ಕಾಯಪಂಡ ಶಶಿ ಸೋಮಯ್ಯ ಮಡಿಕೇರಿ, ಫೆ. 14: ಕ್ರೀಡಾ ಜಿಲ್ಲೆ ಎಂದು ಹೆಸರು ಪಡೆದಿರುವ ಕೊಡಗು ಜಿಲ್ಲೆಗೆ ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆಯ (ಕೆÀ.ಎಸ್.ಸಿ.ಎ) ಮೂಲಕ ಕೋಟ್ಯಾಂತರ ರೂ. ವೆಚ್ಚದ ಅನುದಾನದಲ್ಲಿ ಅಂತರ್ರಾಷ್ಟ್ರೀಯ ಗುಣಮಟ್ಟದ ಕ್ರಿಕೆಟ್ ಸ್ಟೇಡಿಯಂ ಸ್ಥಾಪನೆಯ ಅವಕಾಶ ದೊರೆತಿದ್ದು ಹಲವು ವರ್ಷಗಳು ಸಂದರೂ ಉದ್ದೇಶಿತ ಯೋಜನೆ ಮಾತ್ರ ಇನ್ನೂ ಆರಂಭಗೊಂಡಿಲ್ಲ. ಹಲವು ಅಡೆ-ತಡೆಗಳಿಂದಾಗಿ ಕ್ರಿಕೆಟ್ ಸ್ಟೇಡಿಯಂ ನಿರ್ಮಾಣ ಕೆಲಸ ಪ್ರಾರಂಭಗತಿಯ ಹಂತದಲ್ಲೇ ನೆನೆಗುದಿಗೆ ಬಿದ್ದಿದ್ದು ಉತ್ತಮ ಅವಕಾಶವೊಂದರ ಸದುಪಯೋಗಕ್ಕಾಗಿ ಸಂಬಂಧಿಸಿದವರ ಇಚ್ಛಾಶಕ್ತಿಯ ಕೊರತೆ ಕಂಡು ಬರುವುದನ್ನು ಜಿಲ್ಲೆಯ ಕ್ರೀಡಾ ಪ್ರೇಮಿಗಳು ಇದೊಂದು ವಿಷಾದಕರ ವಿಚಾರ ಎಂಬುದಾಗಿ ಹೇಳುವಂತಾಗಿದೆ.
ಸರಕಾರದ ಅನುದಾನ ಈ ಯೋಜನೆಗೆ ಕಿಂಚಿತ್ತು ಇಲ್ಲವಾದರೂ ಬೇಕಿರುವದು ಜಾಗದ ವಿಚಾರವಷ್ಟೆ. ಜಾಗವನ್ನು ಸರಕಾರ ಒದಗಿಸಿದಲ್ಲಿ ರಾಜ್ಯ ಕ್ರಿಕೆಟ್ ಸಂಸ್ಥೆಯೇ ಈ ಕೋಟ್ಯಾಂತರ ರೂ. ವೆಚ್ಚದ ಅಂತರ್ರಾಷ್ರ್ಟೀಯ ಗುಣಮಟ್ಟದ ಕ್ರೀಡಾಂಗಣವನ್ನು ಒಳಗೊಂಡ ಸ್ಟೇಡಿಯಂನ್ನು ನಿರ್ಮಿಸಲು ಸಿದ್ಧವಾಗಿ ನಿಂತಿದೆ. ಆದರೆ ಸರಕಾರ ಜಿಲ್ಲಾಡಳಿತದ ಮೂಲಕ ಮಂಜೂರು ಮಾಡಿರುವ ಜಾಗಕ್ಕೆ ಸಂಬಂಧಿಸಿದಂತೆ ಇರುವ ಅಪಸ್ವರದಿಂದಾಗಿ ಪ್ರಾರಂಭಿಕ ಹಂತದ ಕೆಲಸ ಶುರುವಾದದ್ದು ಹೊರತುಪಡಿಸಿದರೆ ಯೋಜನೆ ಇನ್ನು ಕನಸಾಗಿಯೇ ಉಳಿದಿದೆ.
