ಸುಂಟಿಕೊಪ್ಪ, ಫೆ. 15: ಬಿಎಸ್ಎನ್ಎಲ್ ನೌಕರರು ಕೇಂದ್ರ ಸರಕಾರದ ಸೂಚನೆಯಂತೆ ಸ್ವಯಂ ನಿವೃತ್ತಿ ತೆಗೆದುಕೊಂಡಿರುವುದರಿಂದ ಬಿಎಸ್ಎನ್ಎಲ್ ಗ್ರಾಹಕರು ತೊಂದರೆ ಅನುಭವಿಸುವಂತಾಗಿದೆ.
ಕೊಡಗಿನ ಗುಡ್ಡಗಾಡು ಗ್ರಾಮೀಣ ಪ್ರದೇಶದಲ್ಲಿ ಅತೀ ಹೆಚ್ಚು ಮಂದಿ ಇಂದಿಗೂ ಬಿಎಸ್ಎನ್ಎಲ್ ಸೇವೆಯನ್ನೇ ನೆಚ್ಚಿಕೊಂಡಿದ್ದು, ನೂರಾರು ಸಮಸ್ಯೆಗಳು ಎದುರಿಸು ತ್ತಿದ್ದರೂ ಕೊಡಗಿನ ಜನತೆಯು ಅದರ ಬಳಕೆಯಲ್ಲಿ ತೊಡಗಿಸಿ ಕೊಂಡಿದ್ದರು. ಆದರೆ ಸ್ಥಿರ ದೂರವಾಣಿ ಸಂಪರ್ಕ ಹಾಗೂ ಬ್ರಾಡ್ಬ್ಯಾಂಡ್ ಸೌಲಭ್ಯಗಳನ್ನು ಹೊಂದಿದ್ದಾರೆ.
ಸುಂಟಿಕೊಪ್ಪ ಬಿಎಸ್ಎನ್ಎಲ್ ಕಚೇರಿಯಲ್ಲಿ 17 ಸಿಬ್ಬಂದಿಗಳು ಕರ್ತವ್ಯ ನಿರ್ವಹಿಸುತ್ತಿದ್ದು, ನೌಕರರ ಸ್ವಯಂ ನಿವೃತ್ತಿಯಿಂದ ಈಗ ಜೆಟಿಓ ಒಬ್ಬರೇ ಕೆಲಸ ನಿರ್ವಹಿಸುತ್ತಿದ್ದಾರೆ. ಸುಂಟಿಕೊಪ್ಪ ವ್ಯಾಪ್ತಿಗೆ 7ನೇ ಹೊಸಕೋಟೆ, ಗರಗಂದೂರು, ಮಾದಾಪುರ, ಕಂಬಿಬಾಣೆ, ಕಾನ್ಬೈಲ್ ಉಪಕೇಂದ್ರಗಳನ್ನು ಹೊಂದಿದೆ. ಈ ಉಪಕೇಂದ್ರಗಳ ನಿರ್ವಹಣೆ ಕೆಲಸವು ಒಬ್ಬರೇ ಸಾಗ ಹಾಕಬೇಕಾಗಿದೆ. ಬೇರೆ ಉಪಕೇಂದ್ರಗಳಿಗೆ ತೆರಳಿದರೆ ಸುಂಟಿಕೊಪ್ಪ ಕಚೇರಿಗೆ ಬೀಗ ಮುದ್ರೆ ಬೀಳುತ್ತದೆ. ಮಾಸಿಕ ಬಿಲ್ ಪಾವತಿಸಲು ಸಿಮ್ ಖರೀದಿಸಲು ಹಾಗೂ ನೂತನ ಆಧಾರ್ ಕಾರ್ಡ್ ಮತ್ತು ಅದರಲ್ಲಿರುವ ಲೋಪಗಳನ್ನು ತಿದ್ದುಪಡಿಗೊಳಿಸಲು ಬರುವ ಗ್ರಾಹಕರು ಮುಚ್ಚಿದ ಬಾಗಿಲಿನ ದರ್ಶನ ಪಡೆದು ಮನದಲ್ಲಿ ಗೊಣಗಿಕೊಳ್ಳುತ್ತ ವಾಪಾಸ್ಸು ಹೋಗುತ್ತಿರುವ ದೃಶ್ಯ ಕಾಣಬಹುದಾಗಿದೆ.
ಈ ಹಿಂದೆ 7ನೇ ಹೊಸಕೋಟೆ, ಗರಗಂದೂರು, ಮಾದಾಪುರ, ಕಂಬಿಬಾಣೆ, ಕಾನ್ಬೈಲ್ ಉಪ ಕೇಂದ್ರಗಳಲ್ಲಿ ಸಣ್ಣ ಪುಟ್ಟ ಸಮಸ್ಯೆಗಳು ಉಲ್ಬಣಗೊಂಡಾಗ ಕಚೇರಿಯ ಲೈನ್ಮೆನ್ ದುರಸ್ತಿಗೆ ಮುಂದಾಗುತ್ತಿದ್ದರು ಸಿಬ್ಬಂದಿಗಳು ನಿವೃತ್ತಿಗೊಂಡಿದ್ದರಿಂದ ಮತ್ತಷ್ಟು ಸಮಸ್ಯೆಯನ್ನು ಈ ಭಾಗದ ಜನತೆಯು ಎದುರಿಸುವಂತಾಗಿದೆ.
