ಗೋಣಿಕೊಪ್ಪಲು,ಫೆ.14: ಬೆಂಗಳೂರಿನ ಕೊಡವ ರೈಡರ್ಸ್ ಕ್ಲಬ್,ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ,ಕೊಡವ ಸಮಾಜ ಬೆಂಗಳೂರು, ಕೊಡವ ಸಮಾಜ ಯೂತ್ ಕೌನ್ಸಿಲ್, ಲಯನ್ಸ್ ಕ್ಲಬ್ ಕೊಡಗು,ಅಖಿಲ ಕೊಡವ ಸಮಾಜ ವೀರಾಜಪೇಟೆ ಇವರ ಸಂಯುಕ್ತ ಆಶ್ರಯದಲ್ಲಿ ತಾ.15ರಂದು (ಇಂದು) ಬೃಹತ್ ಬೈಕ್ ಜಾಥಾ ನಡೆಯಲಿದೆ.

ಕೊಡವ ರೈಡರ್ಸ್ ಕ್ಲಬ್‍ನ ನೂರಾರು ಯುವಕರು ಪಾಲ್ಗೊಳ್ಳುವ ಈ ರ್ಯಾಲಿಗೆ ಮುಂಜಾನೆ 5 ಗಂಟೆಗೆ ಬೆಂಗಳೂರಿನ ಕೊಡವ ಸಮಾಜದ ಆವರಣದಲ್ಲಿ ನಿವೃತ್ತ ಎಸಿಪಿ ಬಿದ್ದಂಡ ಅಶೋಕ್ ಕುಮಾರ್ ಚಾಲನೆ ನೀಡಲಿದ್ದಾರೆ. ರೈತರು ಬೆಳೆದ ಬೆಳೆಗಳಿಗೆ ಬೆಂಬಲ ಬೆಲೆ ನಿಗದಿ ಪಡಿಸಬೇಕೆಂಬ ಉದ್ದೇಶದಿಂದ ಕೇಂದ್ರ ಹಾಗೂ ರಾಜ್ಯ ಸರ್ಕಾರದ ಮೇಲೆ ಒತ್ತಡ ತರಲು ಈ ಬೈಕ್ ಜಾಥಾ ಹಮ್ಮಿಕೊಳ್ಳಲಾಗಿದೆ.

ರ್ಯಾಲಿಯು ಮಂಡ್ಯ, ಚನ್ನಪಟ್ಟಣ, ಶ್ರೀರಂಗಪಟ್ಟಣ, ಇಲವಾಲ ಮೂಲಕ ಕೊಡಗಿನ ಗಡಿ ಆನೆಚೌಕೂರಿನ ಮೂಲಕ ತಿತಿಮತಿ ಮಾರ್ಗವಾಗಿ ಸಂಚರಿಸಿ ಗೋಣಿಕೊಪ್ಪಲುವಿನ ಕಾವೇರಿ ಕಾಲೇಜು ಬಳಿ ಸಮಾಗಮಗೊಳ್ಳಲಿದೆ.

ಕಾಲೇಜು ಆವರಣದಲ್ಲಿ ನಡೆಯುವ ಸಭೆಯಲ್ಲಿ ಸಂಸದ ಪ್ರತಾಪ್‍ಸಿಂಹ, ಶಾಸಕ ಕೆ.ಜಿ.ಬೋಪಯ್ಯ, ರೈತ ಮುಖಂಡರುಗಳಾದ ನಂಜುಂಡೆಗೌಡ, ಸುನೀತ ಪುಟ್ಟಣಯ್ಯ ಸೇರಿದಂತೆ ಇನ್ನಿತರ ಗಣ್ಯರು ಭಾಗವಹಿಸಲಿದ್ದಾರೆ.