಾಗವಹಿಸುವ ನಿರೀಕ್ಷೆಯಿದೆ. ಸಮಾರೋಪ ಸಮಾರಂಭದ ಬಳಿಕ ಮಂಗಳೂರಿನ ಪ್ರಸಿದ್ಧ ತಂಡದ ತುಳು ಹಾಸ್ಯ ನಾಟಕ ಸೇರಿದಂತೆ ವಿವಿಧ ಸಾಂಸ್ಕøತಿಕ ಕಾರ್ಯಕ್ರಮಗಳು ನಡೆಯಲಿದೆ. ಹೆಚ್ಚಿನ ವಿವರಗಳಿಗೆ ಸುದೀಶ್ ರ್ಯೆ 9663956586. ಸಂಪತ್ ಶೆಟ್ಟಿ 9986873386 ಇವರುಗಳನ್ನು ಸಂಪರ್ಕಿಬಹುದು ಎಂದು ಹೇಳಿದರು.
ಗೋಷ್ಠಿಯಲ್ಲಿ ಕಾರ್ಯದರ್ಶಿ ಸಂಪತ್ ಶೆಟ್ಟಿ, ಮಹಿಳಾ ಘಟಕದ ಅಧ್ಯಕ್ಷೆ ಶಶಿಕಲಾ ಶೆಟ್ಟಿ, ಉಪಾಧ್ಯಕ್ಷೆ ಕುಸುಮ ಎನ್. ಶೆಟ್ಟಿ, ಪದಾಧಿಕಾರಿಗಳಾದ ಹೇಮಂತ್ ಶೆಟ್ಟಿ, ಸುರೇಶ್ ರೈ, ನಾಗೇಂದ್ರ ರೈ, ಸತೀಶ್ ರೈ ಮತ್ತಿತರರು ಇದ್ದರು.