ಮಡಿಕೇರಿ, ಫೆ. 13: ಮೇಕೇರಿಯ ಶ್ರೀ ಗೌರಿಶಂಕರ ದೇವಾಲಯದಲ್ಲಿ ಧ್ವಜಾರೋಹಣ ನೆರವೇರಿಸುವ ಮೂಲಕ ದಶದಿನಗಳ ಕಾಲ ನಡೆಯುವ ಮಹಾಶಿವರಾತ್ರಿ ಉತ್ಸವಕ್ಕೆ ವಿದ್ಯುಕ್ತ ಚಾಲನೆ ದೊರೆಯಿತು.
ಧ್ವಜಾರೋಹಣ ಸಂದÀರ್ಭ ದೇವಾಲಯ ಆಡಳಿತ ಮಂಡಳಿ ಹಾಗೂ ಉತ್ಸವದ ಉಸ್ತುವಾರಿ ಸಮಿತಿ ಪ್ರಮುಖರು ಹಾಜರಿದ್ದರು.
ಇಂದಿನಿಂದ ಹತ್ತು ದಿನಗಳ ಕಾಲ ನಡೆಯುವ ಮಹಾಶಿವರಾತ್ರಿ ಉತ್ಸವದಲ್ಲಿ ಗ್ರಾಮದ ಭಜನಾಮಂಡಳಿಗಳ ಸದಸ್ಯರಿಂದ ದಿನಂಪ್ರತಿ ಸಂಜೆ 6.30 ರಿಂದ 8.30ರವರೆಗೆ ಸಂಗೀತಾರ್ಚನೆ ಮತ್ತು ಸತ್ಸಂಗ ಕಾರ್ಯಕ್ರಮಗಳು ಜರುಗಲಿವೆ.
ಮಹಾಶಿವರಾತ್ರಿಯ ದಿನವಾದ ತಾ. 21 ರಂದು ಬೆಳಿಗ್ಗೆ 7 ರಿಂದ ಗಣಪತಿಹೋಮ, 8 ಗಂಟೆಯಿಂದ ಮೃತ್ಯುಂಜಯ ಹೋಮ-ಸಂಕಲ್ಪ ಪೂಜೆ, ಬೆಳಿಗ್ಗೆ 10.30 ರಿಂದ ಮೇಕೇರಿ ಗ್ರಾಮದ ಭಕ್ತರಿಂದ ಹೊರೆಕಾಣಿಕೆ ಈಶ್ವಾರ್ಪಣೆ ನಡೆದು ಮಧ್ಯಾಹ್ನ 12.30ಕ್ಕೆ ಮಹಾಪೂಜೆ ನಂತರ ಭಕ್ತಾದಿಗಳಿಗೆ ಅನ್ನಸಂತರ್ಪಣೆ ನಡೆಯಲಿದೆ. ಅದೇ ದಿನ ರಾತ್ರಿ 7.30ಕ್ಕೆ ದೀಪಾಲಂಕಾರ ನಡೆದು ದೇವಾಲಯದ ಅನ್ನಪೂರ್ಣ ಕಲಾಮಂದಿರದಲ್ಲಿ ಸಾಂಸ್ಕøತಿಕ ಕಾರ್ಯಕ್ರಮಗಳು ಜರುಗಲಿದ್ದು, ರಾತ್ರಿ 8ಕ್ಕೆ ರುದ್ರಾಭಿಷೇಕ, 9.30ರಿಂದ ರಂಗ ಪೂಜೆ ನಂತರ ಮಹಾಶಿವರಾತ್ರಿ ಅಂಗವಾಗಿ ಜಾಗರಣೆ ಕಾರ್ಯಕ್ರಮ ಆಯೋಜಿಸಲಾಗಿದೆ.
ತಾ. 22 ರಂದು ನೈರ್ಮಲ್ಯ ಪೂಜೆ, ನವಕಲಶ ಪೂಜೆ, ರುದ್ರಾಭಿಷೇಕ ನಡೆಯಲಿದ್ದು, ಬೆಳಗ್ಗೆ 11 ಗಂಟೆಗೆ ಪುತ್ತೂರಿನ ಖ್ಯಾತ ವಾಗ್ಮಿ ಕೃಷ್ಣ ಉಪಾಧ್ಯಾಯ ಅವರಿಂದ ಧಾರ್ಮಿಕ ಉಪನ್ಯಾಸ ನಡೆಯಲಿದೆ. ಮಧ್ಯಾಹ್ನ 12.30ಕ್ಕೆ ಮಹಾಪೂಜೆ ನಡೆದು ಅನ್ನಸಂತರ್ಪಣೆ ಆಯೋಜಿಸಲಾಗಿದೆ.