ಸೋಮವಾರಪೇಟೆ, ಫೆ.14: ತಾಲೂಕಿನ ದೊಡ್ಡಮಳ್ತೆ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿರುವ ಐತಿಹಾಸಿಕ ಹೊನ್ನಮ್ಮನಕೆರೆ ದಡದಲ್ಲಿ ನೂತನವಾಗಿ ತಡೆಗೋಡೆ ನಿರ್ಮಿಸಲು ಅಗತ್ಯ ಕ್ರಮ ಕೈಗೊಳ್ಳಬೇಕೆಂದು ಶಾಸಕ ಎಂ.ಪಿ. ಅಪ್ಪಚ್ಚು ರಂಜನ್ ಸಂಬಂಧಿಸಿದ ಅಭಿಯಂತರರಿಗೆ ಸೂಚನೆ ನೀಡಿದರು.
ಕೆರೆಯ ದಡದಲ್ಲಿ ಈ ಹಿಂದೆ ನಿರ್ಮಿಸಲಾಗಿರುವ ತಡೆಗೋಡೆ ದುಸ್ಥಿತಿಗೆ ತಲುಪಿದ್ದು, ಕುಸಿದು ಬೀಳುವ ಮುನ್ನ ನೂತನ ತಡೆಗೋಡೆ ನಿರ್ಮಿಸಬೇಕೆಂದು ಸ್ಥಳೀಯರಾದ ರಾಶಿತ್, ರುದ್ರಪ್ಪ, ಗ್ರಾ.ಪಂ. ಅಧ್ಯಕ್ಷ ಸುಳಿಮಳ್ತೆ ದಿವಾಕರ್ ಸೇರಿದಂತೆ ಇತರರು ಶಾಸಕರ ಗಮನ ಸೆಳೆದ ಹಿನ್ನೆಲೆ, ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು.
ಉದ್ದೇಶಿತ ಕಾಮಗಾರಿಗೆ ಸಂಬಂಧಿಸಿದಂತೆ ತಕ್ಷಣ ಕ್ರಿಯಾಯೋಜನೆ ತಯಾರಿಸಿ ಸಣ್ಣ ನೀರಾವರಿ ಇಲಾಖೆಗೆ ಸಲ್ಲಿಸುವಂತೆ ಸ್ಥಳದಲ್ಲಿದ್ದ ಜಿಲ್ಲಾ ಪಂಚಾಯತ್ ಅಭಿಯಂತರ ವೀರೇಂದ್ರ ಅವರಿಗೆ ಶಾಸಕರು ಸೂಚಿಸಿದರು.
ಇದರೊಂದಿಗೆ ಗೆಜ್ಜೆಹಣಕೋಡು ಸಮುದಾಯ ಭವನ ನಿರ್ಮಾಣಕ್ಕೆ ರೂ. 5 ಲಕ್ಷ ಅನುದಾನ ಒದಗಿಸುವದಾಗಿ ಶಾಸಕರು ಗ್ರಾಮಸ್ಥರಿಗೆ ಮನವಿ ಸಲ್ಲಿಸಿದರು.