ಸೋಮವಾರಪೇಟೆ, ಫೆ. 12: ಹೇಮಾವತಿ ಹಿನ್ನೀರು ಮುಳುಗಡೆ ಸಂತ್ರಸ್ತರು ನೆಲೆಸಿರುವ ತಾಲೂಕಿನ 3 ಗ್ರಾಮ ಪಂಚಾಯಿತಿಗಳಿಗೆ ಹೇಮಾವತಿ ನೀರಾವರಿ ನಿಗಮದಿಂದ 23 ಕೋಟಿ ಅನುದಾನಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದ್ದು, ಸದ್ಯದಲ್ಲಿಯೇ ಸರ್ಕಾರದಿಂದ ಅನುದಾನ ಬಿಡುಗಡೆಯಾಗಲಿದೆ ಎಂದು ಮಡಿಕೇರಿ ವಿಧಾನಸಭಾ ಕ್ಷೇತ್ರದ ಶಾಸಕ ಎಂ.ಪಿ. ಅಪ್ಪಚ್ಚುರಂಜನ್ ತಿಳಿಸಿದರು.

ತಾಲೂಕಿನ ಬ್ಯಾಡಗೊಟ್ಟ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಕೈಗೊಳ್ಳಲು ಉದ್ದೇಶಿಸಲಾಗಿರುವ ವಿವಿಧ ರಸ್ತೆ ಕಾಮಗಾರಿಗಳಿಗೆ ಚಾಲನೆ ನೀಡಿ ಮಾತನಾಡಿದ ಅವರು, ಹೇಮಾವತಿ ನೀರಾವರಿ ನಿಗಮದಿಂದ ತಾಲೂಕಿನ ಕೊಡ್ಲಿಪೇಟೆ, ಬ್ಯಾಡಗೊಟ್ಟ ಹಾಗೂ ಬೆಸೂರು ಗ್ರಾ.ಪಂ.ಗಳಲ್ಲಿ ಮೂಲಭೂತ ಸೌಲಭ್ಯ ಒದಗಿಸಲು ಅನುದಾನ ಬಿಡುಗಡೆಯಾಗಲಿದೆ ಎಂದರು.

ಈ ಮೂರು ಗ್ರಾ.ಪಂ.ಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಮುಳುಗಡೆ ಸಂತ್ರಸ್ತರು ನೆಲೆಸಿದ್ದು, ಈಗಾಗಲೇ ಅಂತಹ ಪ್ರದೇಶಗಳನ್ನು ಖುದ್ದು ವೀಕ್ಷಣೆ ಮಾಡಿ, ಡಾಂಬರು ಮತ್ತು ಕಾಂಕ್ರಿಟ್ ರಸ್ತೆ, ಮೋರಿ, ದೇವಾಲಯ, ಪರಿಶಿಷ್ಟ ಜಾತಿ-ಪಂಗಡದ ಕಾಲೋನಿಗಳ ಅಭಿವೃದ್ಧಿಗೆ ಸಂಬಂಧಿಸಿದಂತೆ ಕ್ರಿಯಾಯೋಜನೆ ತಯಾರಿಸಿ ಸರ್ಕಾರಕ್ಕೆ ಸಲ್ಲಿಸಲಾಗಿದೆ. ಅನುದಾನ ಬಿಡುಗಡೆಯಾದ ತಕ್ಷಣ ಕಾಮಗಾರಿಗಳಿಗೆ ಚಾಲನೆ ನೀಡಲಾಗುವದು ಎಂದು ಅಪ್ಪಚ್ಚು ರಂಜನ್ ತಿಳಿಸಿದರು.

ನಂದೀಪುರ-ಈಚಲಪುರ ರಸ್ತೆ ದುಸ್ಥಿತಿಯಲ್ಲಿದ್ದು, ನೂತನ ರಸ್ತೆ ನಿರ್ಮಿಸುವಂತೆ ಗ್ರಾಮಸ್ಥ ತಮ್ಮಣ್ಣಿ ಅವರು ಮನವಿ ಮಾಡಿದ ಸಂದರ್ಭ, ಶಾಸಕರ ನಿಧಿಯಿಂದ 5ಲಕ್ಷ ಅನುದಾನ ಒದಗಿಸುವದಾಗಿ ತಿಳಿಸಿದರು. ಕೊಡ್ಲಿಪೇಟೆಯಿಂದ ಕಲ್ಲಳ್ಳಿ ರಸ್ತೆಯಲ್ಲಿರುವ ಕೆರೆಯ ಒತ್ತುವರಿ ತೆರವುಗೊಳಿಸಿ, ಕೆರೆಯ ಏರಿಯ ಮೇಲೆ ವಾಯು ವಿಹಾರಕ್ಕೆ ‘ಫುಟ್‍ಪಾತ್’ ನಿರ್ಮಿಸಲು ಕ್ರಮ ಕೈಗೊಳ್ಳುವಂತೆ ಸ್ಥಳೀಯರು ಮನವಿ ಮಾಡಿದರು.

