ಸಿದ್ದಾಪುರ, ಫೆ.13: ಪ್ರವಾಹ ಸಂತ್ರಸ್ತರಿಗೆ ಸೂರು ಕಲ್ಪಿಸುವಂತೆ ಆಗ್ರಹಿಸಿ ಸಿದ್ದಾಪುರ ಗ್ರಾ.ಪಂ. ಮುಂದೆ ನಡೆಯುತ್ತಿರುವ ಅಹೋರಾತ್ರಿ ಪ್ರತಿಭಟನೆ 4 ದಿನಗಳು ಪೂರೈಸಿ, 5 ನೆ ದಿನಕ್ಕೆ ಪ್ರವೇಶಿಸಿದೆ.

ಇಂದು ವೀರಾಜಪೇಟೆ ಕ್ಷೇತ್ರದ ಶಾಸಕ ಕೆ.ಜಿ. ಬೋಪಯ್ಯ ಪ್ರತಿಭಟನಾ ಸ್ಥಳಕ್ಕೆ ಭೇಟಿ ನೀಡಿ, ಅಧಿಕಾರಿಗಳಿಂದ ಸರಕಾರ ಜಾಗದ ಬಗ್ಗೆ ಮಾಹಿತಿ ಪಡೆದುಕೊಂಡರು. ಕೆಲವು ಭಾಗಗಳಲ್ಲಿ ಸರಕಾರಿ ಭೂಮಿ ಒತ್ತುವರಿಯಾಗಿದ್ದು, ಅದಕ್ಕೆ ಸಂಬಂಧಿಸಿದ ವ್ಯಾಜ್ಯ ನ್ಯಾಯಾಲಯದಲ್ಲಿ ನಡೆಯುತ್ತಿದೆ. ಸರಕಾರಿ ಭೂಮಿ ಅಲಭ್ಯವಾಗಿರುವುದ ರಿಂದ ಖಾಸಗಿ ಜಾಗವನ್ನು ಖರೀದಿಸುವ ಬಗ್ಗೆ ಅಧಿಕಾರಿಗಳಿಗೆ ಸೂಚಿಸಿದರು. ಈ ಸಂದರ್ಭ ಅವರೆಗುಂದ ಅಸ್ತಾನ ಹಾಡಿ ಹಾಗೂ ಕರಡಿಗೋಡಿನಲ್ಲಿ ಖಾಸಗಿ ಜಾಗ ಮಾರಾಟಕ್ಕೆ ಇರುವುದಾಗಿ ಕೆಲವರು ತಿಳಿಸಿದ್ದಾರೆ. ಈ ಎರಡು ಜಾಗದ ಬಗ್ಗೆ ಪರಿಶೀಲಿಸಿ ಆದಷ್ಟು ಬೇಗ ಕಾನೂನು ರೀತಿಯಲ್ಲಿ ಕ್ರಮ ಕೈಗೊಳ್ಳುವಂತೆ ಉಪವಿಭಾಗಾಧಿಕಾರಿಗೆ ಸೂಚಿಸಿದರು. ನೆಲ್ಯಹುದಿಕೇರಿ ಭಾಗದ ಸಂತ್ರಸ್ತರಿಗಾಗಿ ಗುರುತಿಸಿರುವ ಅರೆಕಾಡು ಬಳಿಯ ಜಾಗದಲ್ಲಿ ಸಿದ್ದಾಪುರದ 60 ಮಂದಿಗೆ ಅವಕಾಶ ಕಲ್ಪಿಸುವ ಬಗ್ಗೆಯೂ ಕ್ರಮ ವಹಿಸುವಂತೆ ಎಸಿ ಅವರಿಗೆ ತಿಳಿಸಿದರು. ಕೂಡಲೇ ಸಮಸ್ಯೆ ಬಗೆ ಹರಿಯುವ ಸಾಧ್ಯತೆ ಇಲ್ಲದಿರುವುದ ರಿಂದ ಎಲ್ಲದಕ್ಕೂ ಸಮಯ ಬೇಕಾಗಿದೆ. ಹಾಗಾಗಿ ಪ್ರತಿಭಟನೆಯನ್ನು ಕೈ ಬಿಡಬೇಕೆಂದು ಮನವಿ ಮಾಡಿದರು.

