ಸಿದ್ದಾಪುರ, ಫೆ. 13: ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ಅಮ್ಮತ್ತಿ ಹೋಬಳಿಯ ವಾರ್ಷಿಕೋತ್ಸವ ಹಾಗೂ ಸಂವಾದ ಕಾರ್ಯಕ್ರಮ ಸಿದ್ದಾಪುರದಲ್ಲಿ ನಡೆಯಿತು. ಸಿದ್ದಾಪುರದ ಸ್ವರ್ಣಮಾಲಾ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮವನ್ನು ಕರ್ನಾಟಕ ರಾಜ್ಯ ರೈತ ಸಂಘ ಹಸಿರು ಸೇನೆಯ ಜಿಲ್ಲಾಧ್ಯಕ್ಷ ಕಾಡ್ಯಮಾಡ ಮನು ಸೋಮಯ್ಯ ಹಾಗೂ ಖಜಾಂಚಿ ಸಬಿತಾ ಭೀಮಯ್ಯ ಗಿಡಗಳಿಗೆ ನೀರೆಯುವ ಮೂಲಕ ಉದ್ಘಾಟಿಸಿದರು.
ನಂತರ ನಡೆದ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅಮ್ಮತ್ತಿ ಹೋಬಳಿ ರೈತ ಸಂಘ ಹಾಗೂ ಹಸಿರು ಸೇನೆಯ ಸಂಚಾಲಕ ಮಂಡೇಪಂಡ ಪ್ರವೀಣ್ ಬೋಪಣ್ಣ ಕಾಡಾನೆಗಳ ಹಾವಳಿಯಿಂದಾಗಿ ತೊಂದರೆಗೆ ಸಿಲುಕಿರುವ ರೈತರಿಗೆ ನ್ಯಾಯ ಸಿಗುವ ಉದ್ದೇಶದಿಂದ ಹಾಗೂ ರೈತರ ಸಮಸ್ಯೆಗಳಿಗೆ ಸ್ಪಂದಿಸುವ ನಿಟ್ಟಿನಲ್ಲಿ ಸಿದ್ದಾಪುರದಲ್ಲಿ ರೈತ ಸಂಘವನ್ನು ಪ್ರಾರಂಭಿಸಲಾಯಿತು ಎಂದರು.
ಕನಾಟಕ ರಾಜ್ಯ ರೈತ ಸಂಘದ ಜಿಲ್ಲಾಧ್ಯಕ್ಷ ಮನು ಸೋಮಯ್ಯ ಮಾತನಾಡಿ ರೈತ ಸಂಘ ಕೊಡಗು ಜಿಲ್ಲೆಯಲ್ಲಿ ಅಸ್ತಿತ್ವಕ್ಕೆ ಬಂದ ನಂತರ ರೈತರ ಸಾಕಷ್ಟು ಸಮಸ್ಯೆಗಳಿಗೆ ಹೋರಾಟ ಮಾಡಿದೆ. ಕಾಡಾನೆ ದಾಳಿಗೆ ಸಿಲುಕಿ ಮೃತಪಟ್ಟವರ ಕುಟುಂಬಕ್ಕೆ ರೂ. 25 ಲಕ್ಷ ಪರಿಹಾರ ನಿಡಬೇಕೆಂದು ಸಂಘಟನೆಯು ಒತ್ತಾಯಿಸುತ್ತಾ ಬಂದಿದ್ದು, ಇತ್ತೀಚೆಗೆ ಮಾಲ್ದಾರೆಯಲ್ಲಿ ಕಾಡಾನೆ ದಾಳಿಗೆ ಸಿಲುಕಿ ಮೃತಪಟ್ಟ ಪೆಮ್ಮಯ್ಯ ಕುಟುಂಬಕ್ಕೆ ರೂ. 5ಲಕ್ಷ ಪರಿಹಾರವನ್ನು ಅರಣ್ಯ ಇಲಾಖೆ ನೀಡಿದೆ. ಸರ್ಕಾರ ಘೋಷಣೆ ಮಾಡಿರುವ 7.50 ಲಕ್ಷದ ಪ್ರಕಾರ ಇನ್ನುಳಿದ ರೂ. 