ಮಡಿಕೇರಿ, ಫೆ. 16: ನಗರದ ಚೇಂಬರ್ ಆಫ್ ಕಾಮರ್ಸ್ ಕಟ್ಟಡದಲ್ಲಿ ಕೊಡಗು ಜಿಲ್ಲಾ ಜಾತ್ಯತೀತ ಜನತಾದಳದ ನೂತನ ಕಚೇರಿಯನ್ನು ಹಿರಿಯ ಕಾರ್ಯಕರ್ತ ಹೆಚ್.ಎನ್ ತಮ್ಮಯ್ಯ, ಅಧ್ಯಕ್ಷರ ಕಚೇರಿಯನ್ನು ಹಿರಿಯ ಮುಖಂಡ ಪಾಣತ್ತಲೆ ವಿಶ್ವನಾಥ್, ಕಾರ್ಯದರ್ಶಿ ಕಚೇರಿಯನ್ನು ನಿವೃತ್ತ ಡಿವೈಎಸ್ಪಿ ಕೇಶವಾನಂದ ಉದ್ಘಾಟಿಸಿದರು.
ಧರ್ಮಗುರುಗಳಾದ ಫಾದರ್ ಅಮರ್ತು, ಮೌಲನ ಅಜ್ರತ್ ಆಶೀರ್ವಚನ ನೀಡಿದರು.
ಜೆಡಿಎಸ್ ಜಿಲ್ಲಾಧ್ಯಕ್ಷ ಕೆಎಂಬಿ ಗಣೇಶ್ ಅಧ್ಯಕ್ಷತೆ ವಹಿಸಿ ಪ್ರಾಸ್ತಾವಿಕವಾಗಿ ಮಾತನಾಡಿ, ಹಿರಿಯರ ಮಾರ್ಗದರ್ಶನ, ಕಿರಿಯರ ಸಹಕಾರದಿಂದ ಪಕ್ಷ ಸಂಘಟನೆ ಗಳೊತ್ತಿದೆ. ಜಿಲ್ಲೆಯಲ್ಲಿ ಆನೇಕ ಜ್ವಲಂತ ಸಮಸ್ಯೆಗಳಿದೆ. 2018ರಲ್ಲಿ ಸಂಭವಿಸಿದ ಪ್ರಾಕೃತಿಕ ವಿಕೋಪ ಸಂದರ್ಭ ಅಂದಿನ ಮೈತ್ರಿ ಸರ್ಕಾರದ ಮುಖ್ಯಮಂತ್ರಿ ಹೆಚ್.ಡಿ ಕುಮಾರಸ್ವಾಮಿ ತ್ವರಿತವಾಗಿ ಪರಿಹಾರ ಕಾರ್ಯ ಕೈಗೊಂಡಿದ್ದರು. ಆದರೆ, ಬಿಜೆಪಿ ಸರ್ಕಾರ ನೆರೆಸಂತ್ರಸ್ತರಿಗೆ ಸೂಕ್ತ ಪರಿಹಾರ ನೀಡುವಲ್ಲಿ ವಿಫಲವಾಗಿದೆ. ಈ ನಿಟ್ಟಿನಲ್ಲಿ ಪಕ್ಷದಿಂದ ಮುಂದಿನ ದಿನಗಳಲ್ಲಿ ಹೋರಾಟ ನಡೆಸ ಲಾಗುತ್ತದೆ. ಬಿಜೆಪಿ ಪಕ್ಷ ಕಾಂಗ್ರೆಸ್ ಮುಕ್ತ ಕೊಡಗು ನಿರ್ಮಾಣ ಮಾಡುವ ಗುರಿ ಮಾತ್ರ ಹೊಂದಿದೆ. ಅಭಿವೃದ್ಧಿ ಯನ್ನು ಬಿಜೆಪಿ ಮರೆತಿದೆ. ಆದರೆ, ಮುಂದಿನ ದಿನಗಳಲ್ಲಿ ಬಿಜೆಪಿ ಮುಕ್ತ ಕೊಡಗು ನಿರ್ಮಾಣವಾಗಲಿದೆ. ಮುಂದಿನ ನಗರಸಭೆ ಹಾಗೂ ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಪಕ್ಷ ಗೆಲುವು ದಾಖಲಿಸಲಿದೆ ಎಂದರು.
