ಗೋಣಿಕೊಪ್ಪ ವರದಿ, ಫೆ. 13: ಬೆಳೆಗೆ ಬೆಂಬಲ ಬೆಲೆಗೆ ಒತ್ತಾಯಿಸಿ ಕೊಡವ ರೈಡರ್ಸ್ ಕ್ಲಬ್ ಹಾಗೂ ರೈತ ಸಂಘದ ವತಿಯಿಂದ ತಾ. 15 ರಂದು ಆಯೋಜಿಸಿರುವ ರೈತರನ್ನು ಉಳಿಸಿ ಎಂಬ ಬೆಂಗಳೂರು-ಕೊಡಗು ವಾಹನ ಜಾಥಾಕ್ಕೆ ಅಖಿಲ ಕೊಡವ ಸಮಾಜ ಮತ್ತು ಕೊಡಗು ಸಾರ್ವಜನಿಕ ಹಿತ ರಕ್ಷಣಾ ಸಮಿತಿ ಬೆಂಬಲ ಸೂಚಿಸಿದೆ.
ಅಖಿಲ ಕೊಡವ ಸಮಾಜ ಉಪಾಧ್ಯಕ್ಷ ಅಜ್ಜಿಕುಟ್ಟೀರ ಸುಬ್ರಮಣಿ ಹಾಗೂ ಕೊಡಗು ಸಾರ್ವಜನಿಕ ಹಿತರಕ್ಷಣಾ ಸಮಿತಿ ಅಧ್ಯಕ್ಷ ಅಜ್ಜಮಾಡ ಕಟ್ಟಿ ಮಂದಯ್ಯ ಹೇಳಿಕೆ ಮೂಲಕ ಬೆಂಬಲ ಸೂಚಿಸಿದ್ದು, ಸರ್ಕಾರ ಈ ಬಗ್ಗೆ ಗಮನ ಹರಿಸಬೇಕು ಎಂದು ಒತ್ತಾಯಿಸಿದ್ದಾರೆ.
ಜಿಲ್ಲೆಯ ಪ್ರಮುಖ ಬೆಳೆಗಳಾದ ಭತ್ತ, ಕಾಳುಮೆಣಸು, ಕಾಫಿಗೆ ಸರ್ಕಾರ ಬೆಂಬಲ ಬೆಲೆ ನೀಡಲು ವಿಶೇಷವಾಗಿ ಯೋಜನೆ ರೂಪಿಸಬೇಕು. ಕೃಷಿ ಪ್ರಧಾನ ಕೊಡಗು ಜಿಲ್ಲೆಯನ್ನು ಕೃಷಿಯಲ್ಲಿಯೇ ಉಳಿಸಿಕೊಳ್ಳಲು ಸರ್ಕಾರದ ಪ್ರೋತ್ಸಾಹ ಅವಶ್ಯ ಎಂದು ಇವರುಗಳು ತಿಳಿಸಿದ್ದಾರೆ.