ಸುಂಟಿಕೊಪ್ಪ, ಫೆ. 13: ಸತತ ಪರಿಶ್ರಮದಿಂದ ವಿದ್ಯಾರ್ಥಿಗಳು ಜೀವನದ ಭವಿಷ್ಯವನ್ನು ರೂಪಿಸಿಕೊಳ್ಳಬಹುದು ಎಂದು ನಿವೃತ್ತ ಮುಖ್ಯೋಪಾಧ್ಯಾಯಿನಿ ಕೆ.ಎ. ಸಾವಿತ್ರಿ ಹೇಳಿದರು. 7ನೇ ಹೊಸಕೋಟೆಯ ಸರಕಾರಿ ಮಾದರಿ ಪ್ರಾಥಮಿಕ ಶಾಲೆಯಲ್ಲಿ ಆಯೋಜಿಸಲಾಗಿದ್ದ ಪೋಷಕರ ದಿನಾಚರಣೆಯಲ್ಲಿ ಮುಖ್ಯ ಅತಿಥಿಗಳಾಗಿ ಮಾತನಾಡಿದ ಅವರು, ಪೋಷಕರು ಮಕ್ಕಳ ವ್ಯಕ್ತಿತ್ವ ರೂಪಿಸಲು ಮಾರ್ಗದರ್ಶಕರಾಗಬೇಕೆಂದು ಕರೆ ನೀಡಿದರು.
ಕಾಫಿ ಬೆಳೆಗಾರ ಸುದೀಪ್ ಮಾತನಾಡಿ, ವಿದ್ಯಾರ್ಥಿಗಳು ಉನ್ನತ ವ್ಯಾಸಂಗ ಮಾಡಿ ಪೋಷಕರಿಗೆ, ಶಾಲೆಗೆ ಕೀರ್ತಿ ತರುವಂತಾಗಲಿ ಎಂದು ಹೇಳಿದರು. ಉದ್ಯಮಿ ಕಾವೇರಪ್ಪ ಮಾತನಾಡಿ, ವಿದ್ಯೆ ಇಲ್ಲದೆ ಜೀವನದಲ್ಲಿ ಏನೂ ಸಾಧನೆ ಮಾಡಲಾಗದು ಎಂದರು. ಮುಖ್ಯ ಅತಿಥಿಯಾದ ಸುಂಟಿಕೊಪ್ಪ ಕೃಷಿ ಪತ್ತಿನ ಸಹಕಾರ ಸಂಘದ ನಿರ್ದೇಶಕ ದಾಸಂಡ ರಮೇಶ್ ಮಾತನಾಡಿದರು.
7ನೇ ಹೊಸಕೋಟೆ ಗ್ರಾ.ಪಂ. ಅಧ್ಯಕ್ಷೆ ಸುಮಲತಾ ಕಾರ್ಯಕ್ರಮ ಉದ್ಘಾಟಿಸಿದರು. ಸಮಾರಂಭದ ಅಧ್ಯಕ್ಷತೆಯನ್ನು ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷೆ ಕಲಾ ವಹಿಸಿದ್ದರು. ಸಮಾರಂಭದ ವೇದಿಕೆಯಲ್ಲಿ ಗ್ರಾಮ ಪಂಚಾಯಿತಿ ಸದಸ್ಯ ಅಬ್ದುಲ್ಲಾ, ಪುಷ್ಪಾ, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಒಕ್ಕೂಟದ ಮಾಜಿ ಅಧ್ಯಕ್ಷೆ ಪುಷ್ಪಾವತಿ, ಕೆ. ಸೋಮಯ್ಯ, ಮಾಜಿ ಸೈನಿಕರ ಸಂಘದ ಅಧ್ಯಕ್ಷ ಶ್ರೀನಿವಾಸ್, ಕೂಡಿಗೆಯ ಡಯಾಟ್ ಉಪನ್ಯಾಸಕ ಕುಮಾರ್, ಕ್ಲಸ್ಟರ್ ಅಧಿಕಾರಿ ಪುರುಷೋತ್ತಮ್, ಶಾಲಾ ಮುಖ್ಯೋಪಾಧ್ಯಾಯಿನಿ ಲೀಲಾವತಿ, ಮತ್ತಿತರರು ಇದ್ದರು.
ಸಮಾರಂಭದಲ್ಲಿ ಶಾಲೆಯ ಅಭಿವೃದ್ಧಿಗೆ ದೇಣಿಗೆ ನೀಡಿದ ದಾನಿಗಳಾದ ಸುದೀಪ್, ಉದ್ಯಮಿ ಕಾವೇರಪ್ಪ, ನಿವೃತ್ತ ಮುಖ್ಯೋಪಾಧ್ಯಾಯಿನಿ ಕೆ.ಎ. ಸಾವಿತ್ರಿ, ಗ್ರಾ.ಪಂ. ಅಧ್ಯಕ್ಷೆ ಸುಮಲತಾ, ಸುಂಟಿಕೊಪ್ಪ ಕೃಷಿ ಪತ್ತಿನ ಸಹಕಾರ ಸಂಘದ ನಿರ್ದೇಶಕ ದಾಸಂಡ ರಮೇಶ್, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಒಕ್ಕೂಟದ ಮಾಜಿ ಅಧ್ಯಕ್ಷೆ ಪುಷ್ಪಾವತಿ, ಕೆ. ಸೋಮಯ್ಯ, ಮಾಜಿ ಸೈನಿಕರ ಸಂಘದ ಅಧ್ಯಕ್ಷ ಶ್ರೀನಿವಾಸ್, ರವಿಚಂದ್ರ ಇವರುಗಳನ್ನು ಸನ್ಮಾನಿಸಿ ಗೌರವಿಸಲಾಯಿತು.