ಕುಶಾಲನಗರ, ಫೆ. 14: ಬೇಸಿಗೆ ಅವಧಿಯಲ್ಲಿ ಕುಶಾಲನಗರ ಪಟ್ಟಣಕ್ಕೆ ಕುಡಿಯುವ ನೀರಿನ ಸಮಸ್ಯೆ ತಲೆದೋರದಂತೆ ತಕ್ಷಣ ಕ್ರಮಕೈಗೊಳ್ಳಲು ಶಾಸಕ ಎಂ.ಪಿ. ಅಪ್ಪಚ್ಚು ರಂಜನ್ ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.

ಕಾವೇರಿ ನದಿ ನೀರನ್ನು ಬಳಸಿ ಪಟ್ಟಣದ ಎಲ್ಲಾ ಬಡಾವಣೆಗಳಿಗೆ ಮತ್ತು ಸಮೀಪದ ಗ್ರಾಮಗಳ ನಾಗರಿಕರಿಗೆ ಸರಬರಾಜು ಮಾಡುವ ನಿಟ್ಟಿನಲ್ಲಿ ಎಲ್ಲಾ ರೀತಿಯ ಕ್ರಮಕೈಗೊಳ್ಳಬೇಕು. ಬೈಚನಹಳ್ಳಿ ಪಂಪ್‍ಹೌಸ್ ಬಳಿ ನದಿಗೆ ಅಡ್ಡಲಾಗಿ ಚೆಕ್‍ಬಂಡ್ ನಿರ್ಮಿಸಲು ಅಂದಾಜು ಪಟ್ಟಿ ತಯಾರಿಸಿ ಹೆಚ್ಚಿನ ನೀರಿನ ಸಂಗ್ರಹದ ಹಿನ್ನಲೆಯಲ್ಲಿ ಅತ್ಯಾಧುನಿಕ ತಂತ್ರಜ್ಞಾನದ ಇಂಟೆಕ್ ವೆಲ್ ನಿರ್ಮಾಣಕ್ಕೆ ಕ್ರಮಕೈಗೊಳ್ಳುವಂತೆ ತಿಳಿಸಿದರು. ಪ್ರತಿ ವರ್ಷ ಬೇಸಿಗೆ ಅವಧಿಯಲ್ಲಿ ನದಿಗೆ ಅಡ್ಡಲಾಗಿ ಮರಳು ಮೂಟೆಗಳನ್ನು ಇಡುವ ಮೂಲಕ ಕುಡಿಯುವ ನೀರನ್ನು ಸಂಗ್ರಹಿಸುವ ಬದಲು ಶಾಶ್ವತ ಯೋಜನೆ ರೂಪಿಸುವಂತೆ ಅವರು ನಿರ್ದೇಶಿಸಿದರು.

ಈ ಸಂಬಂಧ ನೀರು ಸರಬರಾಜು ಮಂಡಳಿ ಅಧಿಕಾರಿಗಳೊಂದಿಗೆ ಚರ್ಚಿಸಿ ತಿಂಗಳೊಳಗೆ ಕಾಮಗಾರಿ ಪ್ರಾರಂಭಿಸಬೇಕು. ಪೂರ್ವ ಸಿದ್ಧತೆ ನಡೆದ ಬೆನ್ನಲ್ಲೇ ತಾನು ಸ್ಥಳಕ್ಕೆ ಭೇಟಿ ನೀಡುವುದಾಗಿ ಹೇಳಿದರು. ಕುಶಾಲನಗರ ಪಟ್ಟಣ ಸುತ್ತಮುತ್ತಲ ವ್ಯಾಪ್ತಿಯಲ್ಲಿ ಸದ್ಯದಲ್ಲಿಯೇ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಘಟಕ ಸ್ಥಾಪನೆಗೆ ಕ್ರಮಕೈಗೊಳ್ಳಲಾಗುತ್ತದೆ. ಇದರೊಂದಿಗೆ ಕೊಡಗು ಜಿಲ್ಲೆಯಲ್ಲಿ ಸಂಸ್ಥೆಯ ವಿಭಾಗೀಯ ಕಚೇರಿ ತೆರೆಯಲು ಸರಕಾರ ಚಿಂತಿಸಿದೆ ಎಂದು ಅವರು ಮಾಹಿತಿ ನೀಡಿದರು.