ಮಡಿಕೇರಿ, ಫೆ. 16: ಮಲೆನಾಡು ಜಿಲ್ಲೆಯಾಗಿದ್ದು; ಕೃಷಿ ಪ್ರಧಾನವಾಗಿರುವ ಕೊಡಗು ಪ್ರಸ್ತುತ ಇದಕ್ಕೆ ಸಂಬಂಧಿಸಿದ ಚಟುವಟಿಕೆಗಳಲ್ಲಿ ಮುಳುಗಿದೆ. ಜಿಲ್ಲೆಯ ಆರ್ಥಿಕತೆಯ ಬೆನ್ನೆಲುಬಾದ ಕಾಫಿ ಕುಯಿಲು ಸೇರಿದಂತೆ ಇದರ ಇತರ ಪೂರಕ ಕೆಲಸಗಳು, ನೀರು ಹಾಯಿಸುವಿಕೆ, ಕರಿಮೆಣಸು ಫಸಲಿನ ನಿರ್ವಹಣೆ ಇತ್ಯಾದಿ ಕೆಲಸ ಕಾರ್ಯಗಳಿಗೆ ಇದು ಪರ್ವಕಾಲವಾಗಿದೆ. ಇವೆಲ್ಲದರ ನಡುವೆ ಎದುರಾಗುತ್ತಿರುವ ಕಾರ್ಮಿಕರ ಸಮಸ್ಯೆ, ಬೆಲೆ ಇಳಿಮುಖದಂತಹ ತಾಪತ್ರಯಗಳಿಂದ ಬೆಳೆಗಾರರು, ರೈತರು ಒತ್ತಡ ಎದುರಿಸುತ್ತಿದ್ದಾರೆ. ಇದು ಒಂದೆಡೆಯಾದರೆ; ಇನ್ನಿತರ ಹಲವು ಸಮಸ್ಯೆಗಳ ನಡುವೆ ಭತ್ತ ಬೆಳೆದಿರುವ ರೈತರು ಭತ್ತಕ್ಕೆ ಸೂಕ್ತ ಬೆಲೆ ಸಿಗದೆ; ಸೂಕ್ತ ರೀತಿಯಲ್ಲಿ ಮಾರಾಟ ಮಾಡಲು ಸಾಧ್ಯವಾಗದೆ ಒದ್ದಾಡುತ್ತಿರುವದು ಮತ್ತೊಂದೆಡೆಯಾಗಿದೆ.ಬೆಳೆಗಾರರು - ರೈತರು ವಿವಿಧ ಕೆಲಸ ಕಾರ್ಯಗಳಲ್ಲಿ ನಿರತರಾಗಿದ್ದರೆ; ಪ್ರಸಕ್ತ ಸಾಲಿನ ಶೈಕ್ಷಣಿಕ ಪರೀಕ್ಷೆಗಳು ಎದುರಾಗುತ್ತಿದ್ದು; ಪೋಷಕರು - ಶಿಕ್ಷಕರು, ವಿದ್ಯಾರ್ಥಿಗಳು ಪರೀಕ್ಷೆ ಎದುರಿಸುವತ್ತ ಅಗತ್ಯ ತಯಾರಿ ನಡೆಸುತ್ತಿದ್ದಾರೆ. ಇವುಗಳೆಲ್ಲದರ ನಡುವೆ ಮದುವೆ - ಮತ್ತಿತರ ಶುಭ ಕಾರ್ಯಗಳು ಅಲ್ಲಲ್ಲಿ ಜರುಗುತ್ತಿದ್ದು; ಬಂಧು - ಬಳಗದವರು ಈ ಸಮಾರಂಭಗಳನ್ನು ನಿಭಾಯಿಸಬೇಕಾಗಿದೆ.