ಮಡಿಕೇರಿ, ಫೆ. 15: ಇಬ್ಬರು ಶಾಸಕರು ಸೇರಿದಂತೆ ಬಿಜೆಪಿ ಪ್ರತಿನಿಧಿಗಳೇ ಹೆಚ್ಚಾಗಿರುವ ಕೊಡಗು ಜಿಲ್ಲೆಗೆ ಸಚಿವ ಸ್ಥಾನ ನೀಡದೆ ರಾಜ್ಯ ಬಿಜೆಪಿ ನೇತೃತ್ವದ ಸರ್ಕಾರ ಕೊಡಗಿನ ಬಗ್ಗೆ ಮಲತಾಯಿ ಧೋರಣೆ ತೋರಿದೆ ಎಂದು ಕೆಪಿಸಿಸಿ ಮಾಜಿ ಕಾರ್ಯದರ್ಶಿ ಹಾಗೂ ವೀರಾಜಪೇಟೆ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಉಸ್ತುವಾರಿ ಟಿ.ಎಂ. ಶಾಹಿದ್ ತೆಕ್ಕಿಲ್ ಆರೋಪಿಸಿದ್ದಾರೆ.

ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಕೊಡಗಿನಲ್ಲಿ ಇಬ್ಬರು ಶಾಸಕರು, ಒಬ್ಬರು ವಿಧಾನ ಪರಿಷತ್ ಸದಸ್ಯರು, ಮತ್ತೊಬ್ಬರು ಬಿಜೆಪಿ ಸಂಸದರು ಇದ್ದರೂ ಜಿಲ್ಲೆಗೆ ಸಂಪುಟದಲ್ಲಿ ಯಾವುದೇ ಪ್ರಾತಿನಿಧ್ಯ ನೀಡಿಲ್ಲವೆಂದು ಟೀಕಿಸಿದರು.

ಕೇವಲ ಭರವಸೆಗಳಷ್ಟೇ ನೀಡಿ ಕಾಲಕಳೆಯುತ್ತಿರುವ ಸರ್ಕಾರ ಕೊಡಗನ್ನು ಸಂಪೂರ್ಣವಾಗಿ ಕಡೆಗಣಿಸಿದೆ. ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಪಕ್ಷಾಂತರಿ ಶಾಸಕರುಗಳ ಬೇಡಿಕೆಗಳನ್ನು ಈಡೇರಿಸುವುದಕ್ಕಷ್ಟೇ ತಮ್ಮ ಸಮಯವನ್ನು ಮೀಸಲಿರಿಸಿದೆ ಎಂದು ಆರೋಪಿಸಿದರು. ಗೋಷ್ಠಿಯಲ್ಲಿ ಜಿಲ್ಲಾ ಕಾಂಗ್ರೆಸ್ ಖಜಾಂಚಿ ಹೆಚ್.ಎಂ. ನಂದ ಕುಮಾರ್, ಸಾಮಾಜಿಕ ಜಾಲತಾಣದ ಜಿಲ್ಲಾಧ್ಯಕ್ಷ ಹೊಸೂರು ಸೂರಜ್, ನಗರ ಯುವ ಘಟಕದ ಅಧ್ಯಕ್ಷ ಮಂಡಿರ ಸದಾ ಮುದ್ದಪ್ಪ ಹಾಗೂ ಪ.ಜಾತಿ ಪಂಗಡ ಘಟಕದ ಅಧ್ಯಕ್ಷ ಮುದ್ದುರಾಜು ಉಪಸ್ಥಿತರಿದ್ದರು.