ಲಿಖಿತ ಮನವಿ ಸಲ್ಲಿಕೆಯಾದರೆ ಅದರಂತೆ ಕ್ರಮ ವಹಿಸಲಾಗುವದು. ಕೆರೆಯ ಏರಿ ದುರಸ್ತಿ, ಉದ್ಯಾನವನ, ಫುಟ್‍ಪಾತ್ ನಿರ್ಮಾಣಕ್ಕೆ ಅಗತ್ಯವಾಗಿರುವ 1 ಕೋಟಿ ಅನುದಾನವನ್ನು ಸರ್ಕಾರದಿಂದ ಒದಗಿಸಲಾಗುವದು ಎಂದು ರಂಜನ್ ಭರವಸೆ ನೀಡಿದರು.

ಇದೇ ಸಂದರ್ಭ ವಿಶೇಷ ಪ್ಯಾಕೇಜ್ ಮತ್ತು ಶಾಸಕರ ವಿಶೇಷ ಅನುದಾನದಡಿ ರೂ. 5ಲಕ್ಷ ವೆಚ್ಚದಲ್ಲಿ ನಿರ್ಮಿಸಲು ಉದ್ದೇಶಿಸಲಾಗಿರುವ ಬ್ಯಾಡಗೊಟ್ಟ ಗ್ರಾಮದ ಮುಖ್ಯರಸ್ತೆ ದುರಸ್ತಿ, ಮಳೆಹಾನಿಯಿಂದ ಹಾನಿಗೀಡಾಗಿರುವ ಬೆಂಬಳೂರು ಶಿವರಳ್ಳಿ ರಸ್ತೆ ಹಾಗೂ ತಳಗೂರು ರಸ್ತೆ ದುರಸ್ತಿ (ರೂ.8 ಲಕ್ಷ), ರೂ.10 ಲಕ್ಷ ವೆಚ್ಚದ ಬ್ಯಾಡಗೊಟ್ಟ ಊರೊಳಗಿನ ರಸ್ತೆ ದುರಸ್ತಿ ಕಾಮಗಾರಿಗೆ ಶಾಸಕರು ಭೂಮಿಪೂಜೆ ನೆರವೇರಿಸಿದರು.

ಈ ಸಂದರ್ಭ ತಾ.ಪಂ. ಅಧ್ಯಕ್ಷೆ ಪುಷ್ಪಾ ರಾಜೇಶ್, ಸದಸ್ಯ ಕುಶಾಲಪ್ಪ, ಜಿ.ಪಂ. ಸದಸ್ಯ ಪುಟ್ಟರಾಜು, ಗ್ರಾ.ಪಂ. ಅಧ್ಯಕ್ಷೆ ನಿರ್ಮಲ, ಉಪಾಧ್ಯಕ್ಷ ಅಹಮ್ಮದ್, ಹಂಡ್ಲಿ ಗ್ರಾ.ಪಂ. ಅಧ್ಯಕ್ಷ ಸಂದೀಪ್, ಬಿ.ಜೆ.ಪಿ. ತಾಲೂಕು ಅಧ್ಯಕ್ಷ ಮನುಕುಮಾರ್ ರೈ, ಪ್ರಮುಖರಾದ ಪ್ರಸಾದ್ ಪಟೇಲ್, ನಾಗೇಶ್, ನಾಗರಾಜ್, ಕೊಮಾರಪ್ಪ, ಲಿಂಗರಾಜು, ಸಂದೀಪ, ಮೋಹನ್, ಅಭಿಯಂತರರಾದ ಟಿ.ಪಿ. ವೀರೇಂದ್ರ, ಸಲೀಂ ಸೇರಿದಂತೆ ಇತರರು ಉಪಸ್ಥಿತರಿದ್ದರು.