ಕೂಡಿಗೆ, ಫೆ. 14: ಪ್ರೌಢಶಾಲಾ ಮತ್ತು ಪ್ರಾಥಮಿಕ ಶಾಲಾ ದೈಹಿಕ ಶಿಕ್ಷಣ ಶಿಕ್ಷಕರ ಕಾರ್ಯಾಗಾರ ಶಿರಂಗಾಲ ಶಾಲಾ ಆವರಣದಲ್ಲಿ ನಡೆಯಿತು. ಕಾರ್ಯಕ್ರಮದ ಉದ್ಘಾಟನೆಯನ್ನು ಶಿರಂಗಾಲ ಕಾಲೇಜಿನ ಹಿರಿಯ ಉಪನ್ಯಾಸಕ ನಾಗರಾಜ ನೆರವೇರಿಸಿ ಮಾತನಾಡಿ, ದೈಹಿಕ ಶಿಕ್ಷಣದ ಬಗ್ಗೆ ಸಭೆ ಮತ್ತು ವಿಚಾರಗೋಷ್ಠಿಗಳು ನಡೆಯುವುದರಿಂದ ದೈಹಿಕ ಶಿಕ್ಷಕರ ಕ್ರೀಡಾ ಚಟುವಟಿಗೆಗಳಿಗೆ ಪೂರಕವಾಗುತ್ತದೆ ಎಂದರು.
ಮುಖ್ಯ ಅತಿಥಿಯಾಗಿ ಸೋಮವಾರಪೇಟೆ ತಾಲೂಕು ಕ್ಷೇತ್ರ ಶಿಕ್ಷಣಾಧಿಕಾರಿ ಹೆಚ್.ಕೆ. ಪಾಂಡು ಮಾತನಾಡಿ, ದೈಹಿಕ ಶಿಕ್ಷಣ ಶಿಕ್ಷಕರ ತರಬೇತಿ ಮತ್ತು ಮಾಹಿತಿಯಿಂದ ಮುಂದಿನ ವಾರ್ಷಿಕ ಕ್ರೀಡಾ ಸಂಯೋಜನೆಗೆ ನಿಯಮಗಳ ಸಿದ್ಧತೆ ಹಾಗೂ ಪ್ರತಿಭಾವಂತ ಕ್ರೀಡಾಪಟುಗಳಿಗೆ ತರಬೇತಿ, ಸೌಲಭ್ಯಗಳನ್ನು ಒದಗಿಸುವ ಕುರಿತು ವಿಚಾರ ವಿನಿಮಯ ಮಾಡಿಕೊಳ್ಳಲು ಅವಕಾಶವಾಗುತ್ತದೆ ಎಂದರು.
ಈ ಸಂದರ್ಭ ಸಂಪನ್ಮೂಲ ವ್ಯಕ್ತಿ ನಾಗೇಶ್ ದೈಹಿಕ ಶಿಕ್ಷಣ ಶಿಕ್ಷಕರ ಸವಾಲು ಮತ್ತು ಸಮಸ್ಯೆ ಎದುರಿಸುವ ವಿಚಾರವಾಗಿ ಸಮಗ್ರವಾಗಿ ಚರ್ಚೆ ನಡೆಸಿ ವಿಷಯ ಮಂಡಿಸಿದರು.
ತಾಲೂಕು ಪ್ರೌಢಶಾಲಾ ದೈಹಿಕ ಸಂಘದ ಅಧ್ಯಕ್ಷ ಡಾ. ಸದಾಶಿವ ಪಾಲೇದ್, ಶಿರಂಗಾಲ ಪ್ರೌಢಶಾಲಾ ಮುಖ್ಯ ಶಿಕ್ಷಕ ಸೋಮಯ್ಯ, ಶಾಲಾಭಿವೃದ್ಧಿ ಸಮಿತಿಯ ಅಧ್ಯಕ್ಷ ಕೃಷ್ಣ, ತಾಲೂಕು ಮಟ್ಟದ ಸಿ.ಆರ್.ಪಿ. ಡಿ.ಆರ್.ಪಿ., ಇ.ಸಿ.ಓ. ಶಿಕ್ಷಕರು ಭಾಗವಹಿಸಿದ್ದರು.