ಹೊದ್ದೂರುವಿನಲ್ಲಿ ಜಾಗ
2015ರ ಸಂದರ್ಭದಲ್ಲೆ ಕ್ಯಾಬಿನೆಟ್‍ನ ಒಪ್ಪಿಗೆಯಂತೆ ಜಿಲ್ಲಾಡಳಿತದಿಂದ ಹೊದ್ದೂರು ಪಾಲೆಮಾಡುವಿನ ಸರ್ವೆ ನಂ.167/1ಂ ರಲ್ಲಿ 12.20 ಎಕರೆ ಜಾಗವನ್ನು ಅಧಿಕೃತವಾಗಿ ಮಂಜೂರು ಮಾಡಲಾಗಿದೆ. ಆದರೆ ಪಾಲೆಮಾಡುವಿನಲ್ಲಿ ಇದು ಬಡ ವರ್ಗದವರ ಸ್ಮಶಾನಕ್ಕೆ ನಿಗದಿಯಾದ ಜಾಗ ಎಂಬ ವಿವಾದ ಏರ್ಪಟ್ಟಿತ್ತು. ಈ ವಿವಾದದಿಂದಾಗಿ ಇಲ್ಲಿ ಕಾನೂನು-ಸುವ್ಯವಸ್ಥೆಗೂ ತೊಡಕಾಗಿತ್ತಲ್ಲದೆ ಪರ-ವಿರೋಧದಂತಹ ಪ್ರತಿಭಟನೆಗಳು, ಹೋರಾಟಗಳು ನಡೆದಿದ್ದವು. ಪ್ರಕರಣ ನ್ಯಾಯಾಲಯದ ಮೆಟ್ಟಿಲೇರಿದ್ದರೂ ನ್ಯಾಯಾಲಯದಿಂದ ಕೆ.ಎಸ್.ಸಿ.ಎ ಪರ ತೀರ್ಮಾನ ಪ್ರಕಟವಾಗಿತ್ತು. ಈ ವಿವಾದದ ಹಿನ್ನೆಲೆಯಲ್ಲಿ ಜಾಗ ಮಂಜೂರಾತಿ ವಿಷಯದಲ್ಲಿ ಮತ್ತೊಮ್ಮೆ ತಿದ್ದುಪಡಿ ಮಾಡಿ ಸರಕಾರ ಆದೇಶ ಜಾರಿಗೊಳಿಸಿತ್ತು. ಕಂದಾಯ ಇಲಾಖೆಯ ಭೂ ಮಂಜೂರಾತಿ ಪೀಠಾಧಿಕಾರಿ ಸಿ.ವಿಮಲಮ್ಮ ಅವರು 9.10.2018 ರಲ್ಲಿ ತಿದ್ದುಪಡಿ ಮಾಡಿದ ಆದೇಶದಲ್ಲಿ ರಾಜ್ಯ ಕ್ರಿಕೆಟ್ ಸಂಸ್ಥೆಗೆ ಮಂಜೂರು ಮಾಡಿದ್ದ 12.70 ಎಕರೆ ಜಾಗದ ಪೈಕಿ 0.50 ಎಕರೆ ಜಮೀನನ್ನು ಹೊದ್ದೂರು ಪಾಲೆಮಾಡ ನಿವಾಸಿಗಳಿಗೆ ಸ್ಮಶಾನ ಉದ್ದೇಶಕ್ಕೆ ಕಾಯ್ದಿರಿಸಲು ಸರಕಾರಿ ಆದೇಶದನ್ವಯ ನಿಗದಿಪಡಿಸಲಾಗಿತ್ತು.
ಈ ಬದಲಾವಣೆಯಾಗಿ ಇದೀಗ ಮತ್ತೆ ಒಂದೂವರೆ ವರ್ಷಗಳು ಸಂದಿವೆ.
