ವೀರಾಜಪೇಟೆ, ಫೆ. 14: ಕೊರೊನಾ ವೈರಸ್ ಬಗ್ಗೆ ಭಯಪಡುವುದು ಬೇಡ. ಆದರೆ ಪ್ರತಿಯೊಬ್ಬರು ಎಚ್ಚರದಿಂದಿರುವುದು ಉತ್ತಮ ಎಂದು ಕೊಡಗು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೊಸೈಟಿಯ ಅಧಿಕಾರಿ ವಿನೀತಾ ಹೇಳಿದರು.
ವೀರಾಜಪೇಟೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಆಯೋಜಿಸಿದ್ದ ಪೋಷಕರ ಮತ್ತು ಶಿಕ್ಷಕರ ಸಭೆಯಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ವಿನೀತಾ ಅವರು, ರಸ್ತೆ ಬದಿಯಲ್ಲಿ ಮಾರಾಟ ಮಾಡುವ ಫಾಸ್ಟ್‍ಫುಡ್‍ಗಳ ಬಗ್ಗೆ ಎಚ್ಚರ ವಹಿಸಬೇಕು ಹಾಗೂ ರೋಗ ತಡೆಗಟ್ಟಲು ಆಗಾಗ ಸಾಬೂನಿನಿಂದ ಕೈ ತೊಳೆದುಕೊಂಡು ಸ್ವಚ್ಛತೆ ಕಾಪಾಡಿಕೊಳ್ಳುವುದು ಉತ್ತಮ ಎಂದರು.
ಕಾಲೇಜಿನ ಪ್ರಾಂಶುಪಾಲ ಟಿ.ಕೆ. ಬೋಪಯ್ಯ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ಪೋಷಕರು ತಮ್ಮ ಮಕ್ಕಳ ಶಿಕ್ಷಣದ ಬಗ್ಗೆ ಹೆಚ್ಚು ಗಮನ ಹರಿಸಬೇಕು. ವಿದ್ಯಾರ್ಥಿಗಳು ಛಲದಿಂದ ಗುರಿ ಮುಟ್ಟುವಂತಾಗಬೇಕು ಎಂದರು. ಉಪನ್ಯಾಸಕ ಎಂ.ಎನ್. ವನೀತ್ ಕುಮಾರ್ ಪ್ರಾಸ್ತಾವಿಕವಾಗಿ ಮಾತನಾಡಿ, ವಿದ್ಯಾರ್ಥಿಗಳು ಮನೆಯಿಂದ ಬಂದವರು ಕಾಲೇಜಿಗೆ ಹೋಗುತ್ತಾರೊ ಇಲ್ಲವೇ ಎಂಬದನ್ನು ಪೋಷಕರು ತಿಳಿದುಕೊಂಡು ವಿದ್ಯಾರ್ಥಿಗಳ ಭವಿಷ್ಯದ ಬಗ್ಗೆ ಗಮನಹರಿಸುವಂತೆ ಹೇಳಿದರು. ಉಪನ್ಯಾಸಕ ಗುರುಪ್ರಸಾದ್ ಮಾತನಾಡಿ, ವಿದ್ಯಾರ್ಥಿಗಳು ಕಾಲೇಜಿನಲ್ಲಿ ಶೇ. 75 ರಷ್ಟು ಹಾಜರಾತಿ ಇದ್ದರೆ ಮಾತ್ರ ಪ್ರವೇಶ ಪತ್ರ ಕೊಡಲು ಸಾಧ್ಯವಾಗುತ್ತದೆ ಎಂದರು.
ವೇದಿಕೆಯಲ್ಲಿ ಪ್ರಾಧ್ಯಾಪಕ ವೇಣು ಗೋಪಾಲ್, ಮಂಜುನಾಥ್, ರುದ್ರ, ಡಾ. ಡಿ.ಕೆ. ಉಷಾ ನಾಗರಾಜ್, ಸತೀಶ್, ಪೊನ್ನಪ್ಪ ಮತ್ತು ದಿವ್ಯ ಉಪಸ್ಥಿತರಿದ್ದರು. ಸಭೆಯಲ್ಲಿ ವಿದ್ಯಾರ್ಥಿಗಳ ಪೋಷಕರು ಭಾಗವಹಿಸಿದ್ದರು.