ಸಹಜವಾಗಿ ಜನವರಿಯಿಂದ ಮಾರ್ಚ್, ಏಪ್ರಿಲ್, ಮೇ ತನಕವೂ ಕೊಡಗು ಜಿಲ್ಲೆ ಇದೇ ರೀತಿಯ ಚಟುವಟಿಕೆಯಲ್ಲಿ ಮುಳುಗಿರುತ್ತದೆ. ಇದರಿಂದಾಗಿ ನಗರ - ಪಟ್ಟಣಗಳಲ್ಲಿ ಜನರ ಓಡಾಟ, ವಹಿವಾಟುಗಳೂ ಕಡಿಮೆಯಾಗಿವೆ. ವಾರಾಂತ್ಯಗಳಲ್ಲಿ ಉದ್ಯೋಗಸ್ಥರಾಗಿರುವ ಕೆಲವು ಒತ್ತಡಗಳಿಲ್ಲದ ಪ್ರವಾಸಿಗರನ್ನು ಹೊರತುಪಡಿಸಿದರೆ; ಎಲ್ಲೆಡೆ ಎಲ್ಲವೂ ಬಿಕೋ ಎಂಬ ಪರಿಸ್ಥಿತಿ ಪ್ರಸ್ತುತ ಕಂಡಬರುತ್ತಿದೆ. ಖಾಸಗಿ ಬಸ್ಗಳವರು, ಬಾಡಿಗೆ ವಾಹನದವರು, ಹೊಟೇಲ್ ಇನ್ನಿತರ ವ್ಯಾಪಾರಸ್ಥರಿಗೂ ಇದು ಒಂದು ರೀತಿಯಲ್ಲಿ ಸಂಕಷ್ಟದ ಸನ್ನಿವೇಶವಾಗಿದೆ. ಇನ್ನೇನು ಕೆಲವು ದಿನಗಳಲ್ಲಿ ಶಿವರಾತ್ರಿಯೂ ಎದುರಾಗಲಿದ್ದು; ಜಿಲ್ಲೆಯ ಅಲ್ಲಲ್ಲಿ ಅಡ್ಡಮಳೆ (ಕಾಫಿ ಹೂ ಮಳೆ) ಯಾಗುವ ಸಾಧ್ಯತೆಗಳೂ ಕಂಡುಬರುತ್ತಿದೆ.
ಈಗಾಗಲೇ ನಾಪೋಕ್ಲು ವಿಭಾಗದಲ್ಲಿ ಸಣ್ಣ ಪ್ರಮಾಣದ ಮಳೆ ಸುರಿದಿದ್ದು; ಇದರಿಂದಾಗಲಿರುವ ವ್ಯತಿರಿಕ್ತ ಪರಿಣಾಮವನ್ನು ಸರಿಪಡಿಸಲು ಬೆಳೆಗಾರರು ತ್ವರಿತಗತಿಯಲ್ಲಿ ನೀರು ಹಾಯಿಸುವ ನಿಟ್ಟಿನಲ್ಲೂ ಶ್ರಮಪಡುತ್ತಿದ್ದಾರೆ. ಇದಲ್ಲದೆ ವಾತಾವರಣದಲ್ಲಿನ ಬದಲಾವಣೆಯಿಂದಾಗಿ ಬೇಸಿಗೆಯ ಆರಂಭಿಕ ಹಂತದಲ್ಲೇ ಅಂತರ್ಜಲ ಸೇರಿದಂತೆ; ನದಿ - ತೋಡುಗಳಲ್ಲಿ ನೀರಿನ ಮಟ್ಟ ದಿನೇ ದಿನೇ ಇಳಿಮುಖವಾಗುತ್ತಿದ್ದು; ಇದು ಒಂದು ರೀತಿಯಲ್ಲಿ ಕೃಷಿ ಆಧಾರಿತ ಜನರನ್ನು ಆತಂಕಕ್ಕೆ ಈಡುಮಾಡುತ್ತಿದೆ. ಈ ರೀತಿಯ ಹತ್ತಾರು ಕಾರಣಗಳಿಂದಾಗಿ ಪ್ರಸ್ತುತ ಜಿಲ್ಲೆಯಲ್ಲಿ ಎಲ್ಲವೂ ಒಂದು ರೀತಿಯಲ್ಲಿ ಅಘೋಷಿತ ಬಂದ್ನಂತಹ ಸನ್ನಿವೇಶ ಉಂಟುಮಾಡಿದೆ. -ಶಶಿ