(ಮೊದಲ ಪುಟದಿಂದ) ಈ ಜಾಗವನ್ನು ಸೂಕ್ತವಾಗಿ ಸರ್ವೆ ನಡೆಸಿ ನಿಗದಿಮಾಡಿ ಇದಕ್ಕೆ ಸಂಬಂಧಿಸಿದಂತೆ ಇರುವ ವಿವಾದವನ್ನು ಬಗೆಹರಿಸುವ ನಿಟ್ಟಿನಲ್ಲಿ ಇನ್ನೂ ಕ್ರಮವಹಿಸಲಾಗಿಲ್ಲ.
ರೂ. 100 ಕೋಟಿಯ ಯೋಜನೆ
ಸುಮಾರು ರೂ 100 ಕೋಟಿಯ ಯೋಜನೆ ಇದಾಗಿದ್ದು ಈ ಸ್ಟೇಡಿಯಂ ಬೆಂಗಳೂರಿನ ಚಿನ್ನಸ್ವಾಮಿ ಮೈದಾನಕ್ಕಿಂತಲೂ ದೊಡ್ಡದಾಗಲಿದೆ. ಸ್ಟೇಡಿಯಂನಲ್ಲಿ ಈಜುಕೊಳ, ರೆಸ್ಟೋರೆಂಟ್, ಸಾವಿರ ಜನ ಸಾಮಥ್ರ್ಯದ ಕನವೆನ್‍ಶನಲ್ ಹಾಲ್, ಶಟಲ್, ಬ್ಯಾಡ್‍ಮಿಂಟನ್, ಬಿಲಿಯಡ್ಸ್, ಸ್ಕ್ವಾಷ್, ಬಾಸ್ಕೆಟ್‍ಬಾಲ್ ಕೋರ್ಟ್ ಸಹಿತವಾಗಿ ಕ್ರಿಕೆಟ್ ಪ್ರ್ಯಾಕ್ಟಿಸ್ ಪಿಚ್ ಇತ್ಯಾದಿಗಳು ಅಂತರ್ರಾಷ್ಟ್ರೀಯ ಗುಣಮಟ್ಟದಲ್ಲೇ ನಿರ್ಮಿಸುವದು ಈ ಯೋಜನೆಯಲ್ಲಿ ಒಳಗೊಂಡಿದೆ. ಜಾಗ ಮಂಜೂರಾತಿ ಆದೇಶದಲ್ಲಿ ಬದಲಾವಣೆಯಾದ ಬಳಿಕ ವಿವಾದ ಬಗೆಹರಿಯಿತು ಎಂಬಂತೆ ಕಾಮಗಾರಿಗೆ ಚಾಲನೆಯನ್ನು ನೀಡಲಾಗಿತ್ತು. ಆದರೂ ಮತ್ತೆ ವಿವಾದಗಳ ಅಡೆ-ತಡೆಯಿಂದಾಗಿ ಇದು ಅಲ್ಲಿಗೆ ನಿಂತು ಹೋಗಿದೆ.