ಪಕ್ಷದ ಹಿರಿಯ ಮುಖಂಡ ಹೆಚ್.ಎನ್. ತಮ್ಮಯ್ಯ ಮಾತನಾಡಿ, ಜಿಲ್ಲೆಯಲ್ಲಿ ಜೆಡಿಎಸ್ ಪಕ್ಷದ ಸಂಘಟನೆಗೆ ನೂರಾರೂ ಕಾರ್ಯಕರ್ತರ ಶ್ರಮವಿದೆ. ಒಂದು ಕಾಲದಲ್ಲಿ ಬಲಿಷ್ಠವಾಗಿದ್ದ ಕಾಂಗ್ರೆಸ್ ಪಕ್ಷವನ್ನು ಸೋಲಿಸಿ ಜೆಡಿಎಸ್ ಕೊಡಗಿನಲ್ಲಿ ಗೆಲುವು ದಾಖಲಿಸಿತ್ತು. ಇದೀಗ ಮತ್ತೆ ಪಕ್ಷದ ಸಂಘಟನೆಗೆ ಕಾರ್ಯಕರ್ತರು ಒಂದಾಗಬೇಕೆಂದು ಕರೆ ನೀಡಿದರು.
ಅಲ್ಪಸಂಖ್ಯಾತ ಘಟಕದ ಜಿಲ್ಲಾಧ್ಯಕ್ಷ ಇಸಾಖ್ ಖಾನ್ ಮಾತನಾಡಿ, ಮುಂದಿನ ಚುನಾವಣೆಗಳನ್ನು ಒಂದಾಗಿ ಎದುರಿಸಿ ಗೆಲುವು ದಾಖಲಿಸಬೇಕಾಗಿದೆ. ಕಾರ್ಯಕರ್ತಲ್ಲಿರುವ ಸಮಸ್ಯೆಗಳನ್ನು ಪಕ್ಷದ ವೇದಿಕೆಯಲ್ಲಿ ಬಗೆಹರಿಸಿಕೊಳ್ಳಬೇಕು ಎಂದರು.
ಯುವ ಘಟಕದ ಜಿಲ್ಲಾಧ್ಯಕ್ಷ ವಿಶ್ವ ಮಾತನಾಡಿ, ಮುಂದಿನ ಚುನಾವಣೆಯನ್ನು ಎದುರಿಸುವ ನಿಟ್ಟಿನಲ್ಲಿ ಬೂತ್ ಮಟ್ಟದಲ್ಲಿ ಪಕ್ಷ ಸಂಘಟಿಸುವ ಕೆಲಸವಾಗಬೇಕಾಗಿದೆ ಎಂದರು.
ಸನ್ಮಾನ: ಪಕ್ಷ ಸಂಘಟನೆಗೆ ಹಲವು ವರ್ಷಗಳಿಂದ ದುಡಿಯುತ್ತಿರುವ ಕಾರ್ಯಕರ್ತರಾದ ಶನಿವಾರಸಂತೆಯ ಬಿ.ಎ. ಮುದ್ದೇಗೌಡ, ಅವರೆದಾಳುವಿನ ಜಯಚಂದ್ರ, ಡಿ.ಪಿ. ಬೋಜಪ್ಪ, ಹೆಚ್.ಎನ್ ತಮ್ಮಯ್ಯ, ಮಾಜಿ ಜಿ.ಪಂ. ಸದಸ್ಯೆ ಪುಷ್ಪ ನಾಗರಾಜ್, ಕೆ.ಎಂ. ಅಬೀರ್ ಸಾಬು, ಕರಡಿಗೋಡುವಿನ ಯಮುನಾ, ಸುಂಟಿಕೊಪ್ಪದ ಎಂ.ಎಂ ಶರೀಫ್, ನಾಪೋಕ್ಲುವಿನ ಮನ್ಸೂರ್ ಅಲಿ, ವೀರಾಜಪೇಟೆ ಪ.ಪಂ. ಮಾಜಿ ಸದಸ್ಯ ಎಸ್.ಎ. ಮೊಯ್ದೀನ್, ವೀರಾಜಪೇಟೆ ತಾಲೂಕಿನ ಮಾಜಿ ಅಧ್ಯಕ್ಷ ಮನೆಯಪಂಡ ಬೆಳ್ಯಪ್ಪ, ಭಾಗಮಂಡಲದ ಪಾಣತ್ತಲೆ ವಿಶ್ವನಾಥ್, ಕೊಡಂಗೇರಿಯ ಯೂಸಫ್ ಅವರನ್ನು ಸನ್ಮಾನಿಸಲಾಯಿತು.