ಕೊಡ್ಲಿಪೇಟೆ, ಫೆ. 14: ಕಳೆದ ಕೆಲವು ದಿನಗಳಿಂದ ಕೊಡಗು ಜಿಲ್ಲೆಯ ಗಡಿಭಾಗವಾದ ಕೊಡ್ಲಿಪೇಟೆ ಹೋಬಳಿ ಸರಹದ್ದಿನ ಗ್ರಾಮಗಳಲ್ಲಿ ಕಳವು ಪ್ರಕರಣಗಳು ಹೆಚ್ಚಿವೆ ಎಂದು ನಾಗರಿಕರು ದೂರಿಕೊಂಡಿದ್ದು ಪೊಲೀಸರ ಮೊರೆ ಹೋಗಿದ್ದಾರೆ.

ಕೊಡ್ಲಿಪೇಟೆ ಸಮೀಪದ ಚಿಕ್ಕಾಕುಂದ ಮತ್ತು ಕೆರೆಕೇರಿ ವ್ಯಾಪ್ತಿಯಲ್ಲಿ ಕಳೆದೆರಡು ದಿನಗಳಲ್ಲಿ ಕೆ.ವಿ.ವಸಂತ ಎಂಬವರು ತಮ್ಮ ಗದ್ದೆಯಲ್ಲಿ ಬೆಳೆಗೆ ನೀರು ಹಾಯಿಸಲು ಅಳವಡಿಸಿದ್ದ 15 ಸಾವಿರ ಮೌಲ್ಯದ ಪಂಪ್ ಸೆಟ್‍ನ ಜೆಟ್ ಕಳವು ಮಾಡಲಾಗಿದೆ.

ಈ ಬಗ್ಗೆ ಕೊಡ್ಲಿಪೇಟೆ ಪೊಲೀಸ್ ಠಾಣೆಗೆ ಲಿಖಿತ ದೂರು ನೀಡಲಾಗಿದೆ. ಇನ್ನೊಂದೆಡೆ ಚಿಕ್ಕಾಕುಂದದ ಸಿ.ಕೆ.ಶಂಭುಲಿಂಗಪ್ಪ ಎಂಬವರ ಮನೆಯ ಕಣದಿಂದ ಮಧ್ಯರಾತ್ರಿ ಕರಿಮೆಣಸು ಕಳವು ಮಾಡಲು ಯತ್ನಿಸಲಾಗಿದೆ. ಶಬ್ದ ಕೇಳಿ ಮನೆ ಮಾಲೀಕರು ಎಚ್ಚರಗೊಂಡ ಹಿನ್ನೆಲೆಯಲ್ಲಿ ಕಳ್ಳರು ಕತ್ತಲಲ್ಲಿ ಪರಾರಿಯಾಗಿದ್ದಾರೆ. ಈ ಘಟನೆಗಳಿಂದ ಸ್ಥಳೀಯ ನಾಗರಿಕರಲ್ಲಿ ಭಯದ ವಾತಾವರಣ ಉಂಟಾಗಿದೆ. ಪೊಲೀಸರು ಅಗತ್ಯ ಕ್ರಮ ಕೈಗೊಳ್ಳುವಂತೆ ಗ್ರಾಮಸ್ಥರು ಒತ್ತಾಯಿಸಿದ್ದಾರೆ.