ವದಂತಿಗಳು ಸೃಷ್ಟಿ
ಈ ನಡುವೆ ರಾಜ್ಯ ಕ್ರಿಕೆಟ್ ಸಂಸ್ಥೆ ಜಿಲ್ಲೆಗೆ ಮಂಜೂರು ಮಾಡಿದ್ದ ಕ್ರಿಕೆಟ್ ಸ್ಟೇಡಿಯಂ ಯೋಜನೆಯನ್ನು ಹಿಂಪಡೆದಿದೆ ಎಂಬ ವದಂತಿಗಳು ಕೇಳಿಬಂದಿವೆ. ಇಲ್ಲಿ ವರ್ಷಗಟ್ಟಲೆಯಿಂದ ಇದು ನೆನೆಗುದಿಗೆ ಬಿದ್ದಿರುವುದರಿಂದ ಜಿಲ್ಲೆಯ ಬದಲು ಬೇರೆ ಜಿಲ್ಲೆಗೆ ಇದನ್ನು ವರ್ಗಾಯಿಸಲಾಗಿದೆ ಎಂಬ ಊಹಾಪೋಹಗಳು ಕೇಳಿಬಂದಿವೆ. ಆದರೆ ಸಂಸ್ಥೆ ನಿಲುವು ಬದಲಾಯಿಸಿಲ್ಲ. ಜಿಲ್ಲೆಯಲ್ಲೇ ಇದು ನಿರ್ಮಾಣವಾಗಲಿದೆ ಎಂದು ಕೆ.ಎಸ್.ಸಿ.ಎ ಕೋ ಆರ್ಡಿನೇಟರ್ ಆಗಿರುವ ಚೇನಂಡ ಪೃಥ್ವಿ ದೇವಯ್ಯ ಅವರು ‘ಶಕ್ತಿ’ ಗೆ ತಿಳಿಸಿದ್ದಾರೆ. ಜಿಲ್ಲೆಯ ಶಾಶಕರುಗಳು, ಉಸ್ತುವಾರಿ ಸಚಿವರು, ಇನ್ನಿತರ ಹಲವಾರು ಮಂದಿ ಉದ್ದೇಶಿತ ಜಾಗದಲ್ಲಿ ಕ್ರಿಕೆಟ್ ಸ್ಟೇಡಿಯಂ ಪರವಾಗಿದ್ದು ಇದಕ್ಕೆ ಮತ್ತೆ ಚಾಲನೆ ನೀಡಲು ಜಿಲ್ಲಾಡಳಿತಕ್ಕೆ ಸೂಚನೆ ನೀಡಿರುವುದಾಗಿ ತಿಳಿದುಬಂದಿದೆ.
ಕೆ.ಎಸ್.ಸಿ.ಎ ಸಂಸ್ಥೆ ಕೊಡಗು ಸೇರಿದಂತೆ, ಹಾಸನ, ದಾವಣಗೆರೆ, ಕೋಲಾರ, ಹುಬ್ಬಳ್ಳಿ, ಬೆಳಗಾವಿ, ರಾಯಚೂರು ಮತ್ತಿತರ ಕಡೆಗಳಿಗೆ ಕ್ರಿಕೆಟ್ ಸ್ಟೇಡಿಯಂ ಮಂಜೂರು ಮಾಡಿದ್ದು ಇತರ ಎಲ್ಲಾ ಜಿಲ್ಲೆಗಳಲ್ಲಿ ಇದರ ಸದುಪಯೋಗವಾಗುತ್ತಿದೆ. ಆದರೆ ಕೊಡಗು ಜಿಲ್ಲೆಯಲ್ಲಿ ಮಾತ್ರ ಇದರ ಅಡೆ-ತಡೆ ಇನ್ನೂ ನಿವಾರಣೆಯಾಗದಿರುವದು ಜನಪ್ರಿಯ ಕ್ರೀಡೆಯಾಗಿರುವ ಕ್ರಿಕೆಟ್ ಅಭಿಮಾನಿಗಳಿಗೆ ಬೇಸರಮೂಡಿಸಿದೆ.
ಇದರ ಕಾರ್ಯಗತಕ್ಕೆ ಜಿಲ್ಲಾಡಳಿತ, ಜನಪ್ರತಿನಿಧಿಗಳು, ಸಂಬಂಧಿಸಿದ ಶಾಸಕರು, ರಾಜ್ಯ ಕ್ರಿಕೆಟ್ ಸಂಸ್ಥೆ ಯಾವ ಪ್ರಯತ್ನಕ್ಕೆ ಮುಂದಾಗಲಿದೆ ಎಂಬುದನ್ನು ಕಾದು ನೋಡಬೇಕಿದೆ.