ಅಂಚೆ ಕಚೇರಿಯಲ್ಲಿ ಬಿಎಸ್ಎನ್ಎಲ್ನ ಬಿಲ್ ಪಾವತಿಸುವ ವ್ಯವಸ್ಥೆ ಇನ್ನೂ ಆರಂಭಗೊಂಡಿಲ್ಲ ಪೋನ್ ಫೇಯಲ್ಲಿ ಹೇಗೆ ಪಾವತಿಸುವುದು ಎಂದು ಎಲ್ಲಾ ಗ್ರಾಹಕರಿಗೆ ತಿಳಿಯದೆ ಇರುವುದು ಮತ್ತೊಂದು ಸಮಸ್ಯೆಯಾಗಿದೆ. ದೇಶದಲ್ಲಿ ಅತ್ಯಂತ ಪ್ರಸಿದ್ಧಿ ಹೊಂದಿದ ಗ್ರಾಮೀಣ ಪ್ರದೇಶದ ಗ್ರಾಹಕರಿಗೆ ಅಚ್ಚುಮೆಚ್ಚಿನ ಸೇವೆ ಸಲ್ಲಿಸುತ್ತಿದ್ದ ಭಾರತ್ ಸಂಚಾರ್ ನಿಗಮದ ಗತಕಾಲದ ವೈಭವ ಮರೆಯಾಗುತ್ತಿದ್ದು, ಗ್ರಾಹಕರು ಬಿಎಸ್ಎನ್ಎಲ್ನ ಸೇವೆಯಿಂದ ವಂಚಿರಾಗುತ್ತಿರುವ ಎಲ್ಲಾ ಲಕ್ಷಣಗಳು ಕಂಡು ಬರುತ್ತಿದೆ.
ಸ್ಥಿರ ದೂರವಾಣಿ ಹಾಗೂ ಬ್ರಾಡ್ಬ್ಯಾಂಡ್ ಸೇವೆಯನ್ನೇ ಕೊಡಗಿನ ಗುಡ್ಡಗಾಡು ಗ್ರಾಮೀಣ ಪ್ರದೇಶ ಜನರು ಅಲಂಭಿತರಾಗಿದ್ದಾರೆ ಆದರೆ ಅದರ ತಿಂಗಳ ಬಾಡಿಗೆ ದರವನ್ನು ಪಾವತಿಸಲು ಪರದಾಡುವಂತಾಗಿದೆ. ಸ್ವಯಂ ನಿವೃತ್ತಿ ಬಗ್ಗೆ ಕೇಂದ್ರ ಸರಕಾರಕ್ಕೆ ಆರಿವಿದ್ದರೂ ಬದಲಿ ನೇಮಕಾತಿ ಗೊಳಿಸದೆ ಗ್ರಾಹಕರಿಗೆ ಮೂಲ ಸೌಕರ್ಯಕ್ಕೆ ಅಡೆತಡೆ ನೀಡುತ್ತಿರುವುದು ಸರಕಾರವು ಖಾಸಗಿ ಸಂಸ್ಥೆಗಳೊಂದಿಗೆ ಶಾಮೀಲಾಗಿ ದ್ದೆಯೇ ಎಂಬ ಸಂಶಯಕ್ಕೆ ಎಡೆಮಾಡಿಕೊಟ್ಟಿದೆ ಎಂದು ವಹೀದ್ಜಾನ್ ಅನಿಸಿಕೆ ವ್ಯಕ್ತಪಡಿಸಿದ್ದಾರೆ. ನಾಕೂರು-ಶಿರಂಗಾಲ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಾನ್ಬೈಲ್ ಬಿಎಸ್ಎನ್ ಎಲ್ ಕಚೇರಿ ಹೊಂದಿದೆ ಪಂಚಾಯಿತಿ ವ್ಯಾಪ್ತಿಯ 11 ಗ್ರಾಮಗಳ ಜನತೆಯು ಅತೀ ಹೆಚ್ಚಾಗಿ ಬಿಎಸ್ಎನ್ಎಲ್ ಸೀಮ್ ಹಾಗೂ ಸ್ಥಿರ ದೂರವಾಣಿಯನ್ನು ಬಳಸು ತ್ತಿದ್ದಾರೆ ಆದರೆ ಕಳೆದ ಒಂದೂವರೆ ತಿಂಗಳಿನಿಂದ ಗ್ರಾಹಕರಿಗೆ ನಿತ್ಯ ಕಿರಿಕಿರಿ ಉಂಟಾಗಿದೆ ವಿದ್ಯುತ್ ಸ್ಥಗಿತ ಗೊಂಡಾಗ ಜನರೇಟರ್ ಚಾಲನೆ ಗೊಳ್ಳದೆ ದೂರವಾಣಿ ಮೊಬೈಲ್ಗಳು ಸ್ಥಗಿತಗೊಳ್ಳುತ್ತಿದೆ ಕೂಡಲೇ ಸಿಬ್ಬಂದಿ ಗಳನ್ನು ಕರ್ತವ್ಯಕ್ಕೆ ನಿಯೋಜಿಸುವಂತೆ ಗ್ರಾಹಕರ ಸಮಸ್ಯೆಯನ್ನು ಪರಿಹರಿಸುವಂತೆ ತಾ.ಪಂ. ಮಾಜಿ ಉಪಾಧ್ಯಕ್ಷ ಶಂಕರ ನಾರಾಯಣ ಒತ್ತಾಯಿಸಿದ್ದಾರೆ.