ಸಿದ್ದಾಪುರ, ಫೆ. 14: ಕರಡಿಗೋಡು ಮತ್ತು ಗುಹ್ಯ ಭಾಗದ ಪ್ರವಾಹ ಸಂತ್ರಸ್ತರ ಅಹೋರಾತ್ರಿ ಪ್ರತಿಭಟನೆ 5 ದಿನ ಪೂರೈಸಿ, 6ನೇ ದಿನಕ್ಕೆ ಕಾಲಿಟ್ಟಿದೆ.ಪ್ರತಿಭಟನೆಗೆ ಸಿದ್ದಾಪುರ ಚೇಂಬರ್ ಆಫ್ ಕಾಮರ್ಸ್ ಬೆಂಬಲ ಸೂಚಿಸಿ ಸಿದ್ದಾಪುರದ ಅಂಗಡಿ ಮುಂಗಟ್ಟುಗಳು ಬೆಳಿಗ್ಗೆ 10 ರಿಂದ 12 ರ ವರೆಗೆ ಬಂದ್ ಮಾಡಲಾಗಿತ್ತು. ಚೇಂಬರ್ ಆಫ್ ಕಾಮರ್ಸ್ ಅಧ್ಯಕ್ಷ ಕೆ.ಕೆ ಶ್ರೀನಿವಾಸ್ ಮಾತನಾಡಿ, ಜಿಲ್ಲಾಡಳಿತ ನೀಡಿದ ಭರವಸೆಯಂತೆ ಪ್ರವಾಹ ಸಂತ್ರಸ್ತರಿಗೆ ಕೂಡಲೇ ಸೂರು ಕಲ್ಪಿಸಬೇಕಾಗಿದೆ. ಸಂತ್ರಸ್ತರ ಹೋರಾಟಕ್ಕೆ ಚೇಂಬರ್ ಆಫ್ ಕಾಮರ್ಸ್ ಸಂಪೂರ್ಣ ಬೆಂಬಲ ನೀಡುವುದಾಗಿ ಹೇಳಿದರು.

ಡಿಸಿಸಿ ಮಾಜಿ ಅಧ್ಯಕ್ಷ ಟಿ.ಪಿ ರಮೇಶ್ ಪ್ರತಿಭಟನೆಗೆ ಬೆಂಬಲ ಸೂಚಿಸಿ ಮಾತನಾಡಿ, ಸರಕಾರವೇ ಒಪ್ಪಿಕೊಂಡಂತೆ ಕರಡಿಗೋಡು ಮತ್ತು ಗುಹ್ಯ ಗ್ರಾಮದ ಜನತೆಗೆ ನಿವೇಶನ ಮತ್ತು ಮನೆಯನ್ನು ಸರಕಾರ ಕೂಡಲೇ ನಿರ್ಮಿಸಿಕೊಡಬೇಕು. ಸಂತ್ರಸ್ತರ ಎಲ್ಲಾ ರೀತಿಯ ಹೋರಾಟಕ್ಕೆ ಬೆಂಬಲ ನೀಡುವುದಾಗಿ ತಿಳಿಸಿದರು.ಮಾಜಿ ತಾ.ಪಂ ಸದಸ್ಯ ಸಿ.ಎ ಹಂಸ ಮಾತನಾಡಿ, ಪ್ರವಾಹಕ್ಕೆ ಸಿಲುಕಿ ಸಂಕಷ್ಟದಲ್ಲಿರುವ ಸಂತ್ರಸ್ತರು ಕಳೆದ 5 ದಿನಗಳಿಂದ (ಮೊದಲ ಪುಟದಿಂದ) ಪ್ರತಿಭಟನೆ ನಡೆಸುತ್ತಿದ್ದರು ಅಧಿಕಾರಿಗಳು ಸೂಕ್ತ ರೀತಿಯಲ್ಲಿ ಸ್ಪಂದಿಸದೆ ಇರುವುದರ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದರು. ಕೂಡಲೇ ಶಾಶ್ವತ ಪುನರ್ವಸತಿ ಕಲ್ಪಿಸುವಂತೆ ಆಗ್ರಹಿಸಿದರು. ಬೆಂಬಲ: ಜೆಡಿಎಸ್ ಜಿಲ್ಲಾಧ್ಯಕ್ಷ ಕೆಎಂಬಿ ಗಣೇಶ್, ಸಿಪಿಐ ಕಾರ್ಯದರ್ಶಿ ಕೆ.ವಿ ಸುನಿಲ್, ಕಿಸಾನ್ ಘಟಕದ ವಿರಾಜಪೇಟೆ ತಾಲ್ಲೂಕು ಅಧ್ಯಕ್ಷ ಕೆ.ಎಸ್ ಗೋಪಾಲ್ ಕೃಷ್ಣ, ಜಿಲ್ಲಾ ಕ್ರೈಸ್ತ ಸಂಘದ ಅಧ್ಯಕ್ಷ ಬೇಬಿ ಮ್ಯಾಥ್ಯೂ, ಜಿಲ್ಲಾ ಪಂಚಾಯಿತಿ ಸದಸ್ಯರಾದ ಸುನಿತಾ ಮಂಜುನಾಥ್, ಪಿ.ಆರ್. ಪಂಕಜಾ, ಲೀಲಾವತಿ, ತಾಲೂಕು ಪಂಚಾಯಿತಿ ಸದಸ್ಯರಾದ ಚಿನ್ನಮ್ಮ, ಸುಹಾದ ಅಶ್ರಫ್, ಮಡಿಕೇರಿ ಮೂಡಾ ಮಾಜಿ ಅಧ್ಯಕ್ಷ ಚುಮ್ಮಿ ದೇವಯ್ಯ, ಸಿದ್ದಾಪುರ ಮಸೀದಿಯ ಧರ್ಮ ಗುರು ನೌಫಲ್ ಹುದವಿ, ನೆಲ್ಯಹುದಿಕೇರಿ ಗ್ರಾಮ ಪಂಚಾಯತಿ ಉಪಾಧ್ಯಕ್ಷೆ ಸೆಫಿಯಾ ಮುಹಮ್ಮದ್ ಸೇರಿದಂತೆ ಮತ್ತಿತರರು ಪ್ರತಿಭಟನೆಗೆ ಬೆಂಬಲ ಸೂಚಿಸಿದರು.