ಮಡಿಕೇರಿ, ಫೆ. 14: ಕುಶಾಲನಗರ ಬಳಿಯ ಮಾದಾಪಟ್ಟಣದ ಫಿಶ್‍ಕರಿ ಹೊಟೇಲ್ ಹಿಂಭಾಗ 2019ರ ಜೂನ್ 5 ರಂದು ಕಾವೇರಿ ನದಿಯಲ್ಲಿ ಸ್ನಾನ ಮಾಡಲು ಹೋಗಿದ್ದ ಸಂದರ್ಭ ಎಂಎಸ್ ಗಗನ್ ಬಿನ್ ಸೆಲ್ವರಾಜ್, ಶಶಾಂಕ್ ಬಿನ್ ಉಮೇಶ್ ಪಿ.ಕೆ., ಮತ್ತು ಆಕಾಶ್ ಆರ್. ಬಿನ್ ಲೇಟ್ ರಮೇಶ್ ಎಚ್.ಬಿ. ಎಂಬ ಮೂವರು ವಿದ್ಯಾರ್ಥಿಗಳು ಆಕಸ್ಮಿಕವಾಗಿ ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದರು.
ಮೃತಪಟ್ಟ ಮೂವರು ವಿದ್ಯಾರ್ಥಿಗಳು ಮಡಿಕೇರಿ ತಾಲೂಕಿನ ನಿವಾಸಿಗಳಾಗಿದ್ದು, ಮೃತರ ಕುಟುಂಬದವರು, ಆರ್ಥಿಕವಾಗಿ ಹಿಂದುಳಿದವರಾಗಿದ್ದು, ಈ ಹಿನ್ನೆಲೆ ಮುಖ್ಯಮಂತ್ರಿ ಅವರ ಪರಿಹಾರ ನಿಧಿಯಿಂದ ಪರಿಹಾರ ಮಂಜೂರು ಮಾಡುವಂತೆ ವೀರಾಜಪೇಟೆ ವಿಧಾನಸಭಾ ಕ್ಷೇತ್ರದ ಶಾಸಕ ಕೆ.ಜಿ. ಬೋಪಯ್ಯ ಅವರು ಕೋರಿದ್ದರು.
ಶಾಸಕ ಕೆ.ಜಿ. ಬೋಪಯ್ಯ ಅವರ ಕೋರಿಕೆಯನ್ನು ಪರಿಗಣಿಸಿ, ಈ ಘಟನೆಗೆ ವಿಷಾದ ವ್ಯಕ್ತಪಡಿಸಿ, ಮುಖ್ಯಮಂತ್ರಿ ಅವರ ಪರಿಹಾರ ನಿಧಿಯಿಂದ ತಲಾ ರೂ. 2 ಲಕ್ಷದಂತೆ ಮೂವರು ಕುಟುಂಬದವರಿಗೆ ಒಟ್ಟು ಆರು ಲಕ್ಷ ರೂ.ಗಳನ್ನು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಪರಿಹಾರವಾಗಿ ಮಂಜೂರು ಮಾಡಿದ್ದಾರೆ ಎಂದು ಮುಖ್ಯಮಂತ್ರಿಯವರ ಜಂಟಿ ಕಾರ್ಯದರ್ಶಿ ಪಿ.ಎ. ಗೋಪಾಲ್ ಅವರು ತಿಳಿಸಿದ್ದಾರೆ.