ಪ್ರವಾಹ ಸಂತ್ರಸ್ತರ ಪೈಕಿ ನದಿ ತೀರದಲ್ಲಿ ಅನಧಿಕೃತವಾಗಿ ಮನೆ ನಿರ್ಮಿಸಿ ವಾಸವಾಗಿದ್ದ ಕುಟುಂಬ ಗಳಿಗೂ ಬಾಡಿಗೆ ಹಣವನ್ನು ನೀಡಲಾಗಿದೆ ಎಂದು ಎಸಿ ಮಾಹಿತಿ ನೀಡಿದರು. ನದಿ ತೀರದಲ್ಲಿ ಅನಧಿಕೃತ ವಾಗಿ ಮನೆ ನಿರ್ಮಿಸಿ, ಪ್ರವಾಹದಲ್ಲಿ ಮನೆ ಕಳೆದುಕೊಂಡ ಕುಟುಂಬಗಳಿಗೆ ಬಾಡಿಗೆ ಹಣ ನೀಡಲು ಸಾಧ್ಯವಿಲ್ಲ ಎಂದು ಈ ಹಿಂದೆ ಜಿಲ್ಲಾಡಳಿತ ಹೇಳಿತ್ತು. ಆದರೆ ಅನಧಿಕೃತ ಸೇರಿದಂತೆ ಮನೆ ಕಳೆದುಕೊಂಡ ಪ್ರತಿಯೊಬ್ಬರಿಗೂ ಬಾಡಿಗೆ ಹಣವನ್ನು ನೀಡಬೇಕೆಂದು ಹೋರಾಟ ಸಮಿತಿಯ ಬೇಡಿಕೆಯಾಗಿತ್ತು. ಅನಧಿಕೃತವಾಗಿ ಮನೆ ಕಟ್ಟಿದ್ದ 228 ಕುಟುಂಬಗಳ ಖಾತೆಗಳಿಗೆ ತಿಂಗಳಿಗೆ 5 ಸಾವಿರದಂತೆ ಐದು ತಿಂಗಳ ರೂ 25 ಸಾವಿರ ಪಾವತಿ ಮಾಡಿರುವ ಬಗ್ಗೆ ಪ್ರತಿಭಟನಾ ಸಭೆಯಲ್ಲಿ ಮಾಹಿತಿ ನೀಡಿದರು.

ಈ ಸಂದರ್ಭ ಹೋರಾಟ ಸಮಿತಿಯ ಯಮುನಾ, ರೆಜಿತ್ ಕುಮಾರ್ ಗುಹ್ಯ, ಬೈಜು ಹಾಗೂ ವೀರಾಜಪೇಟೆ ತಹಶೀಲ್ದಾರ್ ಮಹೇಶ್, ಸಿ.ಐ ಅನೂಪ್ ಮಾದಪ್ಪ, ಕಂದಾಯ ಇಲಾಖೆಯ ಅಧಿಕಾರಿಗಳು ಮತ್ತು ಇತರರು ಇದ್ದರು.

ಬೆಂಬಲ: ಪ್ರವಾಹ ಸಂತ್ರಸ್ತರಿಗೆ ಗ್ರಾ.ಪಂ. ಮುಂದೆ ನಡೆಯುತ್ತಿರುವ ಆಹೋರಾತ್ರಿ ಪ್ರತಿಭಟನೆಗೆ ಸ್ಥಳೀಯ ಚೇಂಬರ್ ಆಫ್ ಕಾಮರ್ಸ್ ಬೆಂಬಲ ಸೂಚಿಸಿದೆ. ತಾ. 14 ರಂದು (ಇಂದು) ಬೆಳಿಗ್ಗೆ 10 ಗಂಟೆಯಿಂದ 12 ಗಂಟೆವರೆಗೆ ಅಂಗಡಿ ಮುಂಗಟ್ಟುಗಳು ಬಂದ್ ಮಾಡುವ ಮೂಲಕ ಪ್ರತಿಭಟನೆಗೆ ಬೆಂಬಲಿಸುವುದಾಗಿ ಅಧ್ಯಕ್ಷ ಕೆ.ಕೆ ಶ್ರೀನಿವಾಸ್ ತಿಳಿಸಿದ್ದಾರೆ.