2.50 ಲಕ್ಷ ನೀಡಬೇಕೆಂದು ಅರಣ್ಯ ಇಲಾಖಾಧಿಕಾರಿಗಳ ಗಮನ ಸೆಳೆಯಲಾಗಿದೆ ಎಂದರು. ರೈತ ಸಂಘದ ಸದಸ್ಯರುಗಳು ಸರ್ಕಾರಿ ಇಲಾಖಾಧಿಕಾರಿಗಳ ಬಳಿ ಸೌಜನ್ಯದಿಂದ ವರ್ತಿಸಬೇಕು. ರೈತರ ಸಮಸ್ಯೆಗಳಿಗೆ ಒಗ್ಗಟ್ಟಾಗಿ ಹೋರಾಟದ ಮೂಲಕ ಪರಿಹಾರವನ್ನು ಕಂಡುಕೊಳ್ಳಬೇಕೆಂದು ಮನು ಸೋಮಯ್ಯ ಕರೆ ನೀಡಿದರು. ರಾಜ್ಯ ರೈತ ಸಂಘದ ಜಿಲ್ಲಾ ಸಂಚಾಲಕ ಸುಭಾಷ್ ಸುಬ್ಬಯ್ಯ ಮಾತನಾಡಿ, ರೈತರು ತಮ್ಮಲ್ಲಿ ಸಮಸ್ಯೆಗಳನ್ನು ಸ್ಥಳೀಯ ಸಂಘದ ಮೂಲಕ ಬಗೆಹರಿಸಿಕೊಳ್ಳಬೇಕು. ಏಕಾಏಕಿ ರಾಜ್ಯ ಮುಖಂಡರಿಗೆ ಕರೆ ಮಾಡಿ ದೂರು ನೀಡುವುದು ಸರಿಯಲ್ಲ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ರೈತ ಸಂಘದ ಕಾನೂನು ಸಲಹೆಗಾರರಾದ ವಕೀಲ ಕೆ.ಬಿ. ಹೇಮಚಂದ್ರ ಮಾತನಾಡಿ ಸಂಘಟನೆಗೆ ಸದಸ್ಯರುಗಳ ಶಕ್ತಿ ಮುಖ್ಯ ಎಂದರು.
ಕರ್ನಾಟಕ ರಾಜ್ಯ ರೈತ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸುಜಯ್ ಬೋಪಯ್ಯ ಮಾತನಾಡಿ ರೈತ ಸಂಘದ ವತಿಯಿಂದ ಕಾಡಾನೆ ದಾಳಿಗೆ ಸಿಲುಕಿ ಮೃತಪಟ್ಟ ಕುಟುಂಬಕ್ಕೆ ಹೆಚ್ಚಿನ ಪರಿಹಾರ ನೀಡಬೇಕು ಸೇರಿದಂತೆ ಇನ್ನಿತರ ಬೇಡಿಕೆಗಳನ್ನು ಈಡೇರಿಸುವಂತೆ ಸರ್ಕಾರಕ್ಕೆ ಮನವಿ ಪತ್ರ ನೀಡಲಾಗಿದೆ ಎಂದು ಮಾಹಿತಿ ನೀಡಿದರು.
ಸಭೆಯಲ್ಲಿ ಅಮ್ಮತ್ತಿ ಹೋಬಳಿಯ ಕರ್ನಾಟಕ ರೈತ ಸಂಘದ ಗೌರವಾಧ್ಯಕ್ಷ ಎನ್.ಪಿ. ಮಾಚಯ್ಯ, ಸಂಘಟನೆಯ ಪದಾಧಿಕಾರಿಗಳಾದ ಅಲೇಮಾಡ ಮಂಜು, ಹರಿಸೋಮಯ್ಯ, ಅರ್ಜುನ್ ತಿಮ್ಮಯ್ಯ, ರಾಜನ್, ಎ.ಬಿ. ಅಪ್ಪಣ್ಣ, ಕೆ.ಡಿ. ನಾಣಯ್ಯ ಇನ್ನಿತರರು ಹಾಜರಿದ್ದರು. ಕುಕ್ಕುನೂರು ಸುನಿಲ್ ಸ್ವಾಗತಿಸಿ ವಂದಿಸಿದರು. ಸುಜಯ್ ಬೋಪಯ್ಯ ನಿರೂಪಿಸಿದರು. ಮೃತಪಟ್ಟ ಸದಸ್ಯರಿಗೆ ಸಂತಾಪ ಸೂಚಿಸಲಾಯಿತು.