ಗೋಣಿಕೊಪ್ಪಲು, ಫೆ.16: ಹಸುವಿನ ಮಾಲೀಕರ ಮುಂದೆಯೇ ಹುಲಿಯು ಹಸುವಿನ ಮೇಲೆ ದಾಳಿ ನಡೆಸಿದ್ದು ಮಾಲೀಕರು ಜೋರಾಗಿ ಕೂಗಿಕೊಂಡ ಹಿನ್ನೆಲೆಯಲ್ಲಿ ಹುಲಿಯು ಹಸುವನ್ನು ಜೀವನ್ಮರಣದ ಸ್ಥಿತಿಯಲ್ಲಿ ಬಿಟ್ಟು ಹೋದ ಘಟನೆ ಟಿಶೆಟ್ಟಿಗೇರಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹರಿಹರ ಗ್ರಾಮದಲ್ಲಿ ನಡೆದಿದೆ.
ಹಸುವಿನ ಮಾಲೀಕರಾದ ಮುಕ್ಕಾಟಿರ ಪೆಮ್ಮಯ್ಯ( ಪೆಮ್ಮ) ಎಂಬವರು ತಮ್ಮ ಹಸುವನ್ನು ಮುಂಜಾನೆ ಮನೆಯ ಸಮೀಪದ ಭತ್ತದ ಗದ್ದೆಯಲ್ಲಿ ಮೇಯಲು ಹಗ್ಗ ಕಟ್ಟಿ ಬಿಟ್ಟಿದ್ದರು.
ಮಧ್ಯಾಹ್ನ 1.30 ಸುಮಾರಿಗೆ ಹಸುವು ಒಂದೇ ಸಮನೆ ಅರಚಿಕೊಂಡ ಶಬ್ದ ಕೇಳಿದ ಮಾಲೀಕ ಗದ್ದೆ ಬಳಿ ಬಂದಾಗ ಹುಲಿಯು ಹಸುವಿನ ಮೇಲೆ ಎರಗಿ ಕುತ್ತಿಗೆ ಭಾಗವನ್ನು ಕಚ್ಚಿ ಹಿಡಿದಿತ್ತು; ಗಾಬರಿಗೊಂಡ ಮಾಲೀಕ ಬೊಬ್ಬೆ ಹಾಕಿದರೂ ಹುಲಿ ಹಸುವನ್ನು ಬಿಡಲಿಲ್ಲ. ನಂತರ ಜೋರಾಗಿ ಶಬ್ದ ಮಾಡಿದಾಗ ಹುಲಿಯು ಮೆಲ್ಲನೆ ಇಳಿದು ಸಮೀಪದ ಕಾಡಿನ ಪೊದೆಗಳಲ್ಲಿ ಮಾಯವಾಯಿತು.
ಕತ್ತಿನ ಭಾಗದಲ್ಲಿ ಗಂಭೀರವಾದ ಗಾಯವಾಗಿದ್ದು ಹಸು ಜೀವನ್ಮರಣ ಸ್ಥಿತಿಯಲ್ಲಿದೆ. ಸುದ್ದಿ ತಿಳಿಯುತ್ತಿದ್ದಂತೆಯೇ ರೈತ ಸಂಘದ ಶ್ರೀಮಂಗಲ ಹೋಬಳಿ ಸಂಚಾಲಕ ಚಟ್ಟಂಗಡ ಕಂಬ ಕಾರ್ಯಪ್ಪ ಹಾಗೂ ರೈತ ಮುಖಂಡರು ಘಟನಾ ಸ್ಥಳಕ್ಕೆ ತೆರಳಿ ಅರಣ್ಯ ಇಲಾಖೆಯ ಅಧಿಕಾರಿಗಳನ್ನು ಸ್ಥಳಕ್ಕೆ ಕರೆಸಿದರು. ಹಸುವಿಗೆ ಚಿಕಿತ್ಸೆ ನೀಡಲು ವೈದ್ಯಾಧಿಕಾರಿಗಳನ್ನು ಕರೆಸಿ ಚಿಕಿತ್ಸೆ ನೀಡಿದರು. ಪೊನ್ನಂಪೇಟೆ ಅರಣ್ಯ ವಲಯದ ಆರ್‍ಎಫ್‍ಓ ತೀರ್ಥರವರು ಅರಣ್ಯ ಇಲಾಖೆಯ ಸಿಬ್ಬಂದಿಗಳನ್ನು ಕರೆಸಿಕೊಂಡು ಹುಲಿ ಸೆರೆಗೆ ಬೋನನ್ನು ಇರಿಸಿದ್ದಾರೆ. 30 ಕ್ಕೂ ಅಧಿಕ ಸಿಬ್ಬಂದಿಗಳು ಈ ಪ್ರದೇಶದಲ್ಲಿ ತಂಗಿದ್ದು ಹುಲಿ ಸೆರೆಗೆ ಪ್ರಯತ್ನ ನಡೆಸಿದ್ದಾರೆ. ಸ್ಥಳದಲ್ಲಿ ರೈತ ಮುಖಂಡರಾದ ಚಟ್ಟಂಗಡ ಕರುಣ್, ಮುಕ್ಕಾಟಿರ ಅರುಣ್, ವಿನು, ಸನ್ನು ಹಾಗೂ ಗ್ರಾಮಸ್ಥರು ಹಾಜರಿದ್ದರು.